ಡಿ.22, 27ರಂದು 2 ಹಂತದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ
ಮೈಸೂರು

ಡಿ.22, 27ರಂದು 2 ಹಂತದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ

December 1, 2020

ಬೆಂಗಳೂರು,ನ.30(ಕೆಎಂಶಿ)-ಗ್ರಾಮ ಪಂಚಾಯ್ತಿ ಗಳಿಗೆ ಡಿ.22 ಮತ್ತು 27ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ರಾಜ್ಯ ಚುನಾವಣಾ ಆಯುಕ್ತ ಡಾ.ಬಸವರಾಜು ಅವರು ಗ್ರಾಮ ಪಂಚಾಯ್ತಿ ಚುನಾವಣಾ ವೇಳಾಪಟ್ಟಿಯನ್ನು ಸುದ್ದಿಗೋಷ್ಠಿಯಲ್ಲಿಂದು ಪ್ರಕಟಿಸಿದರು.

ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ರಾಜ್ಯಾ ದ್ಯಂತ ಜಾರಿಗೊಳ್ಳಲಿದೆ. ಆದರೆ, ನಗರ ಪಾಲಿಕೆ, ನಗರ ಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿಗಳಿಗೆ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಎರಡು ಹಂತದ ಚುನಾವಣೆಯ ಮತ ಎಣಿಕೆಯು ಡಿ.30ರಂದು ನಡೆಯಲಿದೆ. ಮೊದಲ ಹಂತದ ಚುನಾವಣೆ ಡಿ.7 ರಂದು, ಎರಡನೇ ಹಂತಕ್ಕೆ ಡಿ.11ರಂದು ಸಂಬಂಧಪಟ್ಟ ಜಿಲ್ಲಾಧಿಕಾರಿ ಗಳು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದಾರೆ. ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳ ಲಿದೆ. ನಾಮಪತ್ರಗಳನ್ನು ಸಲ್ಲಿಸಲು ಮೊದಲ ಹಂತಕ್ಕೆ ಡಿ.11ರಂದು ಹಾಗೂ ಎರಡನೇ ಹಂತಕ್ಕೆ ಡಿ.16ರಂದು ಕಡೆಯ ದಿನವಾಗಿರುತ್ತದೆ. ನಾಮಪತ್ರಗಳ ಪರಿಶೀಲನೆ ಡಿ.12 ಮತ್ತು 17ರಂದು ನಡೆಯಲಿದೆ. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಮೊದಲ ಹಂತಕ್ಕೆ ಡಿ.14 ಹಾಗೂ ಎರಡನೇ ಹಂತಕ್ಕೆ ಡಿ.19 ಕಡೆಯ ದಿನವಾಗಿರುತ್ತದೆ. ಮತ ದಾನ ಅವಶ್ಯವಿದ್ದರೆ ಎರಡೂ ಹಂತಗಳಲ್ಲಿ ಬೆಳಗ್ಗೆ 7ರಿಂದ ಸಂಜೆ 5ಗಂಟೆಯವರೆಗೆ ನಡೆಯಲಿದೆ. ಒಂದು ವೇಳೆ ಮರು ಮತದಾನದ ಅವಶ್ಯವಿದ್ದರೆ ಮೊದಲ ಹಂತಕ್ಕೆ ಡಿ.24 ಹಾಗೂ 2ನೇ ಹಂತಕ್ಕೆ ಡಿ.29 ನಡೆಯಲಿದೆ. ಮತಗಳ ಎಣಿಕೆಯು
ಆಯಾ ತಾಲೂಕು ಕೇಂದ್ರಗಳಲ್ಲಿ ಡಿ.30 ರಂದು ಬೆಳಗ್ಗೆ 8ರಿಂದ ಪ್ರಾರಂಭಗೊಳ್ಳಲಿದ್ದು, ಇಡೀ ಚುನಾವಣಾ ಪ್ರಕ್ರಿಯೇ ಡಿ.31ಕ್ಕೆ ಅಂತ್ಯಗೊಳ್ಳಲಿದೆ. ಗ್ರಾಮ ಪಂಚಾಯ್ತಿ ಚುನಾವಣೆ ಪಕ್ಷ ರಹಿತವಾಗಿರುತ್ತದೆ. ಕಣದಲ್ಲಿ ಉಳಿಯುವ ಅಭ್ಯರ್ಥಿಗಳಿಗೆ ಚಿಹ್ನೆಗಳನ್ನು ನೀಡ ಲಾಗುವುದು ಎಂದರು. ರಾಜ್ಯದಲ್ಲಿ ಒಟ್ಟು 6004 ಗ್ರಾಮ ಪಂಚಾಯ್ತಿಗಳ ಅವಧಿ ಮುಕ್ತಾಯ ವಾಗಿದ್ದರೂ ವಿವಿಧ ಕಾರಣಗಳಿಗಾಗಿ 5762 ಗ್ರಾ. ಪಂ.ಗಳ 35884 ಕ್ಷೇತ್ರಗಳಿಂದ ಒಟ್ಟು 92121 ಸ್ಥಾನಗಳಿಗೆ ಚುನಾವಣೆ ಜರುಗಲಿದೆ. ರಾಜ್ಯದಲ್ಲಿ ಒಟ್ಟು 2,97,15,048 ಗ್ರಾ.ಪಂ. ಚುನಾವಣೆ ವ್ಯಾಪ್ತಿಯಲ್ಲಿ ಮತದಾರರಿದ್ದಾರೆ. ಕೋವಿಡ್-19ರ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಯಲ್ಲಿ ತಾಲೂಕುವಾರು ಎರಡು ಹಂತದಲ್ಲಿ ಚುನಾವಣೆ ನಡೆಸಲಾಗುತ್ತದೆ. ಪ್ರತಿ ಮತಗಟ್ಟೆಯಲ್ಲಿ ಮತದಾರರ ಸಂಖ್ಯೆಯನ್ನು ಗರಿಷ್ಠ ಒಂದು ಸಾವಿರಕ್ಕೆ ಮಿತಿಗೊಳಿಸ ಲಾಗಿದೆ. ಬೀದರ್‍ನಲ್ಲಿ ವಿದ್ಯುನ್ಮಾನ ಮತ ಯಂತ್ರ ಹಾಗೂ ಉಳಿದೆಲ್ಲ ಜಿಲ್ಲೆಗಳಲ್ಲಿ ಮತಪತ್ರಗಳ ಮೂಲಕ ಮತದಾನ ನಡೆಯಲಿದೆ. 45128 ಮತಗಟ್ಟೆಗಳಿಗೆ ಸು.270768 ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿ ನೇಮಿಸಿದ್ದು, ಕೋವಿಡ್ ಹಿನ್ನೆಲೆಯಲ್ಲಿ 45 ಸಾವಿರ ಅಂಗನವಾಡಿ ಮತ್ತು ಆಶಾಕಾರ್ಯಕರ್ತೆಯರನ್ನು ಸೇವೆಗೆ ಬಳಸಿಕೊಳ್ಳಲಾಗುವುದು ಎಂದರು.

 

 

Translate »