ಅ. 14 ರಂದು ಮೈಸೂರಲ್ಲಿ ಸಾಂಸ್ಕೃತಿಕ ಮೆರವಣಿಗೆ
ಮೈಸೂರು

ಅ. 14 ರಂದು ಮೈಸೂರಲ್ಲಿ ಸಾಂಸ್ಕೃತಿಕ ಮೆರವಣಿಗೆ

October 10, 2018

ಮೈಸೂರು:ನಾಡಿನ ಕಲಾವೈಭವ ಬಿಂಬಿಸಲು ಅಕ್ಟೋಬರ್ 14 ರಂದು ಮೈಸೂರಿನ ಜಂಬೂ ಸವಾರಿ ಮಾರ್ಗದಲ್ಲಿ ಸಾಂಸ್ಕೃತಿಕ ಮೆರವಣಿಗೆಯನ್ನು ಆಯೋಜಿಸಲಾಗಿದೆ.

ಮೈಸೂರಿನ ಪೈ ವಿಸ್ತಾ ಹೋಟೆಲ್‍ನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ದಸರಾ ಮೆರವಣಿಗೆ ಉಪಸಮಿತಿ ಕಾರ್ಯಾಧ್ಯಕ್ಷರೂ ಆದ ನಗರ ಪೊಲೀಸ್ ಕಮೀಷನರ್ ಡಾ. ಎ. ಸುಬ್ರಹ್ಮಣ್ಯೇಶ್ವರರಾವ್ ಈ ವಿಷಯ ತಿಳಿಸಿದರು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಹಾಗೂ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಸೂಚನೆಯಂತೆ ಇದೇ ಮೊದಲ ಬಾರಿ ವಿಜಯದಶಮಿ ಮೆರವಣಿಗೆಗೂ ಮುನ್ನ ಸಾಂಸ್ಕೃತಿಕ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಅಕ್ಟೋಬರ್ 14 ರಂದು ಮಧ್ಯಾಹ್ನ 3.30 ಗಂಟೆಗೆ ಅರಮನೆ ಆವರಣದಿಂದ ಮೆರವಣಿಗೆ ಆರಂಭವಾಗಲಿದೆ ಎಂದು ತಿಳಿಸಿದರು. ಅರಮನೆ ಬಲರಾಮ ದ್ವಾರ, ಕೆ.ಆರ್. ಸರ್ಕಲ್, ಸಯ್ಯಾಜಿರಾವ್ ರಸ್ತೆ, ಹೈವೇ ಸರ್ಕಲ್ ಮೂಲಕ ಸಾಗುವ ಮೆರವಣಿಗೆಯು ಸಂಜೆ 6 ಗಂಟೆಗೆ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಅಂತ್ಯಗೊಳ್ಳಲಿದೆ. ಮೈಸೂರಿನ ಪದವಿಪೂರ್ವ ಮತ್ತು ಪದವಿ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ನಾಡಿನ ಸಂಸ್ಕೃತಿ ಬಿಂಬಿಸುವ ಸಾಂಪ್ರದಾಯಿಕ ಉಡುಗೆ-ತೊಡುಗೆಯೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸುವರು.

ಯುವ ಸಂಭ್ರಮದಲ್ಲಿ ಭಾಗವಹಿಸಿದ್ದ ನೂರಾರು ವಿದ್ಯಾರ್ಥಿಗಳು, ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳ ನೂರಾರು ಮಂದಿ ಕಲಾವಿದರು ಪ್ರದರ್ಶನ ನೀಡಲು ಅವಕಾಶ ಮಾಡಿಕೊಡಲಾಗಿದೆ. ಕೆಎಸ್‍ಆರ್‍ಟಿಸಿ, ಸಿಎಎಆರ್, ಸಿವಿಲ್ ಹಾಗೂ ಅಶ್ವಾರೋಹಿ ಪಡೆ ಸಿಬ್ಬಂದಿ ಸೇರಿ ಸಾವಿರಾರು ಮಂದಿ ಈ ಸಾಂಸ್ಕೃತಿಕ ಮೆರವಣಿಗೆಯಲ್ಲಿ ಭಾಗವಹಿಸುವರು.

ವಿಜಯದಶಮಿ ಮೆರವಣಿಗೆಯಲ್ಲಿ ಭಾಗವಹಿಸುವ ಅಂಬಾರಿ ಆನೆ ಅರ್ಜುನ ಸೇರಿದಂತೆ ಎಲ್ಲಾ 12 ಆನೆಗಳೂ ಸಾಂಸ್ಕೃತಿಕ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತವೆಯಾದರೂ ಅಂಬಾರಿ ಕಟ್ಟುವುದಿಲ್ಲ. ಈಗಾಗಲೇ ಸಾಂಸ್ಕೃತಿಕ ಮೆರವಣಿಗೆ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಅಂದು ರಾಜಮಾರ್ಗದುದ್ದಕ್ಕೂ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಡಿಸಿಪಿಗಳಾದ ಎನ್. ವಿಷ್ಣುವರ್ಧನ್, ಡಾ. ವಿಕ್ರಂ ವಿ. ಅಮಟೆ, ಬಿ.ವಿ. ಕಿತ್ತೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಎನ್. ಚೆನ್ನಪ್ಪ ಹಾಗೂ ಮುಡಾ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಎನ್. ಲಕ್ಷ್ಮೀಶ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Translate »