ಬೆಂಗಳೂರು, ಡಿ.1- ಬಿಪಿಎಲ್ ಕುಟುಂಬಗಳಿಗೆ ಉಚಿತ ಕೊರೊನಾ ಲಸಿಕೆ ನೀಡಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.
ವಿಶ್ವ ಏಡ್ಸ್ ದಿನದ ಅಂಗವಾಗಿ ಬೆಂಗಳೂರು ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ ಅವರು, 1980ರಿಂದ ವಿಶ್ವದಲ್ಲಿ ಏಡ್ಸ್ ರೋಗಕ್ಕೆ ಸುಮಾರು 18 ಲಕ್ಷ ಜನರು ಸಾವೀಗೀಡಾಗಿದ್ದಾರೆ. ಏಡ್ಸ್ ರೋಗಕ್ಕೆ ಇದುವರೆಗೂ ಔಷಧಿ ಕಂಡು ಹಿಡಿದಿಲ್ಲ. ಆದರೆ, ಏಡ್ಸ್ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತಿರುವುದರಿಂದ ಏಡ್ಸ್ ರೋಗ ಹರಡುವಿಕೆ ಪ್ರಮಾಣ ಕಡಿಮೆಯಾಗಿದೆ ಎಂದರು. ಈಗ ವಿಶ್ವದಲ್ಲಿ ಕೊರೊನಾ ಸೋಂಕು ವೇಗವಾಗಿ ಹರಡುತ್ತಿದೆ. ಭಾರತದಲ್ಲಿ ಕೊರೊನಾ ನಿಯಂತ್ರಣ ಯಶಸ್ವಿಯಾಗಿ ನಡೆಯುತ್ತಿದೆ. ಕೊರೊನಾ ಸೋಂಕಿಗೆ ಲಸಿಕೆ ಕಂಡು ಹಿಡಿಯಲಾಗುತ್ತಿದ್ದು, ಮೊದಲ ಹಂತದಲ್ಲಿ ಸುಮಾರು 10 ಕೋಟಿ ಜನರಿಗೆ ಇದರ ಪ್ರಯೋಜನ ದೊರೆಯಲಿದೆ. ಸ್ವತಃ ಪ್ರಧಾನಿ ಮೋದಿ ಇದರ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದು, ದೇಶದ ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ಲಸಿಕೆ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು. ಯಾವುದೇ ವ್ಯಕ್ತಿ ಜೀವನದಲ್ಲಿ ಯಾವುದೇ ರೋಗವನ್ನು ಆಹ್ವಾನಿಸುವುದಿಲ್ಲ. ಅವರು ಮಾಡದೇ ಇರುವ ತಪ್ಪಿಗೂ ರೋಗಕ್ಕೆ ತುತ್ತಾಗುವ ಸಾಧ್ಯತೆ ಇದೆ ಎಂದರು.