ಗೋ ರಕ್ಷಕ ಶಿವು ಉಪ್ಪಾರ್ ಅನುಮಾನಾಸ್ಪದ ಸಾವು ಪ್ರಕರಣ ಸಿಬಿಐ ತನಿಖೆಗೆ ಶ್ರೀರಾಮಸೇನೆ ಮನವಿ
ಮೈಸೂರು

ಗೋ ರಕ್ಷಕ ಶಿವು ಉಪ್ಪಾರ್ ಅನುಮಾನಾಸ್ಪದ ಸಾವು ಪ್ರಕರಣ ಸಿಬಿಐ ತನಿಖೆಗೆ ಶ್ರೀರಾಮಸೇನೆ ಮನವಿ

January 21, 2021

ಮೈಸೂರು,ಜ.20(ಪಿಎಂ)-ಗೋ ರಕ್ಷಕ, ಹಿಂದೂ ಕಾರ್ಯಕರ್ತ ಶಿವು ಉಪ್ಪಾರ್ ಅನು ಮಾನಾಸ್ಪದ ಸಾವು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿ ಶ್ರೀರಾಮಸೇನೆ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿದ ಸಂಘಟನೆ ಕಾರ್ಯ ಕರ್ತರು, ಬೆಳಗಾವಿ ಜಿಲ್ಲೆಯಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾದ ಗೋ ರಕ್ಷಕ ಶಿವು ಉಪ್ಪಾರ್ ಪ್ರಕರಣ ಸಂಬಂಧ ತನಿಖೆಯಲ್ಲಿ ಪ್ರಗತಿ ಕಾಣುತ್ತಿಲ್ಲ. ಉನ್ನತ ಮಟ್ಟದ ತನಿಖೆ ನಡೆಸದಿರುವುದು ಹಿಂದೂ ಕಾರ್ಯಕರ್ತನೊಬ್ಬನ ಪ್ರಾಣಕ್ಕೆ ಬೆಲೆಯೇ ಇಲ್ಲವೇ ಎಂಬ ಪ್ರಶ್ನೆ ಹುಟ್ಟು ಹಾಕಿದೆ ಎಂದು ಕಿಡಿಕಾರಿದರು.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಅನಿಲ್ ಹುಣಸೂರು, ಈಗ ನಡೆಯುತ್ತಿರುವ ಆಮೆಗತಿ ತನಿಖೆಯಿಂದ ಬಹುಶಃ ನ್ಯಾಯ ಸಿಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಹೀಗಾಗಿ ಸಿಬಿಐ ತನಿಖೆಗೆ ಪ್ರಕರಣ ಒಪ್ಪಿಸಬೇಕೆಂದು ಆಗ್ರಹಿಸಿ ಶ್ರೀರಾಮಸೇನೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ಗೃಹ ಮಂತ್ರಿಗಳಿಗೆ ಮನವಿ ಸಲ್ಲಿಸುವ ಅಭಿಯಾನವನ್ನು ಇಂದು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಸಂಘಟನೆ ನಗರಾಧ್ಯಕ್ಷ ಸಂಜಯ್, ಕಾರ್ಯಕರ್ತರಾದ ಜೀವನ್, ಮಧು, ಅಭಿಷೇಕ್ ನಿಕ್ಷೇಪ್, ಪ್ರಮೋದ್, ನಾಗರಾಜು, ರಘು, ಪ್ರವೀಣ್, ಸುನಿಲ್, ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.

Translate »