ಟಿಪ್ಪು ಜಯಂತಿ ಬಗ್ಗೆ ಬಿಜೆಪಿ ಮುಖಂಡರ ಅಪಪ್ರಚಾರ: ಕಾಂಗ್ರೆಸ್ ಆರೋಪ
ಮೈಸೂರು

ಟಿಪ್ಪು ಜಯಂತಿ ಬಗ್ಗೆ ಬಿಜೆಪಿ ಮುಖಂಡರ ಅಪಪ್ರಚಾರ: ಕಾಂಗ್ರೆಸ್ ಆರೋಪ

November 9, 2018

ಮೈಸೂರು: ಸಮಾಜದಲ್ಲಿ ಶಾಂತಿ ಕದಡಿ, ರಾಜಕೀಯ ಲಾಭ ಮಾಡಿಕೊಳ್ಳುವುದಕ್ಕಾಗಿ ಸ್ವಾತಂತ್ರ್ಯ ಹೋರಾಟಗಾರ ಟಿಪ್ಪುಸುಲ್ತಾನ್ ವಿರುದ್ಧ ಬಿಜೆಪಿ ನಾಯಕರು ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕೆಂದು ಮೈಸೂರು ಜಿಲ್ಲಾ ಕಾಂಗ್ರೆಸ್ ವಕ್ತಾರ ಎಸ್.ರಾಜೇಶ್ ಒತ್ತಾಯಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಟಿಪ್ಪು ಸುಲ್ತಾನ್ ಕುರಿತು ಬಿಜೆಪಿ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ. ಇದರಿಂದ ಕೋಮು ಸೌಹಾರ್ದತೆಗೆ ಧಕ್ಕೆಯಾಗಿ ಅಶಾಂತಿ ವಾತಾವರಣ ಸೃಷ್ಟಿಯಾಗಲು ಕಾರಣವಾಗುತ್ತದೆ. ಇತಿಹಾಸವನ್ನು ತಿಳಿಯದೆ ಮಾತನಾಡುವುದು ಬಿಜೆಪಿ ನಾಯಕರಿಗೆ ಶೋಭೆ ತರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬ್ರಿಟಿಷರ ವಿರುದ್ಧ 4 ಯುದ್ಧಗಳನ್ನು ಮಾಡಿದ ಅಪ್ರತಿಮ ಸೇನಾನಿ ಟಿಪ್ಪುಸುಲ್ತಾನ್. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಅಂದಿನ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಟಿಪ್ಪು ಜಯಂತಿ ಆಚರಣೆ ಮಾಡಿದ್ದನ್ನು ಬಿಜೆಪಿ ನಾಯಕರು ಮರೆತ್ತಿದ್ದಾರೆ. ಬಿಜೆಪಿ ಮುಖಂಡರು ರಾಜಕೀಯ ಲಾಭಕ್ಕೆ ಸಮಯ ಸಾಧಕತನ ತೋರುತ್ತಿದ್ದಾರೆ. ಹಿಂದುಳಿದ ವರ್ಗ, ದಲಿತ, ಶೋಷಿತ ವರ್ಗದ ಕೇರಿಗಳಿಗೆ ಒಮ್ಮೆಯೂ ಭೇಟಿ ನೀಡದೆ, ಶೋಷಿತ ಸಮುದಾಯದವರ ಏಳಿಗೆಗೆ ಚಿಂತಿಸದೆ ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಟಿಪ್ಪು ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮೊಹಮ್ಮದ್ ಇರ್ಫಾನ್, ಪ್ರಕಾಶ್, ರೇವಣ್ಣ, ಮೊಹಿನುದ್ದೀನ್, ಕುಮಾರ್, ವಿ.ಕೃಷ್ಣಮೂರ್ತಿ ಇದ್ದರು.

Translate »