ಮೈಸೂರು, ಜ.31(ಆರ್‍ಕೆಬಿ)- ರಾಜ್ಯ ಹಿಂದುಳಿದ ವರ್ಗ ಗಳ ಆಯೋಗದ ಸದಸ್ಯ ರಾಜಶೇಖರ್ ಅವರು ಸೋಮ ವಾರ ಮೈಸೂರು ತಾಲೂಕಿನ ಪುಟ್ಟೇಗೌಡನಹುಂಡಿ ಮತ್ತು ಪಾಳ್ಯ ಗ್ರಾಮಗಳ ಮನೆ ಮನೆಗೆ ಭೇಟಿ ನೀಡಿ, ಗೌಡ ಲಿಂಗಾಯತ ಸಮುದಾಯದ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ಗೌಡ ಲಿಂಗಾಯತ ಮಹಾಸಭಾ ಪದಾಧಿಕಾರಿಗಳು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮತ್ತು ಸದಸ್ಯರನ್ನು ಭೇಟಿ ಮಾಡಿ ಮೈಸೂರು ಪ್ರಾಂತ್ಯದ ಗೌಡ ಲಿಂಗಾಯತ ಸಮು ದಾಯಕ್ಕೆ ಶೇ.20 ಮೀಸಲಾತಿ ಹಾಗೂ ಗೌಡ ಲಿಂಗಾಯತ ಮತ್ತು ಪಂಚಮಸಾಲಿ ಸಮುದಾಯಗಳು ಎರಡೂ ಒಂದೇ ಎಂದು ಪರಿಗಣಿಸಬೇಕು ಎಂದು ಲಿಖಿತ ಮನವಿ ಸಲ್ಲಿಸಿದ್ದರು.
ಅದರ ಪ್ರಕಾರ ಆಯೋಗದ ಸದಸ್ಯ ರಾಜಶೇಖರ್ ಸೋಮವಾರ ಮೈಸೂರಿಗೆ ಭೇಟಿ ನೀಡಿ ಸರ್ಕಾರಿ ಅತಿಥಿ ಗೃಹದಲ್ಲಿ ಗೌಡ ಲಿಂಗಾಯತ ಸಮುದಾಯದ ಮುಖಂಡರೊಂದಿಗೆ ಚರ್ಚೆ ನಡೆಸಿದರು. ಅವರ ವಾದವನ್ನು ಆಲಿಸಿದರು. ಈ ವೇಳೆ ಗೌಡ ಲಿಂಗಾಯತ ಮತ್ತು ಪಂಚಮಸಾಲಿ ಸಮುದಾಯದ ಸಮನ್ವಯ ಸಮಿತಿ ರಾಜ್ಯ ಸಂಚಾಲಕ ಅಮ್ಮನಪುರ ಮಲ್ಲೇಶ್, ಗೌಡ ಲಿಂಗಾ ಯತ ಸಮುದಾಯದ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಆಯೋಗದ ಸದಸ್ಯರಿಗೆ ಮಾಹಿತಿ ನೀಡಿದರು. ಗೌಡ ಲಿಂಗಾಯಿತ ಮಹಾಸಭಾದ ರಾಜ್ಯಾಧ್ಯಕ್ಷ ಆಲನಹಳ್ಳಿ ಪುಟ್ಟಸ್ವಾಮಿ, ರಾಜ್ಯ ಕಾರ್ಯದರ್ಶಿ ಗಳಾದ ಕೇಬಲ್ ಮಹೇಶ್, ಚಟ್ನಳ್ಳಿ ಪಾಳ್ಯ ಗುರುಸ್ವಾಮಿ, ತೋಟಸ್ವಾಮಿ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಮಹದೇವಪ್ಪ, ದೂರ ಮಂಜುನಾಥ್, ಯುವ ಘಟಕದ ಅಧ್ಯಕ್ಷ ಶಂಭು ಪಟೇಲ್, ಕುಮಾರ್, ಜೋಗಿ ಮಂಜು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎಚ್.ಎಸ್.ಬಿಂದಿಯಾ, ತಾಲೂಕು ಹಿಂದುಳಿದ ವರ್ಗಗಳ ಅಧಿಕಾರಿ ಚಂದ್ರಕಲಾ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.