ಮಂಡ್ಯದಲ್ಲಿ ವೀಕೆಂಡ್ ಕಫ್ರ್ಯೂ ಯಶಸ್ವಿ
ಮಂಡ್ಯ

ಮಂಡ್ಯದಲ್ಲಿ ವೀಕೆಂಡ್ ಕಫ್ರ್ಯೂ ಯಶಸ್ವಿ

April 25, 2021

ಬೆಳಗ್ಗೆ 10ಗಂಟೆ ಬಳಿಕ ಜಿಲ್ಲೆಯಲ್ಲಿ ಎಲ್ಲವೂ ಬಂದ್
ಆಸ್ಪತ್ರೆ, ಮೆಡಿಕಲ್, ಹಾಲು, ಪೆಟ್ರೋಲ್‍ಗಿತ್ತು ಅವಕಾಶ
ರಸ್ತೆಗಿಳಿದ ಜನರಿಗೆ ಪೊಲೀಸರಿಂದ ಲಾಠಿ ರುಚಿ
ಮಂಡ್ಯದಲ್ಲಿ ಹೆದ್ದಾರಿ ಹೊರತು ರಸ್ತೆ ಸಂಚಾರ ಭಾಗಶಃ ಸ್ತಬ್ಧ
ಗ್ರಾಮೀಣ ಪ್ರದೇಶದಲ್ಲಿ ಎಂದಿನಂತೆ ಜನ-ಜೀವನ
ಮಂಡ್ಯ ಏ.24(ಮೋಹನ್‍ರಾಜ್)-ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ವೀಕೆಂಡ್ ಕಫ್ರ್ಯೂ ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಭಾಗಶಃ ಯಶಸ್ವಿಯಾಗಿದ್ದು, ವೀಕೆಂಡ್ ಕಫ್ರ್ಯೂ ಲಾಕ್‍ಡೌನ್‍ನಂತೆ ಭಾಸವಾಯಿತು.

ಮಂಡ್ಯ ನಗರ ಸೇರಿದಂತೆ ಜಿಲ್ಲೆಯೆಲ್ಲೆಡೆ ಶನಿವಾರ ಬೆಳಗ್ಗೆ 10 ಗಂಟೆಯವರೆಗೆ ದಿನಸಿ, ತರಕಾರಿ, ಮಾಂಸ ಮಾರಾಟ ಸೇರಿದಂತೆ ಅಗತ್ಯ ವಸ್ತುಗಳ ಖರೀದಿ ಜೊತೆಗೆ ಜನ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. 10 ಗಂಟೆ ನಂತರ ಎಲ್ಲವೂ ಬಂದ್ ಆಯಿತು. ಜಿಲ್ಲೆಯಲ್ಲಿ ವೀಕೆಂಡ್ ಕಫ್ರ್ಯೂ ಹೇರಿದ ಪೊಲೀಸರು ಎಲ್ಲಾ ಅಂಗಡಿ-ಮಂಗಟ್ಟು ಗಳನ್ನು ಬಂದ್ ಮಾಡಿಸಿದರು. ಜನರ ಓಡಾಕ್ಕೂ ನಿರ್ಬಂಧ ವಿಧಿಸಿದರು.

ತುರ್ತು ಸೇವೆಗೆ ಅವಕಾಶ: ಬೆಳಗ್ಗೆ 10ಗಂಟೆ ನಂತರ ಅಗತ್ಯ ವಸ್ತುಗಳ ಖರೀದಿಗೆ ಬ್ರೇಕ್ ಹಾಕಿದ್ದ ಪೊಲೀಸರು ತುರ್ತು ಸೇವೆಗಳಿಗೆ ಮಾತ್ರ ಅವಕಾಶ ನೀಡಿದ್ದರು. ಆಸ್ಪತ್ರೆ, ಮೆಡಿಕಲ್, ಹಾಲು, ಪೆಟ್ರೋಲ್, ಆಟೋ, ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸ ಲಾಗಿತ್ತು. ಮಂಡ್ಯ ಜಿಲ್ಲಾದ್ಯಂತ ಸುಮಾರು 60 ಬಸ್‍ಗಳು ವಿವಿಧೆಡೆಗೆ ಸಂಚರಿಸಿ ದವು. ಬಸ್‍ಗಳಲ್ಲಿ ಕೇವಲ 25ರಿಂದ 30 ಮಂದಿಗೆ ಮಾತ್ರ ಅವಕಾಶ ನೀಡ ಲಾಗಿತ್ತು. ಪ್ರಯಾಣಿಕರಿಗೆ ಯಾವುದೇ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.

ನಿರ್ಬಂಧವಿದ್ದರೂ ಪಾರ್ಕ್‍ಗಳಲ್ಲಿ ಜನ: ಪಾರ್ಕ್‍ಗಳಲ್ಲಿ ಜನ ಸಂಚಾರಕ್ಕೆ ನಿರ್ಬಂಧ ವಿದ್ದರೂ ಇಂದು ಬೆಳ್ಳಂಬೆಳಗ್ಗೆ ನಗರದ ಪ್ರಮುಖ ಪಾರ್ಕ್‍ಗಳಲ್ಲಿ ಜನಜಂಗುಳಿ ಏರ್ಪಟ್ಟಿತ್ತು. ವಾಯುವಿಹಾರಕ್ಕೆಂದು ನಗರದ ಸರ್‍ಎಂವಿ ಕ್ರೀಡಾಂಗಣ, ಕಾವೇರಿ ಪಾರ್ಕ್ ಸೇರಿದಂತೆ ಪ್ರಮುಖ ಉದ್ಯಾನವನ ಗಳಲ್ಲಿ ಜನಸಮೂಹ ನೆರೆದಿತ್ತು.

ಅನಗತ್ಯ ಸಂಚರಿಸಿದವರಿಗೆ ಲಾಠಿ ರುಚಿ: ವೀಕೆಂಡ್ ಕಫ್ರ್ಯೂ ಇದ್ದ ಕಾರಣ ಸಾರ್ವ ಜನಿಕರು ರಸ್ತೆಯಲ್ಲಿ ಸಂಚರಿಸದಂತೆ ನಿರ್ಬಂಧ ಹೇರಲಾಗಿತ್ತು. ನಗರದ ಪ್ರಮುಖ ರಸ್ತೆ ಗಳಲ್ಲಿ ಪೊಲೀಸರು ಲಾಠಿ ಬೀಸುತ್ತಿದ್ದದ್ದು ಸಾಮಾನ್ಯವಾಗಿತ್ತು. ಅದರಲ್ಲೂ ಗುತ್ತಲು ರಸ್ತೆಯಲ್ಲಿ ವ್ಯಾಪಕವಾಗಿ ನಿಯಮ ಉಲ್ಲಂ ಘಿಸಿ ಸಂಚರಿಸುತ್ತಿದ್ದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು.

ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್: ಜನ ಸಂಚಾರ ಹೆಚ್ಚಿದ್ದ ಮಂಡ್ಯ ನಗರದ ಪ್ರಮುಖ ರಸ್ತೆಗಳನ್ನು ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಬಂದ್‍ಗೊಳಿಸಿದ್ದ ದೃಶ್ಯಗಳು ಕಂಡು ಬಂದವು. ನಗರದಲ್ಲಿ ಜನನಿಬಿಡ ಗುತ್ತಲು ರಸ್ತೆ, ನೂರಡಿ ರಸ್ತೆ, ಬನ್ನೂರು ರಸ್ತೆ, ವಿ.ವಿ.ರಸ್ತೆ, ಹೊಸಹಳ್ಳಿ ರಸ್ತೆ, ಪೇಟೆಬೀದಿ, ಆರ್.ಪಿ.ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳು ಬ್ಯಾರಿಕೇಡ್ ಮೂಲಕ ಬಂದ್ ಮಾಡಲಾಗಿತ್ತು. ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಚಾರಕ್ಕೆ ಮಾತ್ರ ಅವಕಾಶ ಮುಕ್ತವಾಗಿತ್ತು.

ವಿವಿಧೆಡೆ ಸ್ಯಾನಿಟೈಸಿಂಗ್: ನಗರ ನಗರದ ಎಲ್ಲಾ ವಾರ್ಡ್‍ಗಳನ್ನು ಸ್ಯಾನಿಟೈಸ್ ಮಾಡಲಾಯಿತು. ನಿನ್ನೆಯಿಂದಲೇ ಸ್ಯಾನಿ ಟೈಸಿಂಗ್ ಕಾರ್ಯಕ್ಕೆ ನಗರಸಭೆ ಚಾಲನೆ ನೀಡಿತ್ತು. ಇಂದು ಸಹ ಸ್ಯಾನಿಟೈಸಿಂಗ್ ಕಾರ್ಯ ಮುಂದುವರೆಯಿತು. ನಗರಸಭೆಯ ಹತ್ತಕ್ಕೂ ಹೆಚ್ಚು ಸಿಬ್ಬಂದಿಯಿಂದ ನಗರದ ಬೆಂಗ ಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ, ಫ್ಯಾಕ್ಟರಿ ವೃತ್ತ, ಮಹಾವೀರ ವೃತ್ತ, ಸಂಜಯ ವೃತ್ತ, ಕರ್ನಾಟಕ ಬಾರ್ ಸರ್ಕಲ್, ಹೊಸಹಳ್ಳಿ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳು ಹಾಗೂ ಜನನಿಬಿಡ ಪ್ರದೇಶದಲ್ಲಿ ಹಾಗೂ ಪ್ರಮುಖ ಸರ್ಕಾರಿ ಕಚೇರಿಗಳಲ್ಲಿ ಸ್ಯಾನಿಟೈಸಿಂಗ್ ಮಾಡಲಾಯಿತು.

ದೇಗುಲಗಳಲ್ಲಿ ಅರ್ಚಕರಿಂದ ಪೂಜೆ: ಇಂದು ಶನಿವಾರ ಆಗಿದ್ದರಿಂದ ಜಿಲ್ಲೆಯ ಪ್ರಮುಖ ದೇಗುಲಗಳಲ್ಲಿ ವಿಶೇಷ ಪೂಜೆ ಇರುತ್ತಿತ್ತು. ಆದರೆ ವೀಕೆಂಡ್ ಕಫ್ರ್ಯೂ ಇದ್ದದ್ದರಿಂದ ಸಾಂಪ್ರದಾಯಕ ಪೂಜೆ ಸಲ್ಲಿಸಲಾಯಿತು. ಮೇಲುಕೋಟೆಯ ಚಲುವನಾರಾಯಣಸ್ವಾಮಿ, ಕರಿಘಟ್ಟದ ವೆಂಕಟೇಶ್ವರ, ಮದ್ದೂರಿನ ಉಗ್ರನರಸಿಂಹ ಸ್ವಾಮಿ, ಹೊಳೆ ಆಂಜನೇಯ ಸ್ವಾಮಿ ದೇಗುಲಗಳಲ್ಲಿ ಅರ್ಚಕರ ಸಮ್ಮುಖದಲ್ಲಿ ಪೂಜೆ ನಡೆಯಿತು.

ನಗರ ಪ್ರದೇಶಕ್ಕಷ್ಟೇ ಕಫ್ರ್ಯೂ: ವೀಕೆಂಡ್ ಕಫ್ರ್ಯೂ ಕೇವಲ ಮಂಡ್ಯ ನಗರ ಸೇರಿ ದಂತೆ ತಾಲೂಕು ಹಾಗೂ ಹೋಬಳಿ ಕೇಂದ್ರ ಗಳಿಗಷ್ಟೇ ಸೀಮಿತವಾಗಿತ್ತು. ಗ್ರಾಮೀಣ ಪ್ರದೇಶದಲ್ಲಿ ಎಂದಿನಂತೆ ಜನ ಸಂಚಾರದ ಜೊತೆಗೆ ಅಂಗಡಿ-ಮುಗ್ಗ ಟ್ಟುಗಳು ತೆರೆದಿದ್ದವು. ಗ್ರಾಮೀಣ ಜನರು ಕೃಷಿ ಸೇರಿದಂತೆ ಇನ್ನಿತರ ಚಟುವಟಿಕೆ ಗಳಲ್ಲಿ ಎಂದಿನಂತೆ ತೊಡಗಿಕೊಂಡಿದ್ದ ದೃಶ್ಯಗಳು ಕಂಡು ಬಂದವು.

Translate »