ಸುಜೀವ್ ಸಂಸ್ಥೆಯಿಂದ ಪಿಕೆಟಿಬಿ ರೋಗಿಗಳಿಗೆ ಹಣ್ಣು ವಿತರಣೆ
ಮೈಸೂರು

ಸುಜೀವ್ ಸಂಸ್ಥೆಯಿಂದ ಪಿಕೆಟಿಬಿ ರೋಗಿಗಳಿಗೆ ಹಣ್ಣು ವಿತರಣೆ

March 26, 2021

ಮೈಸೂರು,ಮಾ.25(ಪಿಎಂ)- ವಿಶ್ವ ಕ್ಷಯರೋಗ ದಿನದ ಅಂಗವಾಗಿ ಸುಜೀವ್ ಸಂಸ್ಥೆ ವತಿಯಿಂದ ಮೈಸೂರಿನ ಪಿಕೆಟಿಬಿ ಸ್ಯಾನಿಟೋರಿಯಂ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬುಧವಾರ ಹಣ್ಣು-ಹಂಪಲು ಹಾಗೂ ಬ್ರೆಡ್ ವಿತರಣೆ ಮಾಡಲಾಯಿತು.

ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿತರಣೆ ಮಾಡಿದ ಸುಜೀವ್ ಸಂಸ್ಥೆ ಅಧ್ಯಕ್ಷ ರಾಜಾರಾಂ ಇದೇ ವೇಳೆ ಮಾತನಾಡಿ, ಇಲ್ಲಿನ ರೋಗಿಗಳಿಗೆ ಸಂಸ್ಥೆಯಿಂದ ಸಾಧ್ಯವಾಗುವ ಎಲ್ಲಾ ಸಹಾಯ ನೀಡಲು ನಿರ್ಧರಿಸಲಾಗಿದೆ. ರೋಗದಿಂದ ಗುಣಮುಖ ವಾಗಲು ಪೌಷ್ಟಿಕ ಆಹಾರ ಸೇವನೆಯೂ ಮುಖ್ಯವಾಗುತ್ತದೆ. ಹೀಗಾಗಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗುವ ರೋಗಿಗಳಿಗೆ ತಿಂಗಳ ಮಟ್ಟಿಗೆ ಪೌಷ್ಟಿಕ ಆಹಾರಕ್ಕೆ ಅಗತ್ಯ ನೆರವು ನೀಡಲಾಗುವುದು ಎಂದು ತಿಳಿಸಿದರು.

ಇಂದು ವಿಶ್ವ ಕ್ಷಯ ದಿನ. ಈ ಕಾಯಿಲೆ ಬರಲು ಪೌಷ್ಟಿಕ ಆಹಾರದ ಕೊರತೆಯೂ ಒಂದು ಕಾರಣ. ಈಗ ಕೋವಿಡ್ ಬಂದಿರುವ ಕಾರಣಕ್ಕೆ ಕ್ಷಯದ ಬಗ್ಗೆ ಕಾಳಜಿ ಕಡಿಮೆಯಾದಂತಿದೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಯಾವುದೇ ಅನಾ ರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡದಂತೆ ಎಚ್ಚರ ವಹಿಸಬೇಕು. ಅನಾರೋಗ್ಯ ಸಮಸ್ಯೆ ಇರುವ ಬಡವರಿಗೆ ಕೈಲಾದ ಸಹಾಯ ಮಾಡಲು ಸಮಾಜ ಮುಂದಾಗಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ಸಂಸ್ಥೆ ಕಾರ್ಯದರ್ಶಿ ಕಾತ್ಯಾಯಿನಿ, ಸದಸ್ಯರಾದ ರೋಹಿತ್, ಸುನೀಲ್, ಮಹದೇವ್, ಆಸ್ಪತ್ರೆ ಸ್ಥಾನಿಕ ವೈದ್ಯಾಧಿಕಾರಿ ಡಾ.ಜಯಶೇಖರ್ ಮತ್ತಿತರರು ಹಾಜರಿದ್ದರು.

Translate »