ಗೌರಿ ಲಂಕೇಶ್ ಹತ್ಯೆ ಪ್ರಕರಣ: ಎಸ್‍ಐಟಿಯೇ ಸರಿ, ಸಿಬಿಐಗೆ ಬೇಡ
ಮೈಸೂರು

ಗೌರಿ ಲಂಕೇಶ್ ಹತ್ಯೆ ಪ್ರಕರಣ: ಎಸ್‍ಐಟಿಯೇ ಸರಿ, ಸಿಬಿಐಗೆ ಬೇಡ

July 24, 2018

ಮೈಸೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಕರ್ನಾಟಕ ಪೊಲೀಸ್ ಎಸ್‍ಐಟಿ 7ನೆ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು, ಯಾವುದೇ ಕಾರಣಕ್ಕೂ ಈ ಪ್ರಕರಣವನ್ನು ಸಿಬಿಐಗೆ ವಹಿಸಬಾರದು ಎಂದು ಕರ್ನಾಟಕ ರಾಜ್ಯ ಪ್ರಗತಿಪರ ಚಿಂತಕರ ವೇದಿಕೆ ಆಗ್ರಹಿಸಿದೆ.

ಮುಖ್ಯಮಂತ್ರಿಗಳಿಗೆ ಬರೆದ ಬಹಿರಂಗ ಪತ್ರವನ್ನು ವೇದಿಕೆ ರಾಜ್ಯಾಧ್ಯಕ್ಷ, ಮಾಜಿ ಎಂಎಲ್‍ಸಿ ಕೆ.ಸಿ.ಪುಟ್ಟಸಿದ್ದಶೆಟ್ಟಿ ಅವರು ಸೋಮವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.

ಮಹಾರಾಷ್ಟ್ರದ ಪನ್ಸಾರೆ ಹತ್ಯೆ ಪ್ರಕರಣಕ್ಕೂ ಗೌರಿ ಹತ್ಯೆ ಪ್ರಕರಣಕ್ಕೂ ಸಂಬಂಧವಿದೆ ಎಂಬ ಕಾರಣ ನೀಡಿ ಗೌರಿ ಹತ್ಯೆ ಪ್ರಕರಣವನ್ನು ಸಿಬಿಐ ತಾನೇ ವಹಿಸಿಕೊಳ್ಳಲು ಹವಣಿಸುತ್ತಿದೆ. ಕೇಂದ್ರ ಸರ್ಕಾರದ ಕೈಗೊಂಬೆಯಾಗಿರುವ ಸಿಬಿಐ ತನಗೆ ಬೇಕಾದಂತೆ ವರದಿ ಬರೆದು ಕೈತೊಳೆದುಕೊಳ್ಳಲಿದೆ ಎಂದು ಆರೋಪಿಸಿದರು.

ಮೌಢ್ಯ ಪ್ರತಿಬಂಧಕ ಕಾಯ್ದೆ ಅನಷ್ಠಾನಕ್ಕೆ ತರಬೇಕು. ಎಸ್‍ಸಿ, ಎಸ್‍ಟಿ ನೌಕರರಿಗೆ ಮುಂಬಡ್ತಿ ನೀಡುವ ಸಂಬಂಧ ಹಿಂದಿನ ಸರ್ಕಾರ ಕಳುಹಿಸಿದ ಕಾಯ್ದೆಗೆ ರಾಷ್ಟ್ರಪÀತಿಗಳ ಅಂಕಿತ ಹಾಕಿರುವುದರಿಂದ ಕೂಡಲೇ ಜಾರಿಗೊಳಿಸಬೇಕು. ಪೆಟ್ರೋಲ್, ಡೀಸೆಲ್ ದರ ಇಳಿಸಲು ಕೇಂದ್ರದ ಮೇಲೆ ಒತ್ತಡ ಹೇರಬೇಕು. ಅತಿಥಿ ಶಿಕ್ಷಕರು, ಉಪನ್ಯಾಸಕರು ಮತ್ತು ಅಧ್ಯಾಪಕರಿಗೆ ನೆರೆಯ ರಾಜ್ಯಗಳ ಆಂಧ್ರ , ತೆಲಂಗಾಣ, ಕೇರಳ ರಾಜ್ಯಗಳಲ್ಲಿ ನೀಡಿರುವಂತೆ ಕನಿಷ್ಟ ರು.20,000 ಮಾಸಿಕ ವೇತನ ನೀಡಬೇಕು. ಇವರಿಗೆ ಸೇವಾ ಭದ್ರತೆ ಒದಗಿಸಲು ಖಾಯಂ ಮಾಡುವ ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.

ಬಿಪಿಎಲ್ ಕಾರ್ಡ್ ಕುಟುಂಬಗಳಿಂದ ಬಂದಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್‍ಗಳನ್ನು ನೀಡಬೇಕು. ಈ ಬಗ್ಗೆ ಚರ್ಚಿಸಲು ವಿಚಾರವಾದಿಗಳು, ಚಿಂತಕರು, ರೈತ ಪ್ರತಿನಿಧಿಗಳು, ಸಾಹಿತಿಗಳ ಮತ್ತು ಕಲಾವಿದರನ್ನು ಒಳಗೊಂಡಂತೆ ಸಭೆ ಕರೆಯಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಡಾ.ಮಧು, ಬೋರಪ್ಪಶೆಟ್ಟಿ, ಮಹದೇವ ಗಾಣಿಗ, ಹೆಚ್.ಬಿ.ಸಂಪತ್ತು, ಡ.ರಾಜು ಉಪಸ್ಥಿತರಿದ್ದರು.

Translate »