ಮೈಸೂರಲ್ಲಿ ಬೀದಿ ನಾಟಕ ತಂಡಗಳ ಒಕ್ಕೂಟದಿಂದ ಪ್ರತಿಭಟನೆ
ಮೈಸೂರು

ಮೈಸೂರಲ್ಲಿ ಬೀದಿ ನಾಟಕ ತಂಡಗಳ ಒಕ್ಕೂಟದಿಂದ ಪ್ರತಿಭಟನೆ

June 28, 2018
  • ಜಾರ್ಖಂಡ್‍ನಲ್ಲಿ ಬೀದಿ ನಾಟಕ ಕಲಾವಿದರ ಮೇಲಿನ ಅತ್ಯಾಚಾರಕ್ಕೆ ಖಂಡನೆ

ಮೈಸೂರು: ಜಾರ್ಖಂಡ್‍ನಲ್ಲಿ ಬೀದಿ ನಾಟಕ ಕಲಾವಿದೆಯರ ಮೇಲೆ ನಡೆದ ಅತ್ಯಾಚಾರ ಖಂಡಿಸಿ ಮೈಸೂರಿನ ಗಾಂಧಿ ವೃತ್ತದ ಗಾಂಧಿ ಪ್ರತಿಮೆ ಬಳಿ ರಾಜ್ಯ ಬೀದಿ ನಾಟಕ ತಂಡಗಳ ಒಕ್ಕೂಟದ ಕಲಾವಿದರು ಪ್ರತಿಭಟನೆ ನಡೆಸಿದರು.

ಮಾನವ ಕಳ್ಳಸಾಗಾಣೆ ಕುರಿತಂತೆ ಜನಜಾಗೃತಿ ಮೂಡಿಸಲು ಎನ್‍ಜಿಓ ಸಂಘಟನೆಯೊಂದು ಜಾರ್ಖಂಡ್ ಜಿಲ್ಲೆಯ ಗ್ರಾಮವೊಂದರಲ್ಲಿ ಇತ್ತೀಚೆಗೆ ಬೀದಿ ನಾಟಕ ನಡೆಸುತ್ತಿದ್ದ ವೇಳೆ ಪಾತಾಳ ಗರಡಿ ಎಂಬ ಸಂಘಟನೆಯ ಕೆಲವರು ಬೀದಿ ನಾಟಕ ಪ್ರದರ್ಶಿಸುತ್ತಿದ್ದ ಐವರು ಮಹಿಳಾ ಕಲಾವಿದರನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಇದನ್ನು ಬಹಿರಂಗಪಡಿಸಿದರೆ ವಿಡಿಯೋ ಬಿಡುಗಡೆ ಮಾಡುವುದಾಗಿ ಕೊಲೆ ಬೆದರಿಕೆ ಹಾಕಿದ್ದಾರೆ. ಅನ್ಯಾಯ, ಭ್ರಷ್ಟಾಚಾರ, ಅತ್ಯಾಚಾರಗಳನ್ನು ಖಂಡಿಸಿ ಬೀದಿ ನಾಟಕದ ಮೂಲಕ ಜನಜಾಗೃತಿ ಮೂಡಿಸುವ ಪ್ರಗತಿಪರರು, ಕಲಾವಿದರಿಗೇ ಈ ಗತಿಯಾದರೆ ಸಾಮಾನ್ಯ ಜನರ ಪಾಡೇನು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಬೀದಿ ನಾಟಕ ಮಹಿಳಾ ಕಲಾವಿದರ ಮೇಲೆ ಅತ್ಯಾಚಾರ ನಡೆಸಿದ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ, ಶಿಕ್ಷೆಗೆ ಗುರಿಪಡಿಸಬೇಕು. ಸಂತ್ರಸ್ಥ ಮಹಿಳೆಯರಿಗೆ ಸೂಕ್ತ ಪರಿಹಾರ ನೀಡಿ ರಕ್ಷಣೆ ಒದಗಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಮುನ್ನೆಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ನಟ ಮಂಡ್ಯ ರಮೇಶ್, ಕಲಾವಿದ ಮೈಮ್ ರಮೇಶ್ ಇನ್ನಿತರರು ಪಾಲ್ಗೊಂಡಿದ್ದರು.

Translate »