ಟಿಪ್ಪು ಜಯಂತಿ ವಿರುದ್ಧ ಸೋಮವಾರಪೇಟೆಯಲ್ಲಿ ಪ್ರತಿಭಟನೆ
ಕೊಡಗು

ಟಿಪ್ಪು ಜಯಂತಿ ವಿರುದ್ಧ ಸೋಮವಾರಪೇಟೆಯಲ್ಲಿ ಪ್ರತಿಭಟನೆ

November 9, 2018

ಸೋಮವಾರಪೇಟೆ: ನ.10ರಂದು ನಡೆಯುವ ಟಿಪ್ಪು ಸುಲ್ತಾನ್ ಜಯಂತಿ ಯನ್ನು ವಿರೋಧಿಸಿ, ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.

ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಎಂ.ಬಿ.ಅಭಿಮನ್ಯು ಕುಮಾರ್ ಹಾಗು ಶಾಸಕ ಅಪ್ಪಚ್ಚು ರಂಜನ್ ಮುಂದಾಳತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಬಿಜೆಪಿ ಹಾಗೂ ಹಿಂದುಪರ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.

ಮಹಾತ್ಮಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಪ್ರತಿಭಟನಾಕಾರರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಹಾದಿಯುದ್ದಕ್ಕೂ ಸಮ್ಮಿಶ್ರ ಸರ್ಕಾರ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಟಿಪ್ಪು ಸುಲ್ತಾನ್ ವಿರುದ್ಧ ಧಿಕ್ಕಾರ ಕೂಗಿದರು. ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ ಸಭೆಯಲ್ಲಿ ಮಾತ ನಾಡಿದ ಶಾಸಕ ಅಪ್ಪಚ್ಚು ರಂಜನ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಜಾತಿಯ ನಡುವೆ ಕಂದಕವನ್ನು ಮಾಡಿ, ರಾಜಕೀಯ ಲಾಭ ಪಡೆಯಲು ಟಿಪ್ಪು ಜಯಂತಿಯನ್ನು ಆಚರಿಸಲು ಆದೇಶ ನೀಡಿದರು. ಇದು ಕೊಡಗಿನ ಜನರಿಗೆ ಮಾಡಿದ ಅಪಮಾನ. ಹೈದರಾಲಿ ಮತ್ತು ಟಿಪ್ಪು ಕೊಡಗಿಗೆ 30 ಬಾರಿ ದಾಳಿ ಮಾಡಿ, ಕೊಡಗನ್ನು ಧ್ವಂಸ ಮಾಡಿದ್ದಾರೆ. ಈ ಕಾರಣದಿಂದ ಟಿಪ್ಪು ಜಯಂತಿಯನ್ನು ಆಚರಿಸಲು ಬಿಡುವುದಿಲ್ಲ ಎಂದು ಹೇಳಿದರು.

ಜಿಲ್ಲಾಧ್ಯಕ್ಷ ಎಂ.ಬಿ.ಅಭಿಮನ್ಯು ಕುಮಾರ್ ಮಾತನಾಡಿ, ಟಿಪ್ಪು ಯಾವುದೇ ಕಾರಣಕ್ಕೂ ದೇಶಪ್ರೇಮಿಯಾಗಲು ಸಾಧ್ಯವಿಲ್ಲ. ಕೊಡಗಿನ ಜನರ ಹತ್ಯೆ ಮಾಡಿದ್ದಾನೆ. ಮತಾಂತರ ಮಾಡಿದ್ದಾನೆ. ಈ ಕಾರಣದಿಂದ ಟಿಪ್ಪು ಜಯಂತಿಯನ್ನು ವಿರೋಧಿಸುತ್ತೇವೆ. ಕೊಡಗಿನ ಜನರು ಟಿಪ್ಪು ಜಯಂತಿಯಲ್ಲಿ ಭಾಗವಹಿಸಬಾರದು ಎಂದು ಮನವಿ ಮಾಡಿದರು.

ನಂತರ ಮೆರವಣಿಗೆಯಲ್ಲಿ ತೆರಳಿ, ಟಿಪ್ಪು ಜಯಂತಿಯನ್ನು ರದ್ದು ಮಾಡುವಂತೆ ಆಗ್ರಹಿಸಿ ತಹಸೀಲ್ದಾರ್ ಮಹೇಶ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಭಾರತೀಶ್, ಪ್ರಧಾನ ಕಾರ್ಯದರ್ಶಿ ವಿ.ಕೆ.ಲೋಕೇಶ್, ಮುಖಂಡ ಎಸ್.ಜಿ.ಮೇದಪ್ಪ, ನಗರಾಧ್ಯಕ್ಷ ಎಸ್.ಆರ್.ಸೋಮೇಶ್, ಪ್ರಮುಖರಾದ ಬಲ್ಲಾರಂಡ ಮಣಿ ಉತ್ತಪ್ಪ, ಕಿಬ್ಬೆಟ್ಟ ಮಧು, ಹಿಂದೂಪರ ಸಂಘಟನೆಗಳ ಶಶಿಕಾಂತ್, ಉಮೇಶ್, ಮಸಗೋಡು ಸತೀಶ್, ಪಪಂ, ಜಿಪಂ, ತಾಪಂನ ಕೆಲ ಸದಸ್ಯರುಗಳು ಭಾಗವಹಿಸಿದ್ದರು.

Translate »