ಉದ್ಯಮಿಯಾಗು ಉದ್ಯೋಗ ನೀಡು…
News

ಉದ್ಯಮಿಯಾಗು ಉದ್ಯೋಗ ನೀಡು…

October 12, 2021

ಬೆಂಗಳೂರು, ಅ.11(ಕೆಎಂಶಿ)- ಸುಸ್ಥಿರ ಬೆಳವಣಿಗೆ ಮತ್ತು ಹೂಡಿಕೆಗಳಿಗೆ ಆದ್ಯತೆ ನೀಡುತ್ತಿರುವ ಕರ್ನಾಟಕ ಹೊಸ ತಂತ್ರಜ್ಞಾನಗಳಿಗೆ ಸಂಬಂಧಿಸಿದಂತೆ ಸಹಭಾಗಿತ್ವಕ್ಕೆ ಸದಾ ಆಸಕ್ತಿ ತೋರಿದೆ, ಭವಿಷ್ಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದ ಬೆಳವಣಿಗೆಗೆ ಪ್ರೋತ್ಸಾಹ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ತಿಳಿಸಿದ್ದಾರೆ.

‘ಉದ್ಯಮಿಯಾಗು ಉದ್ಯೋಗ ನೀಡು’ ಹಾಗೂ “ಕೈಗಾರಿಕಾ ಅದಾಲತ್’ ಕಾರ್ಯ ಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಭವಿಷ್ಯದಲ್ಲಿ ಪ್ರತಿ ವಲಯದಲ್ಲೂ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದ ಬೆಳವಣಿಗೆಗೆ ಆದ್ಯತೆ ನೀಡಬೇಕಾಗಿದೆ, ಹೂಡಿಕೆಗೆ ಪ್ರೋತ್ಸಾಹಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಉದ್ಯಮ ಸ್ಥಾಪಿಸಿ ಸಹಸ್ರಾರು ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಸುವ ತಾಕತ್ತು ಯುವಶಕ್ತಿಯಲ್ಲಿದೆ, ಸಣ್ಣ ಪ್ರಮಾಣದಲ್ಲಿ ಉದ್ಯಮ ಸ್ಥಾಪಿಸಿ, ದೊಡ್ಡ ಮಟ್ಟಕ್ಕೆ ಕೊಂಡೊಯ್ದಿರುವ ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ಸಣ್ಣ ಉದ್ಯಮಿ ಗಳ ಸಚಿವ ಎಂ.ಟಿ.ಬಿ. ನಾಗರಾಜ್ ಉತ್ತಮ ಉದಾಹರಣೆ. ಸಣ್ಣ ಹೆಜ್ಜೆ ಇಡುವ ಮೂಲಕ ದೊಡ್ಡದನ್ನು ಸಾಧಿಸಬಹುದು, ಸಣ್ಣ ಹೆಜ್ಜೆ ಇಡಲು ಇದು ಆರಂಭದ ಪ್ರಯತ್ನವಾಗಲಿ, ಎಲ್ಲರೂ ಇದರ ಸದುಪಯೋಗಪಡಿಸಿಕೊಳ್ಳಿ ಎಂದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಮುರುಗೇಶ್ ಆರ್. ನಿರಾಣಿ ಮಾತನಾಡಿ, ಯುವಜನರು ಶಿಕ್ಷಣದ ನಂತರ ಕೆಲಸ ಹುಡುಕುವ ಬದಲು ಸ್ವಂತ ಉದ್ಯಮ ಸ್ಥಾಪಿಸಿ ಇತರರಿಗೆ ಉದ್ಯೋಗ ನೀಡುವಂತಾಗಬೇಕು ಎಂದರು. ಬೆಂಗಳೂರಿನ ನಂತರ, ಕಲಬುರಗಿ, ಮೈಸೂರು, ಬೆಳಗಾವಿ, ಕರಾವಳಿ ಭಾಗದ ಮಂಗಳೂರು ಹಾಗೂ ತುಮಕೂರಿನಲ್ಲಿ ಕಾರ್ಯಕ್ರಮಗಳು ನಡೆಯಲಿವೆ ಎಂದರು.

Translate »