ಪಾಸ್‍ಪೋರ್ಟ್ ಪಡೆಯುವುದು ಇನ್ನು ಸುಲಭ
ಮೈಸೂರು

ಪಾಸ್‍ಪೋರ್ಟ್ ಪಡೆಯುವುದು ಇನ್ನು ಸುಲಭ

October 23, 2018

ಬೆಂಗಳೂರು: ಪಾಸ್ ಪೋರ್ಟ್ ಪಡೆಯಲು ಇನ್ನು ಮುಂದೆ ಸುದೀರ್ಘ ದಿನಗಳ ಕಾಲ ಕಾಯಬೇಕಿಲ್ಲ. ಪಾಸ್ ಪೋರ್ಟ್ ಸೇವೆಯನ್ನು ಸುಲಭಗೊಳಿಸುವ ಸಲುವಾಗಿ ಸ್ಥಳೀಯ ಪಾಸ್ ಪೋರ್ಟ್ ಕಚೇರಿ ಆ್ಯಪ್ ಅಭಿವೃದ್ಧಿ ಪಡಿಸಿದ್ದು, ಇದರಿಂದ ಸೇವೆಗಳು ಅತ್ಯಂತ ಸುಲಭಗೊಂಡಿವೆ.

ಪಾಸ್ ಪೋರ್ಟ್ ಪಡೆಯುವ ಪ್ರಕ್ರಿಯೆ ವೇಳೆ ಆಯಾ ಪ್ರದೇಶದ ಪೊಲೀಸ್ ಠಾಣೆಯಿಂದ ಪೊಲೀಸ್ ಪೇದೆಯೊಬ್ಬರು ಮನೆಗೆ ಬಂದು ಪರಿಶೀಲನೆ ನಡೆಸುವುದು ಸಾಮಾನ್ಯ. ಇದಕ್ಕೆ ಕನಿಷ್ಠ ಎಂದರೂ 20-35 ದಿನಗಳ ಕಾಲ ಬೇಕಾಗುತ್ತಿತ್ತು. ಆದರೆ, ಆ್ಯಪ್ ಸೇವೆಯಿಂದಾಗಿ ಪೊಲೀಸ್ ಪರಿಶೀಲನೆ 5-9 ದಿನ ಗಳಲ್ಲಿ ಪೂರ್ಣಗೊಳ್ಳಲಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸ್ಥಳೀಯ ಪಾಸ್ ಪೋರ್ಟ್ (ಆರ್‍ಪಿಒ) ಅಧಿಕಾರಿ ಭರತ್ ಕುಮಾರ್ ಕುಥಾಟಿಯವರು, ಪೊಲೀಸರು ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದು ಅಥವಾ ಪಾಸ್‍ಪೋರ್ಟ್‍ಗಾಗಿ ಅರ್ಜಿ ಸಲ್ಲಿಸಿದ ವ್ಯಕ್ತಿಯೇ ಠಾಣೆಗೆ ಬರುವುದು ಇನ್ನು ಮುಂದೆ ಕಡ್ಡಾಯವಾಗಿರುವುದಿಲ್ಲ. ಪೊಲೀಸರು ವ್ಯಕ್ತಿಯ ನಾಗರಿಕತ್ವವನ್ನು ದೃಢಪಡಿಸಬೇಕು. ವ್ಯಕ್ತಿಯ ಹಿನ್ನೆಲೆ ಹಾಗೂ ಕ್ರಿಮಿನಲ್ ರೆಕಾರ್ಡ್‍ಗಳನ್ನು ಪರಿಶೀಲನೆ ನಡೆಸಬೇಕಾಗುತ್ತದೆ. ಮನೆಗಳಿಗೆ ಭೇಟಿ ನೀಡಿಯೇ ಪರಿಶೀಲನೆ ನಡೆಸಬೇಕೆಂದು ಪೊಲೀಸರಿಗೆ ಎನಿಸಿದರೆ ಅವರು ಪರಿಶೀಲನೆ ನಡೆಸಬಹುದು ಎಂದು ಹೇಳಿದ್ದಾರೆ. ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಅಗತ್ಯವಿಲ್ಲ ಎಂದೆನಿಸಿದಾಗ ಪೊಲೀಸರು ಆ್ಯಪ್ ಮೂಲಕ ವ್ಯಕ್ತಿಯ ಮಾಹಿತಿಯನ್ನು ಹಾಕಬಹುದು. ಈ ಮಾಹಿತಿಗಳು ಉನ್ನತಾಧಿಕಾರಿಗಳಿಗೆ ತಲುಪುತ್ತದೆ ಎಂದು ತಿಳಿಸಿದ್ದಾರೆ.

ಆ್ಯಪ್ ಕುರಿತಂತೆ ಈಗಾಗಲೇ ರಾಜ್ಯ ಪೊಲೀಸರೊಂದಿಗೆ ಮಾತುಕತೆ ನಡೆಸಿದ್ದೇವೆ. ಈ ಬಗ್ಗೆ ಪೊಲೀಸರಿಂದಲೂ ಧನಾತ್ಮಕ ಪ್ರತಿಕ್ರಿಯೆಗಳು ಬಂದಿವೆ. ಶೀಘ್ರದಲ್ಲಿಯೇ ಪಾಸ್‍ಪೋರ್ಟ್ ಪ್ರಕ್ರಿಯೆ ಸುಲಭ ಹಾಗೂ ಶೀಘ್ರವಾಗಲಿದೆ ಎಂದಿದ್ದಾರೆ.

Translate »