ನಾಳೆಯಿಂದ ಸಂಚಲನ ಮಕ್ಕಳ ನಾಟಕೋತ್ಸವ
ಮೈಸೂರು

ನಾಳೆಯಿಂದ ಸಂಚಲನ ಮಕ್ಕಳ ನಾಟಕೋತ್ಸವ

November 9, 2018

ಮೈಸೂರು: ಸಂಚಲನ ಮೈಸೂರು, ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ನ.10ರಿಂದ 14ರವರೆಗೆ `ಸಂಚಲನ ಮಕ್ಕಳ ನಾಟಕೋತ್ಸವ’ ಹಮ್ಮಿಕೊಳ್ಳ ಲಾಗಿದೆ ಎಂದು ಸಂಚಲನ ಮೈಸೂರು ರಂಗತಂಡದ ಅಧ್ಯಕ್ಷ ದೀಪಕ್ ಮೈಸೂರು ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಪ್ರತಿದಿನ ಸಂಜೆ 6.30ಕ್ಕೆ ನಾಟಕ ಪ್ರದರ್ಶನಗಳು ಆರಂಭಗೊಳ್ಳಲಿವೆ. ಮಕ್ಕಳ ಸೃಜನಶೀಲ ಅಭಿವ್ಯಕ್ತಿ ವೇದಿಕೆ ಕಲ್ಪಿಸುವ ಹಿನ್ನೆಲೆಯಲ್ಲಿ ಈ ನಾಟಕೋತ್ಸವ ಆಯೋಜಿಸಿದ್ದು, ಮಕ್ಕಳು ತಮ್ಮ ಅಭಿನಯ ಕೌಶಲ್ಯವನ್ನು ಅನಾವರಣಗೊಳಿಸಲಿದ್ದಾರೆ ಎಂದು ತಿಳಿಸಿದರು.

ಪ್ರದರ್ಶನಗಳಿಗೆ ಉಚಿತ ಪ್ರವೇಶಾವಕಾಶವಿದ್ದು, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕರ್ನಾಟಕ ಬಾಲವಿಕಾಸ ಅಕಾಡೆಮಿ, ನಿರಂತರ ಫೌಂಡೇಷನ್ ಸಹಕಾರದಲ್ಲಿ ಈ ನಾಟಕೋತ್ಸವ ಏರ್ಪಡಿಸಲಾಗಿದೆ. ನ.10ರಂದು ಸಂಜೆ 6.30ಕ್ಕೆ ಹಮ್ಮಿಕೊಂಡಿರುವ ಉದ್ಘಾಟನಾ ಸಮಾರಂಭದಲ್ಲಿ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಸಂಸದ ಆರ್.ಧ್ರುವನಾರಾಯಣ್ ಮತ್ತಿತರರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

ಬಳಿಕ ಡೈಸಿ ಕಾನ್ವೆಂಟ್‍ನ ಮಕ್ಕಳು ಅಭಿನಯಿಸುವ `ಪ್ರೀತಿಯ ಕಾಳು’ ನಾಟಕ ಪ್ರದರ್ಶನಗೊಳ್ಳಲಿದೆ. ನ.11ರಂದು ಸಂಚಲನ ಮೈಸೂರು ರಂಗ ತಂಡದ ಮಕ್ಕಳು ಅಭಿನಯಿಸುವ `ಶಬರಿ’ ನಾಟಕ ಪ್ರದರ್ಶನವಿದ್ದು, ಬಳಿಕ ನಾಚನಹಳ್ಳಿ ಪಾಳ್ಯ ಜೆಎಸ್‍ಎಸ್ ಪ್ರೌಢಶಾಲಾ ಮಕ್ಕಳು ಅಭಿನಯಿಸುವ `ನಾಯಿತಿಪ್ಪ’ ನಾಟಕ ಪ್ರದರ್ಶನ ಕಾಣಲಿದೆ. ನ.12ರಂದು ಮೈಸೂರು ಮೈಮ್ ಟೀಮ್‍ನ ಮಕ್ಕಳು ಅಭಿನಯಿಸುವ `ಗಡಿಯ ದೀಪಗಳು, ಅರಿವು-ಹಸಿವು’ ಹಾಗೂ ಅರಿವು ಶೈಕ್ಷಣಿಕ ಮತ್ತು ಸಾಂಸ್ಕøತಿಕ ಟ್ರಸ್ಟ್‍ನ ಮಕ್ಕಳು ಅಭಿನಯಿಸುವ `ಚಿತ್ರಪಟ ರಾಮಾಯಣ’ ಪ್ರದರ್ಶನಗೊಳ್ಳಲಿದ್ದು, ಇದಕ್ಕೂ ಮುನ್ನ ಅತಿಥಿಗಳಾಗಿ ಹಿರಿಯ ಚಿತ್ರನಟಿ ಗಿರಿಜಾ ಲೋಕೇಶ್, ವಕೀಲ ಎ.ಜಿ.ಸುಧೀರ್, ಮೈಸೂರು ಜಿಪಂ ಮುಖ್ಯಯೋಜನಾಧಿಕಾರಿ ಕೆ.ಬಿ.ಪ್ರಭುಸ್ವಾಮಿ, ರಂಗಭೂಮಿ ಕಲಾವಿದೆ ಹಾಗೂ ಚಿತ್ರ ನಟಿ ಇಂದಿರಾ ನಾಯರ್ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

ನ.13ರಂದು ಆಯಾಮ ಅಕಾಡೆಮಿ ಆಫ್ ಫೈನ್ ಆಟ್ರ್ಸ್ ಮಕ್ಕಳು ಅಭಿನಯಿಸುವ `ಭರತನಾಟ’ ನಾಟಕ ಹಾಗೂ ಅದಮ್ಯ ರಂಗಶಾಲೆ ಮಕ್ಕಳು ಅಭಿನಯಿಸುವ `ಮಹಾಭೋಜನ’ ನಾಟಕ ಪ್ರದರ್ಶನ ಕಾಣಲಿವೆ. ನ.14ರಂದು ಸಂಜೆ 6.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಶಾಸಕರೂ ಆದ ಮಾಜಿ ಸಚಿವ ಎ.ಹೆಚ್.ವಿಶ್ವನಾಥ್, ಶಾಸಕ ಎಲ್.ನಾಗೇಂದ್ರ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಡಿ.ಹರೀಶ್‍ಗೌಡ ಮತ್ತಿತರರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಬಳಿಕ ನಟನ ರಂಗಶಾಲೆ ಮಕ್ಕಳು ಅಭಿನಯಿಸುವ `ಡಿಜಿರಿಡೊ’ ನಾಟಕ ಪ್ರದರ್ಶನವಾಗಲಿದೆ ಎಂದು ತಿಳಿಸಿದರು. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಗಣೇಶ ಅಮೀನಗಡ, ಮಾಜಿ ಸದಸ್ಯ ಬಿ.ಎಂ.ರಾಮಚಂದ್ರ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

Translate »