ಬೇಟೆಗೆ ತೆರಳಿದ್ದ ವ್ಯಕ್ತಿ ಗುಂಡಿಗೆ ಬಲಿ
ಮೈಸೂರು

ಬೇಟೆಗೆ ತೆರಳಿದ್ದ ವ್ಯಕ್ತಿ ಗುಂಡಿಗೆ ಬಲಿ

October 23, 2018

ಮಡಿಕೇರಿ:  ಬೇಟೆಗಾಗಿ ತೆರಳಿದ್ದ ಇಬ್ಬರಲ್ಲಿ ಗುಂಡೇಟು ಬಿದ್ದು ಓರ್ವ ಸಾವಿಗೀಡಾಗಿದ್ದು, ಮತ್ತೊಬ್ಬ ಪರಾರಿಯಾಗಿರುವ ಬಗ್ಗೆ ಮಡಿಕೇರಿ ಬಳಿಯ ಮಕ್ಕಂದೂರು ಸಮೀಪದ ಎಮ್ಮತ್ತಾಳು ಗ್ರಾಮದಿಂದ ವರದಿಯಾಗಿದೆ. ಎಮ್ಮತ್ತಾಳು ಗ್ರಾಮದ ಅಯ್ಯಕುಟ್ಟೀರ ದೇವಯ್ಯ ಎಂಬುವರ ಪುತ್ರ ರಂಜಿತ್(32) ಗುಂಡೇಟಿಗೆ ಬಲಿಯಾದವರಾಗಿದ್ದು, ಸಹ ಬೇಟೆಗಾರ ದಕ್ಷಿಣ ಕೊಡಗಿನ ಶ್ರೀಮಂಗಲ ವೆಸ್ಟ್ ನೆಮ್ಮಾಲೆ ನಿವಾಸಿ ಕಾಳಮಾಡ ದಿನೇಶ್ ತಲೆಮರೆಸಿಕೊಂಡಿದ್ದಾರೆ.

ವಿವರ: ರಂಜಿತ್ ಮತ್ತು ದಿನೇಶ್ ಸಂಬಂಧಿಕರಾಗಿದ್ದು, ದಸರಾ ಹಬ್ಬದ ಹಿನ್ನೆಲೆಯಲ್ಲಿ ವೆಸ್ಟ್ ನೆಮ್ಮಾಲೆಯ ದಿನೇಶ್, ಎಮ್ಮತ್ತಾಳು ವಿನ ರಂಜಿತ್ ಮನೆಗೆ ಬಂದಿದ್ದರು ಎನ್ನಲಾಗಿದೆ. ಭಾನುವಾರ ಸಂಜೆ ರಂಜಿತ್ ಮತ್ತು ದಿನೇಶ್ ಬಂದೂಕಿನೊಂದಿಗೆ ಕಾಡು ಪ್ರಾಣಿ ಬೇಟೆಗಾಗಿ ತೆರಳಿದ್ದು, ಇಬ್ಬರೂ ಬೇರೆ ಬೇರೆ ದಿಕ್ಕಿನಲ್ಲಿ ತೆರಳಿದ್ದರು ಎನ್ನಲಾಗಿದೆ. ರಾತ್ರಿ ತೋಟದ ಕಡೆಯಿಂದ ಗುಂಡಿನ ಶಬ್ದ ಕೇಳಿ ಬಂದಾಗ ರಂಜಿತ್ ಅವರ ತಂದೆ ದೇವಯ್ಯ ಶಬ್ದ ಬಂದ ಸ್ಥಳಕ್ಕೆ ಹೋಗಿ ನೋಡಿದಾಗ ಅವರ ಪುತ್ರ ರಂಜಿತ್ ಗುಂಡೇಟು ಬಿದ್ದುಸಾವನ್ನಪ್ಪಿರುವುದು ಕಂಡು ಬಂದಿದೆ. ಇದರ ಬಗ್ಗೆ ದಿನೇಶ್‍ನನ್ನು ವಿಚಾರಿಸಿದಾಗ ಆತ ರಂಜಿತ್ ಕಾಲು ಜಾರಿ ಬಿದ್ದಾಗ ಗುಂಡು ಹಾರಿ ಸಾವನ್ನಪ್ಪಿದನೆಂದು ತಿಳಿಸಿದ ಎನ್ನಲಾಗಿದೆ. ನಂತರ ಆತ ತನ್ನ ಬಂದೂಕು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

ಮೂಲವೊಂದರ ಪ್ರಕಾರ ಕಾಡಿನಲ್ಲಿ ಪ್ರತ್ಯೇಕಗೊಂಡಿದ್ದ ರಂಜಿತ್ ಹಾಗೂ ದಿನೇಶ್, ಬೇಟೆಗೆ ಶೋಧಿಸುವಾಗ ಒಂದೆಡೆ ಶಬ್ಧ ಕೇಳಿ ಬಂದಿದೆ. ಕಾಡು ಹಂದಿಯೇ ಇರಬಹುದು ಎಂದು ದಿನೇಶ್ ಶಬ್ದ ಬಂದ ಕಡೆ ಗುಂಡು ಹಾರಿಸಿದಾಗ ಈ ದುರಂತ ಸಂಭವಿಸಿದೆ ಎನ್ನಲಾಗುತ್ತಿದೆ. ಮೃತ ರಂಜಿತ್ ತಂದೆ ದೇವಯ್ಯ ನೀಡಿದ ದೂರನ್ನು ದಾಖಲಿಸಿಕೊಂಡಿರುವ ಮಡಿಕೇರಿ ಪೊಲೀಸರು ದಿನೇಶ್ ವಿರುದ್ಧ ಭಾರತ ದಂಡ ಸಂಹಿತೆ 304ರಡಿ ಪ್ರಕರಣ ದಾಖಲಿಸಿಕೊಂಡು ಸದರಿ ಬಂದೂಕು ವಶಪಡಿಸಿಕೊಂಡು, ದಿನೇಶ್‍ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Translate »