ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾವ ತಿಮ್ಮಯ್ಯರ ಅಂತ್ಯಕ್ರಿಯೆ
ಮೈಸೂರು

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾವ ತಿಮ್ಮಯ್ಯರ ಅಂತ್ಯಕ್ರಿಯೆ

October 28, 2021

ಮೈಸೂರು, ಅ.27(ಪಿಎಂ)- ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಅನಾರೋಗ್ಯ ದಿಂದ ನಿಧನರಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವ ಕುಮಾರ್ ಅವರ ಮಾವ ಆರ್.ತಿಮ್ಮಯ್ಯ (ಪಾಪಣ್ಣ) ಅವರ ಅಂತ್ಯಕ್ರಿಯೆ ಬುಧವಾರ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನೆರವೇರಿತು.
ಅಂತ್ಯಕ್ರಿಯೆಯಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಅವರ ಕುಟುಂಬದವರು ಸೇರಿದಂತೆ ಮೃತರ ಸಂಬಂಧಿಕರು ಭಾಗವಹಿಸಿದ್ದರು. ಮೃತ ತಿಮ್ಮಯ್ಯ ನವರ ದ್ವಿತೀಯ ಪುತ್ರಿ ಉಷಾ ಅವರು ಡಿ.ಕೆ.ಶಿವ ಕುಮಾರ್ ಅವರ ಪತ್ನಿ. ಮೈಸೂರಿನ ಇಂದಿರಾನಗರ (ಇಟ್ಟಿಗೆಗೂಡು) ನಿವಾಸಿಯಾಗಿದ್ದ ತಿಮ್ಮಯ್ಯ, ಮೈಸೂರಿನ ಶ್ರೀ ರಾಜ ಸೋಪ್‍ನೆಟ್ ಕಾರ್ಖಾನೆ (ಎಸ್‍ಆರ್ ಬ್ರ್ಯಾಂಡ್) ಮಾಲೀಕರು.

ಮಂಗಳವಾರ ರಾತ್ರಿ ಸುಮಾರು 11.30ರ ವೇಳೆಗೆ ತಿಮ್ಮಯ್ಯನವರ ಪಾರ್ಥಿವ ಶರೀರವನ್ನು ಮೈಸೂರಿನ ಇಟ್ಟಿಗೆಗೂಡಿನ ಅವರ ನಿವಾಸಕ್ಕೆ ತರಲಾಗಿತ್ತು. ಬಳಿಕ ಇಂದು ಬೆಳಗ್ಗೆ 11.30ರವರೆಗೆ ಸಾರ್ವಜನಿಕರ ದರ್ಶ ನಕ್ಕೆ ಇರಿಸಲಾಗಿತ್ತು. ನಿನ್ನೆ ರಾತ್ರಿಯೇ ಮೈಸೂರಿಗೆ ಆಗಮಿಸಿದ್ದ ಡಿ.ಕೆ.ಶಿವಕುಮಾರ್, ಮೈಸೂರಿನ ಎಂಜಿ ರಸ್ತೆಯ ಖಾಸಗಿ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿದ್ದರು.

ಇಂದು ಬೆಳಗ್ಗೆ ತಮ್ಮ ಮಾವನವರ ಅಂತಿಮ ದರ್ಶನ ಪಡೆದ ಡಿ.ಕೆ.ಶಿವಕುಮಾರ್, ಅಂತ್ಯ ಸಂಸ್ಕಾರದ ವಿಧಿವಿಧಾನದಲ್ಲಿ ಭಾಗಿಯಾದರು. ಚಾಮುಂಡಿಬೆಟ್ಟದ ಪಾದದಲ್ಲಿನ ಮೃತರ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿತು. ತಿಮ್ಮಯ್ಯನವರ ಪತ್ನಿ ಲಕ್ಷ್ಮೀ, ಪುತ್ರಿಯರಾದ ಅನಿತಾ ಶಶಿಕುಮಾರ್, ಉಷಾ ಡಿ.ಕೆ.ಶಿವಕುಮಾರ್, ಸುಮಾ ರಂಗನಾಥ್, ಪುತ್ರ ಸತ್ಯನಾರಾಯಣ ಮತ್ತು ಅವರ ಕುಟುಂಬದವರು ಸೇರಿದಂತೆ ಸಂಬಂಧಿಕರು ಹಾಗೂ ಹಿತೈಷಿಗಳು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಅಂತಿಮ ದರ್ಶನ ಪಡೆದ ಪ್ರಮುಖರು: ಮಾಜಿ ಸಚಿವರೂ ಆದ ಶಾಸಕ ಜಿ.ಟಿ.ದೇವೇಗೌಡ ಮತ್ತು ಅವರ ಪುತ್ರ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಜಿ.ಡಿ.ಹರೀಶ್‍ಗೌಡ ಸೇರಿದಂತೆ ಹಲವು ಪ್ರಮುಖರು ಮೃತರ ಅಂತಿಮ ದರ್ಶನ ಪಡೆದರು. ಹುಣಸೂರು ಶಾಸಕ ಹೆಚ್.ಪಿ. ಮಂಜುನಾಥ್, ಮಾಜಿ ಶಾಸಕರಾದ ಎಂ.ಕೆ.ಸೋಮ ಶೇಖರ್, ಪಿ.ಎಂ.ನರೇಂದ್ರಸ್ವಾಮಿ, ವಿಧಾನಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ, ಮಾಜಿ ಮೇಯರ್ ಸಂದೇಶಸ್ವಾಮಿ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿ ಕಾರದ ಅಧ್ಯಕ್ಷ ಹೇಮಂತಕುಮಾರಗೌಡ, ಮುಡಾ ಸದಸ್ಯೆ ಲಕ್ಷ್ಮೀದೇವಿ, ಎಐಸಿಸಿ ವಕ್ತಾರರಾದ ಐಶ್ವರ್ಯ ಮಹದೇವ್, ಕೆಪಿಸಿಸಿ ಕಾರ್ಯದರ್ಶಿ ಜೇಸುದಾಸ್, ವಕ್ತಾರರಾದ ಎಂ.ಲಕ್ಷ್ಮಣ್, ಮಂಜುಳಾ ಮಾನಸ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರ ಪ್ರಧಾನ ಕಾರ್ಯದರ್ಶಿ ಶಿವಣ್ಣ, ಕಾಂಗ್ರೆಸ್ ಮುಖಂಡ ರಾಕೇಶ್ ಪಾಪಣ್ಣ, ಎಸ್.ಎಂ.ಕೃಷ್ಣ ಅಭಿಮಾನಿಗಳ ಬಳಗದ ವಿಕ್ರಾಂತ್ ಪಿ.ದೇವೇಗೌಡ ಮತ್ತಿತರ ಪ್ರಮುಖರು ಅಂತಿಮ ದರ್ಶನ ಪಡೆದರು.

Translate »