ಮೈಸೂರಿನಿಂದ ಬೆಂಗಳೂರಿಗೆ ಹಾರಿತು `ಜೀವಂತ’ ಹೃದಯ
ಮೈಸೂರು

ಮೈಸೂರಿನಿಂದ ಬೆಂಗಳೂರಿಗೆ ಹಾರಿತು `ಜೀವಂತ’ ಹೃದಯ

July 30, 2018
  • ಗ್ರೀನ್ ಕಾರಿಡಾರ್ ಮೂಲಕ ಅಂಗಾಂಗ ರವಾನೆ
  • ಕಟ್ಟಡದ ಮೇಲಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿಯಿಂದ 6 ಜನರಿಗೆ ಜೀವದಾನ
  • ಗಂಟೆಗೆ 127 ಕಿ.ಮೀ. ವೇಗದಲ್ಲಿ ಆಂಬುಲೆನ್ಸ್‍ನಲ್ಲಿ ಬೆಂಗಳೂರು ತಲುಪಿದ ಅಂಗಾಂಗ

ಮೈಸೂರು: ಕಟ್ಟಡವೊಂದರಲ್ಲಿ ಕೆಲಸ ಮಾಡುವ ವೇಳೆ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರ ಅಂಗಾಂಗ ದಾನ ಮಾಡುವ ಮೂಲಕ ಅವರ ಪೋಷಕರು ಮಾನವೀಯತೆ ಮೆರೆದರೆ, ವೈದ್ಯರು ಮತ್ತು ಪೊಲೀಸರು ಕ್ಷಿಪ್ರ ಗತಿಯಲ್ಲಿ ಕಾರ್ಯಾಚರಣೆ ಮಾಡಿ ಬೇರ್ಪಡಿಸಿದ ಅಂಗಾಂಗಗಳನ್ನು ಗ್ರೀನ್ ಕಾರಿಡಾರ್ ಮೂಲಕ ಬೆಂಗಳೂರಿಗೆ ನಿಗದಿತ ಸಮಯಕ್ಕೂ ಮುನ್ನ ತಲುಪಿಸುವ ಮೂಲಕ ಸಾರ್ಥಕ ಘಟನೆಯೊಂದಕ್ಕೆ ಸಾಕ್ಷಿಯಾದರು.

ಮೈಸೂರು ಜಿಲ್ಲೆಯ ಬನ್ನೂರು ಹೋಬಳಿಯ ನಿವಾಸಿ ಕೇತುಪುರ ಗ್ರಾಮದ ಸುಬ್ಬೇಗೌಡ ಎಂಬುವರ ಮಗ ಪುಟ್ಟೇಗೌಡ(44) ಎಂಬುವರ ಜೀವಂತ ಹೃದಯ ಸೇರಿದಂತೆ ವಿವಿಧ ಅಂಗಾಂಗಗಳು ಬೆಂಗಳೂರು ತಲುಪಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ 6 ಜನರ ಬದುಕನ್ನು ಬೆಳಕಾಗಿಸಿದೆ.

ಜು.27ರಂದು ನಜರ್‍ಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಘವೇಂದ್ರನಗರದಲ್ಲಿ ಕೆಲಸ ಮಾಡುತ್ತಿದ್ದಾಗ 12 ಅಡಿ ಎತ್ತರದಿಂದ ಆಯ ತಪ್ಪಿ ಕೆಳಗೆ ಬಿದ್ದಿದ್ದ ಪುಟ್ಟೇಗೌಡ ಅವರಿಗೆ ಗಂಭೀರ ಗಾಯವಾಗಿತ್ತು. ತಲೆ ಸೇರಿದಂತೆ ಮೈ-ಕೈಗೆ ಗಂಭೀರ ಗಾಯವಾಗಿದ್ದ ಪುಟ್ಟೇಗೌಡ ಅವರನ್ನು ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ಮೂತ್ರಪಿಂಡ ಶಾಸ್ತ್ರದ ಮುಖ್ಯಸ್ಥರಾದ ಡಾ. ಮಂಜುನಾಥ್ ಶೆಟ್ಟಿ ನೇತೃತ್ವದಲ್ಲಿ ವೈದ್ಯರು ಅವಿರತ ಶ್ರಮ ವಹಿಸಿ ಚಿಕಿತ್ಸೆ ನೀಡಿದರೂ ಪುಟ್ಟೇಗೌಡ ಅವರ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿಲ್ಲ.

ಹಂತ ಹಂತವಾಗಿ ಅವರ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಿತ್ತು. ಶನಿವಾರ ಮಧ್ಯಾಹ್ನ ಪುಟ್ಟೇಗೌಡ ಅವರ ಮೆದುಳು ನಿಷ್ಕ್ರೀಯವಾಯಿತು. ಇದನ್ನು ಗಮನಿಸಿದ ಡಾ. ಮಂಜುನಾಥ ಶೆಟ್ಟಿ ಅವರು ಪುಟ್ಟೇಗೌಡ ಅವರ ಪೋಷಕರಿಗೆ ಮಾಹಿತಿ ತಿಳಿಸಿ ಪುಟ್ಟೇಗೌಡ ಅವರು ಬದುಕುವ ಸಾಧ್ಯತೆ ಕಡಿಮೆ ಇರುವುದನ್ನು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಪೋಷಕರು ಅಂಗಾಂಗ ದಾನ ಮಾಡುವುದಕ್ಕೆ ಒಪ್ಪಿಗೆ ನೀಡಿ ಮಗನ ಸಾವನ್ನು ಸಾರ್ಥಕಗೊಳಿಸಲು ಸಮ್ಮತಿಸಿದರು. ಕೂಡಲೇ ಈ ವಿಷಯವನ್ನು ಬೆಂಗಳೂರಿನ ನಾರಾಯಣ ಹೃದಯಾಲಯ ಸೇರಿದಂತೆ ಮುಂತಾದ ಆಸ್ಪತ್ರೆಗಳ ಹಿರಿಯ ವೈದ್ಯರಿಗೆ ತಿಳಿಸಿದ್ದಾರೆ. ಹೃದಯ ಸೇರಿದಂತೆ ವಿವಿಧ ಅಂಗಾಂಗಗಳ ಬೇಡಿಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮೈಸೂರು ನಗರ ಪೊಲೀಸರನ್ನು ಸಂಪರ್ಕಿಸಿ ಅಂಗಾಂಗ ಸಾಗಿಸುವುದಕ್ಕೆ ಸುಗಮ ಟ್ರಾಫಿಕ್ ವ್ಯವಸ್ಥೆ ಮಾಡಿಕೊಡುವಂತೆ ಕೋರಿದ್ದಾರೆ.

ಭಾನುವಾರ ಮುಂಜಾನೆ 5 ಗಂಟೆಯಿಂದಲೇ ಮೈಸೂರು ಸಂಚಾರಿ ಪೊಲೀಸರು ಮೈಸೂರು ಜೆಎಸ್‍ಎಸ್ ಆಸ್ಪತ್ರೆಯಿಂದ ಬೆಂಗಳೂರು ರಸ್ತೆ ಗ್ರೀನ್ ಕಾರಿಡಾರ್ ವ್ಯವಸ್ಥೆ ಜಾರಿಗೊಳಿಸಿ ಕರ್ತವ್ಯಕ್ಕೆ ಹಾಜರಾಗಿದ್ದರು. ಅಲ್ಲದೇ ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ ಹಾಗೂ ಬೆಂಗಳೂರು ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದು, ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 6.45ಕ್ಕೆ ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಯಿಂದ ಆಂಬುಲೆನ್ಸ್‍ನಲ್ಲಿ ಹೊರಟ ಅಂಗಾಂಗಗಳು ಬೆಳಿಗ್ಗೆ 8.20ಕ್ಕೆ ಬೆಂಗಳೂರಿನ ನಾರಾಯಣ ಹೃದಯಾಲಯವನ್ನು ತಲುಪಿತು.

ಏನೇನು?: ಪುಟ್ಟೇಗೌಡ ಅವರ ಜೀವಂತ ಹೃದಯವನ್ನು ನಾರಾಯಣ ಹೃದಯಾಲಯಕ್ಕೆ ನೀಡಲಾಯಿತು. ಒಂದು ಕಿಡ್ನಿಯನ್ನು ಬೆಂಗಳೂರಿನ ಇನ್‍ಸ್ಟಿಟ್ಯೂಟ್ ನೆಪ್ರೋಲಜಿ ಸಂಸ್ಥೆಗೆ, ಲಿವರ್ ಅನ್ನು ಆಸ್ಟರ್ ಸಿಎಂಐ ಆಸ್ಪತ್ರೆಗೆ, ಮತ್ತೊಂದು ಕಿಡ್ನಿಯನ್ನು ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ 46 ವರ್ಷದ ರೋಗಿಯೊಬ್ಬರಿಗೆ ಜೋಡಣೆ ಮಾಡಲಾಯಿತು. ಅಲ್ಲದೇ ಕಾರ್ನಿಯಾವನ್ನು ಬೆಂಗಳೂರಿನ ನೇತ್ರಾಲಯಕ್ಕೆ ನೀಡಲಾಗಿದೆ.

ಈ ಸಂಬಂಧ ಡಾ. ಮಂಜುನಾಥ ಶೆಟ್ಟಿ ಅವರು `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಪುಟ್ಟೇಗೌಡ ಅವರ ಆರೋಗ್ಯ ಸ್ಥಿತಿ ತೀರಾ ಕ್ಷೀಣಿಸಿತ್ತು. ಈ ಹಿನ್ನೆಲೆಯಲ್ಲಿ ಅವರ ಪೋಷಕರಿಗೆ ವಿಷಯ ತಿಳಿಸಲಾಗಿತ್ತು. ಈ ನಡುವೆ ನೋವಿನಲ್ಲೂ ಅವರು ಪುಟ್ಟೇಗೌಡ ಅವರ ಅಂಗಾಂಗಗಳನ್ನು ದಾನ ಮಾಡುವುದಕ್ಕೆ ದೊಡ್ಡ ಮನಸ್ಸು ಮಾಡಿದರು. ಅಲ್ಲದೇ ಸಂಕಷ್ಟದಲ್ಲಿದ್ದ 6 ಮಂದಿಗೆ ಅವರು ನೆರವಾದರು. ತ್ವರಿತ ಗತಿಯಲ್ಲಿ ಅತೀ ಸೂಕ್ಷ್ಮವಾದ ಶಸ್ತ್ರ ಚಿಕಿತ್ಸೆ ನಡೆಸಿ ಅಂಗಾಂಗಗಳನ್ನು ಬೇರ್ಪಡಿಸಿ ಬೆಂಗಳೂರಿಗೆ ಸುರಕ್ಷಿತವಾಗಿ ನಿಗದಿತ ಅವಧಿಯ ವೇಳೆಗೆ ಸಾಗಿಸಲಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಅಂಗಾಂಗ ದಾನ ಮಾಡಿ ಸಂಕಷ್ಟದಲ್ಲಿರುವವರಿಗೆ ನೆರವಾಗುವುದು ಮಹತ್ವ ಪಡೆಯುತ್ತಿದೆ. ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಈ ನಡುವೆ ಕೇಂದ್ರ ಸರ್ಕಾರ ಅಂಗಾಂಗ ದಾನ ಮಾಡುವವರಿಗಾಗಿ ಯೋಜನೆಯೊಂದನ್ನು ಪ್ರಕಟಿಸುತ್ತಿದೆ. ವರ್ಷಕ್ಕೆ 1 ಲಕ್ಷ ರೂ.ನಂತೆ 5 ವರ್ಷದ ಅವಧಿಯಲ್ಲಿ 5 ಲಕ್ಷ ರೂಪಾಯಿ ನೀಡುವ ಕಾರ್ಯಕ್ರಮವನ್ನು ಜಾರಿಗೊಳಿಸಿದೆ.

ಮೊದಲ ಹೃದಯ: ಮೈಸೂರು ನಗರದಿಂದ ಬೆಂಗಳೂರಿಗೆ ಇಂದು ಕೊಂಡೊಯ್ದಿದ್ದು ಮೊದಲ ಜೀವಂತ ಹೃದಯವಾಗಿದೆ. ಜುಲೈ 7ರಂದು ಮೈಸೂರಿನ ಅಪೋಲೋ ಆಸ್ಪತ್ರೆಯಿಂದ ಚಾಮುಂಡಿಬೆಟ್ಟದಲ್ಲಿ ಅಪಘಾತವಾಗಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಜೆಎಸ್‍ಎಸ್ ಆಸ್ಪತ್ರೆಯ ವಿದ್ಯಾರ್ಥಿನಿ ಎಂ.ಸಿ.ನಮನ ಎಂಬುವರ ಹೃದಯದ ಕವಾಟ, ಕಿಡ್ನಿ ಸೇರಿದಂತೆ ವಿವಿಧ ಅಂಗಾಂಗಗಳು ಬೆಂಗಳೂರಿಗೆ ಕೊಂಡೊಯ್ಯಲಾಗಿತ್ತು. ಇದೀಗ ಜೀವಂತ ಹೃದಯವೇ ಬೆಂಗಳೂರಿಗೆ ತೆಗೆದುಕೊಂಡು ಹೋಗಿರುವುದು ಮೊದಲ ಪ್ರಕರಣವಾಗಿದೆ.

ತ್ವರಿತ ಗತಿಯಲ್ಲಿ ವ್ಯವಸ್ಥೆ
ಇಂದು ಮುಂಜಾನೆ 5.30ಕ್ಕೆ ನಾರಾಯಣ ಹೃದಯಾಲಯದಿಂದ ನನಗೆ ಕರೆ ಮಾಡಿ ಗ್ರೀನ್ ಕಾರಿಡಾರ್ ಮೂಲಕ ವ್ಯವಸ್ಥೆ ಮಾಡಿಕೊಡುವಂತೆ ಕೇಳಿಕೊಂಡರು. ಈ ವೇಳೆ ಅರ್ಧ ಗಂಟೆಯಲ್ಲಿಯೇ ಮೈಸೂರಿನ ವಿವಿಧ ಠಾಣೆಯ ಪೊಲೀಸರನ್ನು ನಿಯೋಜನೆಗೊಳಿಸಿ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಲಾಯಿತು. ಬೆಳಿಗ್ಗೆ 6.45ಕ್ಕೆ ಜೆಎಸ್‍ಎಸ್ ಆಸ್ಪತ್ರೆಯಿಂದ ಹೃದಯ ಸೇರಿದಂತೆ ವಿವಿಧ ಅಂಗಾಂಗಗಳಿದ್ದ ಆಂಬುಲೆನ್ಸ್ ಪ್ರಯಾಣ ಬೆಳಿಸಿತು. ಬೆಂಗಳೂರುವರೆಗೂ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಿದ್ದರಿಂದ 2 ಗಂಟೆಯೊಳಗೆ ಅಂಗಾಂಗಗಳು ಬೆಂಗಳೂರು ತಲುಪಿದ ಮಾಹಿತಿ ಲಭ್ಯವಾಯಿತು. – ಡಾ. ಎ.ಸುಬ್ರಹ್ಮಣ್ಯೇಶ್ವರ ರಾವ್, ನಗರ ಪೊಲೀಸ್ ಆಯುಕ್ತ

Translate »