ಗೋ.ಮಧುಸೂದನ್ ಆಕ್ಷೇಪ: ಮೈಸೂರು ಜಿಲ್ಲಾಧಿಕಾರಿಗೆ ಪತ್ರ
ಮೈಸೂರು

ಗೋ.ಮಧುಸೂದನ್ ಆಕ್ಷೇಪ: ಮೈಸೂರು ಜಿಲ್ಲಾಧಿಕಾರಿಗೆ ಪತ್ರ

March 2, 2019

ಮೈಸೂರು: ಮೈಸೂರು ತಾಲೂಕು ಕಸಬಾ ಹೋಬಳಿ ಕುರುಬಾರಹಳ್ಳಿಯ ಸರ್ವೆ ನಂ.4, ಆಲನಹಳ್ಳಿ ಸರ್ವೆ ನಂ.41 ಹಾಗೂ ಚೌಡಹಳ್ಳಿ ಸರ್ವೆ ನಂ. 39 ಸರ್ಕಾರಿ ಜಮೀನು (ಬಿ ಖರಾಬು) ಎಂದು 2015ರ ಮೇ 26ರಂದೇ ಅಂದಿನ ಜಿಲ್ಲಾಧಿಕಾರಿ ಘೋಷಿಸಿದ್ದಾರೆ. ಹಾಗಿದ್ದೂ ಸರ್ವೆ ನಂ. 4ರ ಜಾಗದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕಟ್ಟಡ ಸಂಕೀರ್ಣ ನಿರ್ಮಾಣಕ್ಕೆ ಇಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಂದ ಶಂಕುಸ್ಥಾಪನೆ ನೆರವೇರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್ ಅವರು ಈ ಸಂಬಂಧ ಜಿಲ್ಲಾಧಿಕಾರಿಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ.

ಕುರುಬಾರಹಳ್ಳಿ ಸರ್ವೆ ನಂ.4 ಬಿ ಖರಾಬು (ಸರ್ಕಾರಿ ಜಮೀನು) ಆಗಿದ್ದು, ಸಾರ್ವ ಜನಿಕ ಉದ್ದೇಶಕ್ಕಾಗಿ ಕಾಯ್ದಿರಿಸಿ ಜಿಲ್ಲಾಡಳಿತ ಈ ಮೊದಲೇ ಆದೇಶಿಸಿದೆ. ಮೈಸೂರು ತಹಶೀಲ್ದಾರ್ ಅವರೂ ಈ ಸರ್ವೇ ನಂ. 4ರಲ್ಲಿ ಕಾನೂನು ಬಾಹಿರವಾಗಿ ಆಗಿ ರುವ ಎಲ್ಲಾ ಖಾತೆಗಳನ್ನು ರದ್ದುಪಡಿಸಲು ಆದೇಶಿಸಿದ್ದಾರೆ. ಹಾಗಾಗಿ ಮೈವಿವಿ ಕೈಗೊಂಡಿರುವ ಕಾಮಗಾರಿಗೆ ಜಿಲ್ಲಾಧಿಕಾರಿಗಳು ತಕ್ಷಣ ತಡೆಯಾಜ್ಞೆ ನೀಡಬೇಕು ಹಾಗೂ ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿ ವಿರುದ್ಧವೇ ಸಾರ್ವಜನಿಕ ಮೊಕದ್ದಮೆ ಹೂಡಲಾಗುವುದು ಎಂದು ಗೋ.ಮಧುಸೂದನ್ ಅವರು ಎಚ್ಚರಿಸಿದ್ದಾರೆ. ಸಾರ್ವಜನಿಕರ ತೆರಿಗೆ ಹಣ ವ್ಯಯಿಸಿ ವಿವಾದಿತ ಸ್ಥಳದಲ್ಲಿ ಕಟ್ಟಡ ಕಟ್ಟುವುದಕ್ಕೆ ಸರ್ಕಾರದ ಅನುಮೋದನೆ ಪಡೆಯುವುದು ಕರ್ತವ್ಯ ಲೋಪವಲ್ಲವೇ? ಎಂದು ಪ್ರಶ್ನಿಸಿರುವ ಅವರು, ಜಿಲ್ಲಾಧಿಕಾರಿಗಳು ಈ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳುವರು ಎಂದು ನಂಬಿರುವುದಾಗಿ ಹೇಳಿದ್ದಾರೆ.

Translate »