ಕೆ.ಆರ್.ಪೇಟೆಯಲ್ಲೂ ಕಫ್ರ್ಯೂಗೆ ಉತ್ತಮ ಪ್ರತಿಕ್ರಿಯೆ
ಮಂಡ್ಯ

ಕೆ.ಆರ್.ಪೇಟೆಯಲ್ಲೂ ಕಫ್ರ್ಯೂಗೆ ಉತ್ತಮ ಪ್ರತಿಕ್ರಿಯೆ

April 25, 2021

ಕೆ.ಆರ್.ಪೇಟೆ,ಏ.24(ಶ್ರೀನಿವಾಸ್)-ಪಟ್ಟಣ ಸೇರಿದಂತೆ ತಾಲೂಕಿನ ಬೂಕನಕೆರೆ, ಕಿಕ್ಕೇರಿ, ಅಕ್ಕಿಹೆಬ್ಬಾಳು, ಸಂತೇಬಾಚಹಳ್ಳಿ, ಶೀಳನೆರೆ ಹೋಬಳಿಯ ಕೇಂದ್ರಗಳಲ್ಲಿ ವೀಕೆಂಡ್ ಕಫ್ರ್ಯೂ ಸಂಪೂರ್ಣ ಯಶಸ್ವಿಯಾಯಿತು. ತಹಸೀಲ್ದಾರ್ ಶಿವಮೂರ್ತಿ, ಸರ್ಕಲ್ ಇನ್ಸ್‍ಪೆಕ್ಟರ್ ಎಂ.ಕೆ.ದೀಪಕ್, ಸಬ್‍ಇನ್ಸ್‍ಪೆಕ್ಟರ್ ಬ್ಯಾಟರಾಯಗೌಡ, ಮುಖ್ಯಾ ಧಿಕಾರಿ ಸತೀಶ್‍ಕುಮಾರ್ ಪಟ್ಟಣಾದ್ಯಂತ ಸಂಚರಿಸಿ ಪರಿಸ್ಥಿತಿ ವೀಕ್ಷಿಸಿದರು.

ಸದಾ ಸಾವಿರಾರು ಜನ ಜಂಗುಳಿಯಿಂದ ಗಿಜಿಗುಡುತ್ತಿದ್ದ ಪಟ್ಟಣದ ಹೃದಯ ಭಾಗ ಟಿಬಿ ವೃತ್ತ, ಬಸ್ ನಿಲ್ದಾಣ, ದುರ್ಗಾ ಭವನ್ ವೃತ್ತ, ಟೌನ್ ಕ್ಲಬ್ ವೃತ್ತ/ ಹೇಮಾವತಿ ವೃತ್ತ ಸೇರಿದಂತೆ ಎಲ್ಲಾ ರಸ್ತೆಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ಮೆಡಿಕಲ್ ಸ್ಟೋರ್ಸ್, ಆಸ್ಪತ್ರೆಗಳನ್ನು ಹೊರತುಪಡಿಸಿ ಉಳಿದೆಲ್ಲ ಅಂಗಡಿ-ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಬಂದ್ ಆಗಿದ್ದವು. ಬೈಕ್ ಮೂಲಕ ಜಾಲಿ ರೈಡ್ ಮಾಡಲು ರಸ್ತೆಗೆ ಬಂದ ಯುವಕರಿಗೆ ಪೊಲೀಸರು ಲಘು ಲಾಠಿ ರುಚಿ ತೋರಿಸಿದರು.

ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಗ್ರಾಮಾಂತರ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಸುರೇಶ್ ನೇತೃತ್ವದಲ್ಲಿ ಕಫ್ರ್ಯೂ ಯಶಸ್ವಿಗೆ ಸಂಚರಿಸಿದ ಪೊಲೀಸರು ಹೋಬಳಿ ಕೇಂದ್ರಗಳು ಹಾಗೂ ಪ್ರಮುಖ ಗ್ರಾಮಗಳಲ್ಲಿ ಯಾವುದೇ ಅಂಗಡಿ-ಮುಂಗಟ್ಟು ತೆರೆಯದಂತೆ ಕ್ರಮಕೈಗೊಂಡರು.

ವಾರದ ಸಂತೆ ಬಂದ್: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವಾರದ ಸಂತೆ ನಿಷೇಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯು ಬಿಕೋ ಎನ್ನುತ್ತಿತ್ತು. ಎಳೆನೀರು ಮಾರುಕಟ್ಟೆಗೂ ಬಂದ್ ಬಿಸಿ ತಟ್ಟಿತು. ಇದರಿಂದ ಎಳೆನೀರು ಲಾರಿಗಳು ಮಾರು ಕಟ್ಟೆಯಿಂದ ಹೊರಹೋಗಲು ಸಾಧ್ಯವಾಗದೇ ನಿಂತಲ್ಲೇ ನಿಂತಿದ್ದವು. ಮಾರುಕಟ್ಟೆ ಪ್ರವೇಶಿಸಲು ಬಂದ ಲಾರಿಗಳು ಮಾರುಕಟ್ಟೆಯ ಬಾಗಿಲು ಬಂದ್ ಆಗಿದ್ದ ಕಾರಣ, ಮಾರುಕಟ್ಟೆಯ ಹೊರಗೆ ಮುಖ್ಯರಸ್ತೆಯ ಬದಿ ಸಾಲು ಕಟ್ಟಿ ನಿಂತಿದ್ದ ದೃಶ್ಯಗಳು ಕಂಡು ಬಂತು.

Translate »