ಸಿಎಂ ಬಸವರಾಜ ಬೊಮ್ಮಾಯಿ ಪುತ್ಥಳಿಗೆ ರೈತರ ರಕ್ತಾಭಿಷೇಕ
ಮಂಡ್ಯ

ಸಿಎಂ ಬಸವರಾಜ ಬೊಮ್ಮಾಯಿ ಪುತ್ಥಳಿಗೆ ರೈತರ ರಕ್ತಾಭಿಷೇಕ

December 29, 2022

ಮಂಡ್ಯ, ಡಿ. 28-ಕಬ್ಬಿನ ದರ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕಳೆದ 52 ದಿನಗಳಿಂದ ಮಂಡ್ಯ ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸುತ್ತಿರುವ ರೈತರು, ಸಿಎಂ ಬಸವರಾಜ ಬೊಮ್ಮಾಯಿಯವರ ಪುತ್ಥಳಿಗೆ ರಕ್ತಾಭಿಷೇಕ ಮಾಡಿದ ವಿಲಕ್ಷಣ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.

ಇನ್ನೆರಡು ದಿನದಲ್ಲಿ (ಡಿ.30) ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಮಂಡ್ಯಕ್ಕೆ ಆಗಮಿಸಲಿದ್ದು, ರೈತರು ಪ್ರತಿಭಟನೆ ನಡೆಸುತ್ತಿರುವ ಸ್ಥಳದ ಸಮೀಪವಿ ರುವ ಮೈದಾನದಲ್ಲೇ ಅಮಿತ್ ಷಾ ಅವರು ಸಮಾವೇಶ ನಡೆಸಲಿರುವುದರಿಂದ ಪ್ರತಿಭಟನೆಯನ್ನು ಹಿಂಪಡೆಯು ವಂತೆ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಹಾಗೂ ಜಿಲ್ಲಾಡಳಿತ, ರೈತರಲ್ಲಿ ಮನವಿ ಮಾಡಿತ್ತು. ಷಾ ಅವರ ಕಾರ್ಯಕ್ರಮ ಮುಗಿದ ನಂತರ ಮುಖ್ಯ ಮಂತ್ರಿಗಳೊಂದಿಗೆ ಮಾತನಾಡಿ ರೈತರ ಬೇಡಿಕೆ ಈಡೇರಿ ಸುವುದಾಗಿ ಗೋಪಾಲಯ್ಯ ಭರವಸೆ ನೀಡಿದ್ದರು. ಇಂದು ರೈತರು ಪ್ರತಿಭಟನೆ ಹಿಂಪಡೆಯುತ್ತಾರೆ ಎಂಬ ನಿರೀಕ್ಷೆಯು ಜಿಲ್ಲಾಡಳಿತಕ್ಕೆ ಇತ್ತು. ಆದರೆ, ಪ್ರತಿಭಟನೆ ಹಿಂಪಡೆಯುವುದಿರಲಿ, ಮುಖ್ಯಮಂತ್ರಿಗಳ ಪುತ್ಥಳಿಗೆ ಮೊದಲೇ ತಮ್ಮೆಲ್ಲರಿಂದ ಸಂಗ್ರಹಿಸಿದ್ದ ರಕ್ತವನ್ನು ಸಿರಿಂಜ್‍ನಲ್ಲಿ ರಕ್ತಾಭಿಷೇಕ ಮಾಡುವ ಮೂಲಕ ರೈತರು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಇಂದು ಬೆಳಗ್ಗೆಯಿಂದ ಪ್ರತಿಭಟನಾ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಇನ್ಸ್‍ಪೆಕ್ಟರ್ ಸಂತೋಷ್‍ಕುಮಾರ್ ನೇತೃತ್ವ ವಹಿಸಿದ್ದರು. ಮೀಸಲು ಪೊಲೀಸ್ ಪಡೆಯನ್ನು ಕೂಡ ನಿಯೋಜಿಸಲಾಗಿತ್ತು. ಶಾಂತಿಯುತವಾಗಿಯೇ ನಡೆಯುತ್ತಿದ್ದ ಪ್ರತಿಭಟನೆ ಮಧ್ಯಾಹ್ನ 12.30ರ ಸುಮಾರಿನಲ್ಲಿ ಅನಿರೀಕ್ಷಿತವಾಗಿ ತಿರುವು ಪಡೆಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಪ್ರತಿಕೃತಿಯನ್ನು ಪ್ರತಿಭಟನಾ ಸ್ಥಳಕ್ಕೆ ತಂದ ರೈತರು, ಸಿರಿಂಜ್‍ಗಳಲ್ಲಿ ಸಂಗ್ರಹಿಸಿದ್ದ ತಮ್ಮ ರಕ್ತವನ್ನು ಮುಖ್ಯಮಂತ್ರಿಗಳ ಪುತ್ಥಳಿಗೆ ಅಭಿಷೇಕ ಮಾಡಿದರು.

ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ರೈತರನ್ನು ಬಂಧಿಸಿ, ಕರೆದೊಯ್ದು ಕೆಲಕಾಲದ ನಂತರ ಬಿಡುಗಡೆ ಮಾಡಿದರು. ಈ ನಡುವೆ ಪೊಲೀಸರು ಪ್ರತಿಭಟನಾಕಾರರು ಹಾಕಿದ್ದ ಶಾಮಿಯಾನಾ ಮತ್ತು ವೇದಿಕೆಯನ್ನು ತೆರವುಗೊಳಿಸಿದರು.

ಸಂಜೆ ವೇಳೆಗೆ ಸಂಜಯ್ ಸರ್ಕಲ್‍ನಲ್ಲಿ ಜಮಾವಣೆಗೊಂಡ ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪುಗೌಡ, ಮಧು ಚಂದನ್, ವಿನಯ್‍ಕುಮಾರ್ ನೇತೃತ್ವದ ರೈತರು, ತಮ್ಮ ಪ್ರತಿಭಟನೆಯನ್ನು ಪೊಲೀಸರನ್ನು ಬಳಸಿಕೊಂಡು ಸರ್ಕಾರ ಹತ್ತಿಕ್ಕುತ್ತಿದೆ ಎಂದು ಆರೋಪಿಸಿದರು. ಪ್ರತಿಭಟನೆಗಾಗಿ ಹಾಕಿದ್ದ ಶಾಮಿಯಾನಾ ಮತ್ತು ವೇದಿಕೆಯನ್ನು ತೆರವುಗೊಳಿಸುವ ವೇಳೆ ಪೊಲೀಸರು ಮಹಾತ್ಮಾ ಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್, ರೈತ ಮುಖಂಡರಾದ ದಿವಂಗತ ಪ್ರೊ. ಎಂ.ಡಿ. ನಂಜುಂಡ ಸ್ವಾಮಿ, ದಿವಂಗತ ಕೆ.ಎಸ್.ಪುಟ್ಟಣ್ಣಯ್ಯ ಅವರ ಭಾವಚಿತ್ರಗಳಿಗೆ ಅವಮಾನ ಮಾಡ ಲಾಗಿದೆ ಎಂದು ದೂರಿದ ರೈತರು, ಪೊಲೀಸ್ ಇನ್ಸ್‍ಪೆಕ್ಟರ್ ಸಂತೋಷ್‍ಕುಮಾರ್ ಅವರನ್ನು ಅಮಾನತುಪಡಿಸಬೇಕು ಎಂದು ಆಗ್ರಹಿಸಿದರು.

Translate »