ಗ್ರೇಡ್ ಸಪರೇಟರ್, ಫ್ಲೈಓವರ್ ಇಲ್ಲವೇ ಅಂಡರ್ ಪಾಸ್
ಮೈಸೂರು

ಗ್ರೇಡ್ ಸಪರೇಟರ್, ಫ್ಲೈಓವರ್ ಇಲ್ಲವೇ ಅಂಡರ್ ಪಾಸ್

December 29, 2022

ಮೈಸೂರು, ಡಿ. 28(ಆರ್‍ಕೆ)- ವಾಹನ ದಟ್ಟಣೆ, ರಸ್ತೆ ಅಪಘಾತಗಳನ್ನು ತಪ್ಪಿಸಲು ಮೈಸೂರಿನ ರಿಂಗ್ ರಸ್ತೆಯ 4 ಬ್ಲಾಕ್‍ಸ್ಪಾಟ್ ಜಂಕ್ಷನ್‍ಗಳಲ್ಲಿ ಫ್ಲೈಓವರ್, ಗ್ರೇಡ್ ಸಪರೇಟರ್ ಅಥವಾ ರೋಡ್ ಅಂಡರ್‍ಪಾಸ್ ನಿರ್ಮಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಮುಡಾ ಅಧ್ಯಕ್ಷ ಯಶಸ್ವಿ ಎಸ್.ಸೋಮ ಶೇಖರ್, ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಹಾಗೂ ಅಧಿಕಾರಿಗಳೊಂದಿಗೆ ಇಂದು ರಿಂಗ್ ರಸ್ತೆಯ ಜಂಕ್ಷನ್‍ಗಳನ್ನು ಪರಿಶೀಲಿಸಿದ ಅವರು, ಅತೀ ಹೆಚ್ಚು ವಾಹನ ಸಂಚರಿಸುವ ಹಾಗೂ ಅಪಘಾತಗಳು ಸಂಭವಿಸುವ ವಿಜಯನಗರ 3 ಮತ್ತು 4ನೇ ಹಂತದ ಬಸವನಹಳ್ಳಿ ಜಂಕ್ಷನ್, ಬೋಗಾದಿ ಸಿಗ್ನಲ್ ಲೈಟ್ ಜಂಕ್ಷನ್ ಹಾಗೂ ಜೆ.ಪಿ. ನಗರ ಬಳಿಯ ಕುಪ್ಪಲೂರು ರಿಂಗ್ ರೋಡ್ ಜಂಕ್ಷನ್‍ಗಳಲ್ಲಿ ಗ್ರೇಡ್ ಸಪರೇಟರ್, ಫ್ಲೈಓವರ್ ಅಥವಾ ಅಂಡರ್‍ಪಾಸ್ ಪೈಕಿ ಆ ಸ್ಥಳಕ್ಕೆ ಯಾವುದು ಸೂಕ್ತವೆನಿಸುವುದೋ ಆ ಯೋಜನೆಯನ್ನು ಮುಡಾ ವತಿಯಿಂದ ಕೈಗೆತ್ತಿಕೊಳ್ಳುವಂತೆ ಪ್ರಾಧಿಕಾರದ ಅಧ್ಯಕ್ಷ ಹಾಗೂ ಆಯುಕ್ತರಿಗೆ ಸಲಹೆ ನೀಡಿದರು.

ನುರಿತ ಸ್ಟ್ರಕ್ಚರಲ್ ಇಂಜಿನಿಯರ್‍ಗಳನ್ನು ಸ್ಥಳಕ್ಕೆ ಕರೆದೊಯ್ದು ಪರಿಶೀಲಿಸಿ ಆ ಸ್ಥಳ ಗಳಿಗೆ ಸೂಕ್ತ ಎನಿಸುವ ಯೋಜನೆಗಳಿಗೆ 3 ದಿನದೊಳಗಾಗಿ ಡಿಪಿಆರ್ ಸಿದ್ಧಪಡಿ ಸಬೇಕು, ನಂತರ ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸಿ ಅನುಮೋದನೆ ಪಡೆದು ನಂತರ ಸರ್ಕಾರದಿಂದ ಅನುಮತಿ ಪಡೆದು ಟೆಂಡರ್ ಪ್ರಕ್ರಿಯೆ ನಡೆಸುವಂತೆಯೂ ಅವರು ತಿಳಿ ಸಿದರು. ಸುಗಮ ಸಂಚಾರ, ಅಪಘಾತ ರಹಿತ ವಲಯವನ್ನಾಗಿಸಲು ಈ ಮೂರೂ ರಿಂಗ್ ರೋಡ್
ಜಂಕ್ಷನ್‍ಗಳಲ್ಲಿ ಸೂಕ್ತ ಸೌಲಭ್ಯ ಕಲ್ಪಿಸಿ ಅಪಘಾತ ಸಂಭವಿಸುವುದನ್ನು ತಪ್ಪಿಸ ಬೇಕು. ಅದಕ್ಕಾಗಿ ತ್ವರಿತಗತಿಯಲ್ಲಿ ಕಾರ್ಯೋ ನ್ಮುಖರಾಗುವಂತೆ ಪ್ರತಾಪ್ ಸಿಂಹ ಮುಡಾ ಅಧಿಕಾರಿಗಳಿಗೆ ತಾಕೀತು ಮಾಡಿದರು. ಅದೇ ರೀತಿ ರಿಂಗ್ ರಸ್ತೆಯ ದಟ್ಟಗಳ್ಳಿ ಕೆಇಬಿ ಜಂಕ್ಷನ್ ಸಮೀಪ ಕಡಿದಾದ ತಿರುವಿನಲ್ಲಿ ಅತೀ ಹೆಚ್ಚು ಅಪಘಾತಗಳು ಸಂಭವಿಸಿ ಸಾವುಗಳಾಗುತ್ತಿರುವುದರಿಂದ ಅದನ್ನು ತಡೆಯಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‍ಹೆಚ್‍ಎಐ)ದಿಂದ ವಿನ್ಯಾಸ ಮಾಡಿ ಸೂಕ್ತವೆನಿಸುವ ಯೋಜ ನೆಯನ್ನು ಕೈಗೆತ್ತಿಕೊಳ್ಳುವಂತೆ ಅಲ್ಲಿನ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದು ಅವರು ಹೇಳಿದರು. ದಟ್ಟಗಳ್ಳಿ ಬ್ಲಾಕ್‍ಸ್ಪಾಟ್ ಯೋಜನೆಗೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಡಿಪಿಆರ್ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿ ಅತೀ ಶೀಘ್ರ ಅನುಮೋದನೆ ಪಡೆದು ಕಾಮಗಾರಿ ಜಾರಿಗೊಳಿಸಲು ಪ್ರಯತ್ನಿಸುತ್ತೇನೆ ಎಂದು ಪ್ರತಾಪ್ ಸಿಂಹ ಇದೇ ಸಂದರ್ಭ ತಿಳಿಸಿ ದರು. ಮುಡಾ ಸದಸ್ಯರಾದ ಲಕ್ಷ್ಮೀದೇವಿ, ಮಾದೇಶ, ನವೀನ, ಸೂಪರಿಂಟೆಂಡಿಂಗ್ ಇಂಜಿನಿಯರ್ ಚನ್ನಕೇಶವ, ಎಕ್ಸಿಕ್ಯೂಟಿವ್ ಇಂಜಿನಿಯರ್ ಮೋಹನ್, ನಗರ ಯೋಜಕ ಸದಸ್ಯ ಶೇಷ ಸೇರಿದಂತೆ ಹಲವು ಅಧಿಕಾರಿಗಳು ರಿಂಗ್ ರಸ್ತೆ ಜಂಕ್ಷನ್ ಪರಿಶೀಲನೆ ವೇಳೆ ಉಪಸ್ಥಿತರಿದ್ದರು.

Translate »