ಗೌರಿ ಲಂಕೇಶ್ ಹತ್ಯೆ ತನಿಖೆಯಲ್ಲಿ ಎಲ್ಲಾ ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ
ಮೈಸೂರು

ಗೌರಿ ಲಂಕೇಶ್ ಹತ್ಯೆ ತನಿಖೆಯಲ್ಲಿ ಎಲ್ಲಾ ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ

October 5, 2018

ಮೈಸೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದ ತನಿಖೆಯಲ್ಲಿ ಪ್ರಪಂಚದಲ್ಲಿರುವ ಎಲ್ಲಾ ರೀತಿಯ ತಂತ್ರಜ್ಞಾನವನ್ನು ಬಳಸಿ ಆರೋಪಿಗಳನ್ನು ಪತ್ತೆ ಮಾಡಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಮಣ್ಯೇಶ್ವರರಾವ್ ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ‘ಮಾಧ್ಯಮ ಮತ್ತು ಆರಕ್ಷಕ ವ್ಯವಸ್ಥೆ’ ಕುರಿತು ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು, ನನ್ನ 18 ವರ್ಷದ ಪೊಲೀಸ್ ವೃತ್ತಿಯಲ್ಲಿ ಹಲವಾರು ತನಿಖೆಗಳನ್ನು ನೋಡಿದ್ದೇವೆ. ಆದರೆ, ಗೌರಿ ಲಂಕೇಶ್ ಅವರ ಹತ್ಯೆಯ ತನಿಖೆ ಮಹತ್ವದ್ದಾಗಿದೆ. ಸಿಸಿಟಿವಿಗಳು ಮತ್ತು 10 ಬಿಲಿಯನ್ ಕರೆಗಳನ್ನು ತನಿಖಾಧಿಕಾರಿ ಆಲಿಸಿದ್ದಾರೆ. ಸರ್ಕಾರವೂ ಇದರ ಬಗ್ಗೆ ಹೆಚ್ಚು ಕಾಳಜಿ ಯನ್ನು ಹೊಂದಿದೆ. ಈ ತನಿಖೆಯ ಬಗ್ಗೆ ನನಗೆ ಹೆಚ್ಚಿನ ಕುತೂಹಲವಿದೆ. ಆರೋಪಿಗಳ ಪತ್ತೆಗಾಗಿ ಹಗಲಿರುಳು ಇಲಾಖೆ ಅಧಿಕಾರಿಗಳು ಶ್ರಮಪಡುತ್ತಿದ್ದಾರೆ. ಖಂಡಿತ ಫಲಿತಾಂಶ ಸಿಗಲಿದೆ ಎಂದರು.

ಮಾಧ್ಯಮ ಸಮಾಜದ ನಾಲ್ಕನೇ ಅಂಗವಾಗಿದ್ದು, ಸಮುದಾಯದ ನಡುವೆ ಪೊಲೀಸರು ಸಂವಾದ ನಡೆಸಬೇಕೆಂದರೆ ಮಾಧ್ಯಮ ಅತ್ಯಗತ್ಯ. ಮಾಧ್ಯಮಗಳು ಕೆಲವೊಮ್ಮೆ ನಕಾರಾತ್ಮಕ ಭಾವನೆ ಮೂಡಿಸಿ ದಾಗ ಸಮುದಾಯದಲ್ಲಿ ಪೊಲೀಸ್ ಇಲಾಖೆಯ ಬಗ್ಗೆ ತಪ್ಪು ಸಂದೇಶ ರವಾನೆ ಯಾಗಲಿದೆ. ಸಮುದಾಯದ ಸಮಸ್ಯೆ ಯನ್ನು ಮಾಧ್ಯಮಗಳು ಹೆಚ್ಚಾಗಿ ಗುರುತಿಸ ಬೇಕಿದೆ ಎಂದರು.

ಪೊಲೀಸರು ಮತ್ತು ಮಾಧ್ಯಮ ಸಮಾಜಕ್ಕಾಗಿ ಕೆಲಸ ಮಾಡು ತ್ತಿವೆ. ಆದರೆ, ಮಾಧ್ಯಮ ಮತ್ತು ಪೊಲೀಸರ ನಡುವೆ ಸಂವಾದದ ಕೊರತೆ ಕಾಣುತ್ತಿದೆ ಎಂದು ವಿಷಾದಿಸಿದರು.

2012ರಲ್ಲಿ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಎದುರು ಮಾಧ್ಯಮ ಸಿಬ್ಬಂದಿ, ವಕೀಲರು ಮತ್ತು ಪೊಲೀಸರ ನಡುವೆ ಘರ್ಷಣೆ ಉಂಟಾಗಿತ್ತು. ಕೆಲವರು ಇದಕ್ಕೆ ಕಾರಣವಾಗಿದ್ದರು. ಪೊಲೀಸರ ಪ್ರಮುಖ ಕೆಲಸ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು. ಸ್ವಾತಂತ್ರ್ಯ ನಂತರದಲ್ಲಿ ಪೊಲೀಸರ ಕರ್ತವ್ಯಗಳು ಬದಲಾಗಿವೆ.

ಸಮುದಾಯ ಪೊಲೀಸರ ಕೆಲಸ 1980ರ ನಂತರವೇ ಕಾರ್ಯರೂಪಕ್ಕೆ ಬಂದಿದೆ. ಮಾಧ್ಯಮದ ನೆರವಿನಿಂದ ಪೊಲೀಸ್ ಇಲಾಖೆ ಸಾರ್ವಜನಿಕರ ಸಹಭಾಗಿತ್ವ ಪಡೆದುಕೊಳ್ಳಲು ಸಾಧ್ಯ. ಪೊಲೀಸರ ಕೆಲಸಗಳ ಬಗ್ಗೆ ಜನರಿಗೆ ವಿಶ್ವಾಸ ಮೂಡಲು ಮಾಧ್ಯಮ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ತಿಳಿಸಿದರು.

ಪೊಲೀಸ್ ಇಲಾಖೆ ಮಾತ್ರವೇ ಕೆಲವು ವಿಷಯಗಳ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಲು ಸಾಧ್ಯ. ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆಯ ಎಲ್ಲಾ ವಿಭಾಗದಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಗಳು ನೇಮಕವಾಗುವ ಸಾಧ್ಯತೆ ಇದೆ.

ಇಂದು ಮಾಧ್ಯಮಗಳು ದೇಶವನ್ನು ಆಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಟಿಆರ್‌ಪಿ ಎಂಬುದು ಪ್ರಮುಖವಾಗಿದ್ದು, ಕೆಲವು ಕಾನೂನು ಚೌಕಟ್ಟಿನ ವಿಷಯಗಳ ಬಗ್ಗೆ ಮಾಧ್ಯಮಗಳಲ್ಲಿ ತೀರ್ಪು ಬರುವ ಮುನ್ನವೇ ಚರ್ಚೆ ಮಾಡುವುದು ಸರಿ ಯಲ್ಲ. ಅಪರಾಧ ಪ್ರಕರಣಗಳ ಬಗ್ಗೆ ಚರ್ಚೆ ಮಾಡುವುದರಿಂದ ಆರೋಪಿ ಮೇಲೆ ಸಮಾಜದಲ್ಲಿ ತಪ್ಪು ಭಾವನೆ ಮೂಡಲಿದೆ. ತನಿಖೆಯ ಮೇಲೂ ಪರಿ ಣಾಮ ಬೀರಲಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ನಿರ್ಮಿಸಿರುವ ಟ್ರಾಫಿಕ್ ವ್ಯವಸ್ಥೆ ಕುರಿತ ಸಾಕ್ಷ್ಯಚಿತ್ರ ಮತ್ತು ಪತ್ರಿಕೋದ್ಯಮ ವಿಭಾ ದ್ವಿತೀಯ ವರ್ಷದ ವಿದ್ಯಾರ್ಥಿನಿ ಕವನ, ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವಂತಹ ಅಭಯಹಸ್ತ ವೆಬ್‍ಸೈಟ್‍ನ್ನು ಬಿಡುಗಡೆಗೊಳಿಸಿದರು. ನಂತರ ವಿದ್ಯಾರ್ಥಿಗಳು ತಯಾರಿಸಿದ ಸಂಚಾರ ನಿಯಮ ಗಳ ಬಗ್ಗೆ ಅರಿವು ಮೂಡಿಸುವ ಜಾಹೀರಾತುಗಳನ್ನು ಪ್ರದರ್ಶಿಸಲಾಯಿತು.

ಮೈಸೂರು ವಿವಿ ಆಡಳಿತಾಧಿಕಾರಿ ಶ್ರೀನಿವಾಸ್, ನಿವೃತ್ತ ಪ್ರಾಧ್ಯಾಪಕಿ ಪ್ರೊ.ಉಷಾರಾಣಿ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು, ಸಹಾ ಯಕ ಪ್ರಾಧ್ಯಾಪಕಿ ಡಾ.ಎಂ.ಎಸ್. ಸಪ್ನ, ಪ್ರೊ.ರಾಮಚಂದ್ರ ಇದ್ದರು.

Translate »