ಹಲವು ಹೋರಾಟಗಾರರು ಪೊಲೀಸ್ ವಶಕ್ಕೆ
ಮೈಸೂರು

ಹಲವು ಹೋರಾಟಗಾರರು ಪೊಲೀಸ್ ವಶಕ್ಕೆ

February 5, 2022

ಮೈಸೂರು, ಫೆ.4(ಆರ್‍ಕೆಬಿ)- ಎನ್‍ಟಿಎಂ ಶಾಲೆ ಸ್ಥಳಾಂತರ ವಿರೋಧಿಸಿ ಶಾಲೆಯ ಗೇಟಿನ ಮುಂದೆ ಧರಣಿ ಕುಳಿತ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ನಗರ ಪಾಲಿಕೆ ಸದಸ್ಯರಾದ ಶೋಭಾ ಸುನೀಲ್, ಜೆ.ಗೋಪಿ ಸೇರಿದಂತೆ 8 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ಶುಕ್ರವಾರ ನಡೆಯಿತು.
ಶಾಲೆಯನ್ನು ಸ್ಥಳಾಂತರ ಗೊಳಿಸಿದ್ದನ್ನು ವಿರೋಧಿಸಿ ಮಾಜಿ ಶಾಸಕ ಎಂ.ಕೆ.ಸೋಮ ಶೇಖರ್ ನೇತೃತ್ವದಲ್ಲಿ ಬೀಗ ಹಾಕಲಾಗಿದ್ದ ಶಾಲೆಯ ಪ್ರವೇಶ ದ್ವಾರದಲ್ಲಿ ಸರ್ಕಾ ರದ ವಿರುದ್ಧ ಘೋಷಣೆ ಕೂಗಿದರು. ಬ್ಯಾರಿಕೇಡ್ ಒಳಗೆ ಧರಣಿ ಕೂರುವುದಾಗಿ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಪೊಲೀಸರು ಸೋಮಶೇಖರ್, ಪಾಲಿಕೆ ಸದಸ್ಯೆ ಶೋಭಾ ಸುನೀಲ್ ಅವರಿಗೆ ಧರಣಿ ಕೂರಲು ಅವಕಾಶ ಕೊಟ್ಟರು. ಈ ವೇಳೆ ಬ್ಯಾರಿಕೇಡ್ ತಳ್ಳಿ ಒಳಹೋಗಲು ಯತ್ನಿಸಿದ ಕಾಂಗ್ರೆಸ್ ಮುಖಂಡ ಡೈರಿ ವೆಂಕಟೇಶ್ ಇನ್ನಿತರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.

ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಪಾಲಿಕೆ ಸದಸ್ಯೆ ಶೋಭಾ ಸುನೀಲ್, ಜೆ.ಗೋಪಿ ಹಾಗೂ ಇನ್ನಿತರರನ್ನು ಪೊಲೀಸರು ವಶಕ್ಕೆ ತೆಗದುಕೊಂಡರು. ಮುಖಂಡರಾದ ನಾಸಿರ್, ಕೃಷ್ಣರಾಜ ಯುವ ಬಳಗದ ಅಧ್ಯಕ್ ನವೀನ್ ಎಂ. ಕೆಂಪಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ್, ರೆಹಮತ್ ಉಲ್ಲಾ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಮೈಸೂರು ಸಶಸ್ತ್ರ ಪೊಲೀಸ್ ಕವಾಯತು ಮೈದಾನಕ್ಕೆ ಕರೆದೊಯ್ದು, ಕೆಲ ಹೊತ್ತಿನ ಬಳಿಕ ಬಿಡುಗಡೆ ಮಾಡಿದರು.

Translate »