ಅತ್ಯಾಚಾರ ಆರೋಪದಿಂದ  ಮುಕ್ತವಾದ ಮಾಜಿ ಸಚಿವ  ರಮೇಶ್ ಜಾರಕಿಹೊಳಿ
News

ಅತ್ಯಾಚಾರ ಆರೋಪದಿಂದ ಮುಕ್ತವಾದ ಮಾಜಿ ಸಚಿವ ರಮೇಶ್ ಜಾರಕಿಹೊಳಿ

February 5, 2022

ಬೆಂಗಳೂರು, ಫೆ.4- ಅತ್ಯಾಚಾರದ ಆರೋಪದ ಮೇರೆಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ದಾಖಲಾ ಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ(ಎಸ್‍ಐಟಿ) ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದೆ.

ಈ ಸಂಬಂಧ ದೂರುದಾರ ಯುವತಿಗೆ ಎಸ್‍ಐಟಿ ನೋಟೀಸ್ ನೀಡಿದ್ದು, ಸಾಕ್ಷ್ಯಾಧಾರಗಳ ಕೊರತೆ ಯಿಂದ ನೀವು ದಾಖಲಿಸಿದ್ದ ದೂರಿಗೆ `ಬಿ’ ರಿಪೋರ್ಟ್ ಸಲ್ಲಿಸಲಾಗಿದೆ. ನೀವು ಇಚ್ಛಿಸಿದಲ್ಲಿ ಖಾಸಗಿ ಪ್ರಕರಣ ದಾಖಲಿಸಿಕೊಳ್ಳಬಹುದು ಎಂದು ನೋಟೀಸ್‍ನಲ್ಲಿ ತಿಳಿಸಲಾಗಿದೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ದೂರುದಾರ ಯುವತಿ ಸಾಕಷ್ಟು ದಿನಗಳಿಂದ ಪರಿಚಯಸ್ಥರಾಗಿದ್ದರು. ಇವರಿಬ್ಬರೂ ಸಹಮತ ಲೈಂಗಿಕ ಸಂಪರ್ಕ ಹೊಂದಿದ್ದಾರೆ. ಯುವತಿ ಆರೋಪ ಮಾಡಿದಂತೆ ಯಾವುದೇ ಬಲಾತ್ಕಾರ ನಡೆದಿಲ್ಲ. ಮಾಜಿ ಸಚಿವರು ಯುವತಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿ ದ್ದಾರೆ ಎಂಬುದಕ್ಕೆ ಯಾವುದೇ ರೀತಿಯ ಪ್ರತ್ಯಕ್ಷ ಹಾಗೂ ಪರೋಕ್ಷ ಸಾಕ್ಷ್ಯಗಳಿಲ್ಲ. ಅಲ್ಲದೆ ತಾಂತ್ರಿಕ ಸಾಕ್ಷ್ಯಗಳು ಕೂಡ ಇಲ್ಲ ಎಂದು ಬಿ ರಿಪೋರ್ಟ್‍ನಲ್ಲಿ ಹೇಳಲಾಗಿದೆ. ಇವರಿಬ್ಬರೂ ನಿರಂತರವಾಗಿ ದೂರವಾಣಿ ಮೂಲಕ ತುಂಬಾ ಸಲುಗೆಯಿಂದ ಮಾತನಾಡಿದ್ದಾರೆ. ಹಾಗೆ ಮಾತನಾಡು ವಾಗ ಇಬ್ಬರ ಸಂಭಾಷಣೆಯಲ್ಲೂ ಲೈಂಗಿಕ ಪ್ರಚೋದನೆಯ ಮಾತುಗಳು ಇವೆ. ಒಬ್ಬರ ಮೇಲೆ ಒಬ್ಬರು ಒತ್ತಡ ಹೇರಿದ್ದಾರೆ ಎಂಬುದಕ್ಕೆ ಯಾವುದೇ ರೀತಿಯ ಸಾಕ್ಷ್ಯಗಳಿಲ್ಲ. ನ್ಯಾಯಾಧೀಶರ ಮುಂದೆ ಯುವತಿ ನೀಡಿದ ಹೇಳಿಕೆಗೂ, ಪೊಲೀಸರ ಮುಂದೆ ನೀಡಿದ ಹೇಳಿಕೆಗೂ ವ್ಯತ್ಯಾಸಗಳಿವೆ. ಆರೋಪಿ ಮತ್ತು ಸಂತ್ರಸ್ತೆಯ ಮನೆಗಳನ್ನು ಮಹಜರು ಮಾಡಿದಾಗ ಯಾವುದೇ ರೀತಿಯ ಪೂರಕ ಸಾಕ್ಷ್ಯಗಳು ಲಭ್ಯವಾಗಿಲ್ಲ. ಸಂತ್ರಸ್ತ ಯುವತಿ ಹೇಳಿದಂತೆ ಅಪಾರ್ಟ್‍ಮೆಂಟ್‍ನಲ್ಲಿ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಕುರುಹುಗಳು ಲಭ್ಯವಾಗಿಲ್ಲ. ವೈರಲ್ ಆಗಿರುವ ವೀಡಿಯೋ ಎಡಿಟೆಡ್ ವರ್ಷನ್ ವೀಡಿಯೋ ಆಗಿದೆ. ವಿಧಿ-ವಿಜ್ಞಾನ ಪ್ರಯೋಗಾಲಯವೂ ವೀಡಿಯೋ ತುಣುಕುಗಳಿಗೆ ಸ್ಪಷ್ಟವಾದ ವರದಿಯನ್ನು ನೀಡಿಲ್ಲ ಎಂದು ಪೊಲೀಸರು ಸಲ್ಲಿಸಿದ ವರದಿಯಲ್ಲಿ ಹೇಳಲಾಗಿದೆ.

ಯುವತಿಯೇ ಉದ್ದೇಶಪೂರ್ವಕವಾಗಿ ವೀಡಿಯೋ ಮಾಡಿದ್ದಾಳೆ ಎಂಬ ಅನುಮಾನವಿದೆ. ಆಕೆ ಎರಡು ಬಾರಿ ವೀಡಿಯೋ ಮಾಡಿದ್ದಾಳೆ. ಒಮ್ಮೆ ಕಪ್ಪು ಬಣ್ಣದ ಟಿ ಶರ್ಟ್ ಮತ್ತೊಮ್ಮೆ ಕಾಫಿ ಬಣ್ಣದ ಟಿ ಶರ್ಟ್ ಧರಿಸಿದ್ದಾಳೆ. ಆಕೆ ಎರಡು ಬಾರಿ ವೀಡಿಯೋ ರೆಕಾರ್ಡ್ ಮಾಡಿರುವುದಕ್ಕೆ ಬೇರೊಂದು ಉದ್ದೇಶ ಇರಬಹುದು ಎಂದು ಅನಿಸುತ್ತಿದೆ. ವೀಡಿಯೋ ರೆಕಾರ್ಡಿಂಗ್‍ಗೆ ಯುವತಿ ಎರಡು ಕ್ಯಾಮರಾಗಳನ್ನು ಬಳಸಿದ್ದು, ಅದರಲ್ಲಿ ಒಂದು ವ್ಯಾನಿಟಿ ಬ್ಯಾಗ್‍ನಲ್ಲಿತ್ತು ಎಂಬುದು ಸ್ಪಷ್ಟವಾಗಿದೆ. ವ್ಯಾನಿಟಿ ಬ್ಯಾಗ್‍ನಲ್ಲಿದ್ದ ಕ್ಯಾಮರಾವನ್ನು ಬೇರೊಬ್ಬ ಯುವಕನ ಸಹಾಯದಿಂದ ಆಫ್ ಮಾಡಲಾಗಿದೆ. ಹಾಗೆ ಕ್ಯಾಮರಾ ಆಫ್ ಮಾಡುವಾಗ ಯುವತಿ ಪ್ರಕರಣದ ಶಂಕಿತ ಆರೋಪಿಯೊಬ್ಬನ ಹೆಸರನ್ನು ಉಲ್ಲೇಖಿಸಿದ್ದಾಳೆ. ಯುವತಿ ಉಲ್ಲೇಖಿಸಿರುವ ಶಂಕಿತ ಆರೋಪಿಯು ತನ್ನನ್ನು ಹೆದರಿಸುತ್ತಿದ್ದರು. ತನ್ನ ಮೊಬೈಲ್‍ಗೆ ಎರಡು ಬಾರಿ ವೀಡಿಯೋ ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಮಾಜಿ ಸಚಿವರು ಹೇಳಿದ್ದಾರೆ. ಅವರ ಹೇಳಿಕೆಗೆ ಪೂರಕವಾದ ಕೆಲವೊಂದು ಸಾಕ್ಷಿಗಳು ಸಿಕ್ಕಿವೆ. ಬೇರೊಂದು ಪ್ರಕರಣದ ಶಂಕಿತ ಆರೋಪಿಗಳು ಹಣವನ್ನು ಬ್ಲಾಕ್ ಅಂಡ್ ವೈಟ್ ಮಾಡಿರುವುದು ಸಾಬೀತಾಗಿದೆ. ರಮೇಶ್ ಜಾರಕಿಹೊಳಿ ಹಣ ನೀಡಿರುವುದಕ್ಕೂ ಶಂಕಿತ ಆರೋಪಿಗಳು ಹಣವನ್ನು ಬ್ಲಾಕ್ ಅಂಡ್ ವೈಟ್ ಮಾಡಿರುವುದಕ್ಕೂ ತಾಳೆಯಾಗುತ್ತಿದೆ. ಅಲ್ಲದೆ ಯುವತಿಯ ಮೇಲೆ ಒಂದಷ್ಟು ಗಂಭೀರ ಆರೋಪಗಳು ಕೂಡ ಇವೆ. ಈ ಆರೋಪಗಳಿಗೆ ಪ್ರಬಲ ಸಾಕ್ಷ್ಯ ಇಲ್ಲದೆ ಇದ್ದರೂ ಅನುಮಾನ ಹೆಚ್ಚಿದೆ ಎಂದು ಬಿ ರಿಪೋರ್ಟ್‍ನಲ್ಲಿ ತಿಳಿಸಿದ್ದು, ಮಾಜಿ ಸಚಿವರು ಮತ್ತು ಯುವತಿ ಪ್ರಾಪ್ತರಾಗಿರುವುದರಿಂದ ಸಮ್ಮತಿಯ ಮೇಲೆ ಲೈಂಗಿಕ ಸಂಪರ್ಕವಾಗಿದೆ. ಒತ್ತಾಯಪೂರ್ವಕವಾಗಿ ಅತ್ಯಾಚಾರ ನಡೆದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಎಸ್‍ಐಟಿ ಸಲ್ಲಿಸಿರುವ ಬಿ ರಿಪೋರ್ಟ್‍ನಲ್ಲಿ ತಿಳಿಸಲಾಗಿದೆ.

Translate »