ಟಿಪ್ಪು ಜಯಂತಿ: ಕಲಾಮಂದಿರ ಕಾರ್ಯಕ್ರಮಕ್ಕೆ ಮಾತ್ರ ಅನುಮತಿ
ಮೈಸೂರು

ಟಿಪ್ಪು ಜಯಂತಿ: ಕಲಾಮಂದಿರ ಕಾರ್ಯಕ್ರಮಕ್ಕೆ ಮಾತ್ರ ಅನುಮತಿ

November 9, 2018

ಮೈಸೂರು: ಮೈಸೂರು ಜಿಲ್ಲಾಡಳಿತದ ವತಿಯಿಂದ ನ.10 ರಂದು ನಗರದ ಕಲಾಮಂದಿರದಲ್ಲಿ ಏರ್ಪಡಿಸಿರುವ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಭದ್ರತೆ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೈಸೂರಿನ ಕಲಾಮಂದಿರದಲ್ಲಿ ಸರ್ಕಾರದ ವತಿಯಿಂದ ಆಚರಿಸುವ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಮಾತ್ರ ಅನುಮತಿ ನೀಡಲಾಗಿದ್ದು, ಇದನ್ನು ಹೊರತುಪಡಿಸಿ, ನಗರದ ಯಾವುದೇ (ಒಳಾವರಣ ಅಥವಾ ಹೊರಾಂಗಣದಲ್ಲಿ) ಸ್ಥಳದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅನುಮತಿ ನೀಡಲಾಗಿಲ್ಲ.ಅಲ್ಲದೆ, ಈ ಕಾರ್ಯಕ್ರಮದ ಪರ-ವಿರುದ್ಧ ನಗರದ ಯಾವುದೇ ಸ್ಥಳಗಳಲ್ಲಿ ಸಭೆ-ಸಮಾರಂಭಗಳನ್ನು ನಡೆಸುವುದು. ಬೈಕ್ ರ್ಯಾಲಿ ಅಥವಾ ಪ್ರತಿಭಟನೆ ಮಾಡುವುದಕ್ಕೂ ಅನುಮತಿ ನೀಡಿರುವುದಿಲ್ಲ.

ಹೈಕೋರ್ಟ್ ನಿರ್ದೇಶನದ ಮೇರೆಗೆ ಸಾರ್ವಜನಿಕ ಸ್ಥಳಗಳಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮದ ಫ್ಲೆಕ್ಸ್ ಅಳವಡಿಸುವುದನ್ನು ನಿಷೇಧಿಸಲಾಗಿದೆ ಹಾಗೂ ಸೂಕ್ಷ್ಮ ಪ್ರದೇಶ ಗಳಲ್ಲಿ ತಾತ್ಕಾಲಿಕ ಚೆಕ್ ಪೋಸ್ಟ್‍ಗಳನ್ನು ತೆರೆಯಲಾಗಿದ್ದು, ನಿರಂತರ ಪೊಲೀಸ್ ಪಿಕೆಟಿಂಗ್ ಮತ್ತು ಪೆಟ್ರೋಲಿಂಗ್ ವ್ಯವಸ್ಥೆ ಮಾಡಲಾಗಿದೆ. ನಗರದ 10 ಚೆಕ್‍ಪೋಸ್ಟ್‍ಗಳಲ್ಲಿಯೂ ನಗರದೊಳಗೆ ಪ್ರವೇಶಿಸುವ ಮತ್ತು ಹೊರ ಹೋಗುವವರ ಮೇಲೆ ನಿಗಾವಹಿಸಲಾಗಿದೆ. ನಗರದ ಲಾಡ್ಜ್‍ಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ತಂಗಿದ್ದರೆ, ಅಂತಹವ ರನ್ನು ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ಮಾಡಲಾಗುವುದು. ಈ ಸಂಬಂಧ ನಗರದ ಎಲ್ಲಾ ಠಾಣೆಗಳಲ್ಲಿ ವಿವಿಧ ಕೋಮಿನ ಮುಖಂಡರೊಂದಿಗೆ ಶಾಂತಿ ಮತ್ತು ಸೌಹಾರ್ದ ಸಭೆಗಳನ್ನು ಆಯೋಜಿಸಲಾಗುವುದು. ಟಿಪ್ಪು ಅನುಯಾಯಿಗಳು ಸರ್ಕಾರದ ವತಿಯಿಂದ ನಡೆಸುವ ಕಾರ್ಯಕ್ರಮದಲ್ಲಿ ಮಾತ್ರ ಭಾಗವಹಿಸಬಹುದು. ಅಲ್ಲದೆ, ಈ ಕಾರ್ಯಕ್ರಮದ ಪರ-ವಿರುದ್ಧ ಸಾರ್ವಜನಿಕ ಸ್ಥಳಗಳಲ್ಲಿ ಘೋಷಣೆ ಅಥವಾ ಕಾನೂನು ಸುವ್ಯವಸ್ಥೆಗೆ ಭಂಗ ತರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ಎಚ್ಚರಿಸಿದ್ದಾರೆ.

Translate »