ಅರ್ಹ ಫಲಾನುಭವಿಗಳಿಗೆ ತ್ವರಿತಗತಿ ಸಾಲ ಮಂಜೂರು ಮಾಡಿ
ಮೈಸೂರು

ಅರ್ಹ ಫಲಾನುಭವಿಗಳಿಗೆ ತ್ವರಿತಗತಿ ಸಾಲ ಮಂಜೂರು ಮಾಡಿ

May 17, 2020

ಮೈಸೂರು, ಮೇ 16(ಎಂಟಿವೈ)- ಸಹಕಾರ ಸಂಘ ಮತ್ತು ಬ್ಯಾಂಕ್‍ಗಳ ಮೂಲಕ ಪ್ರಸ್ತುತ ಸಾಲಿನಲ್ಲಿ 14 ಸಾವಿರ ಕೋಟಿ ರೂ. ಸಾಲ ನೀಡಲು ಉದ್ದೇಶಿಸಲಾಗಿದ್ದು, ಅರ್ಹ ಫಲಾನುಭವಿಗಳಿಗೆ ತ್ವರಿತಗತಿಯಲ್ಲಿ ಸಾಲ ಮಂಜೂರು ಮಾಡುವಂತೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸೂಚಿಸಿದ್ದಾರೆ.

ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಮೈಸೂರು ವಿಭಾಗದ ಸಹಕಾರ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ 8 ಜಿಲ್ಲೆಗಳ ಪ್ರಗತಿ ಪರಿಶೀಲಿ ಸಿದ ಬಳಿಕ ಮಾತನಾಡಿದ ಅವರು, ಕಳೆದ ಸಾಲಿನ ಪ್ರಗತಿ ಸಾಲದು. ಪ್ರಸಕ್ತ ಸಾಲಿನಲ್ಲಿ ಅರ್ಜಿ ಸಲ್ಲಿಸಿದ ಅರ್ಹರಿಗೆ ತ್ವರಿತಗತಿಯಲ್ಲಿ ಸಾಲ ಮಂಜೂರು ಮಾಡಲು ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಕಳೆದ ವರ್ಷ ರಾಜ್ಯದಲ್ಲಿ  ಸಹಕಾರ ಇಲಾಖೆಯಿಂದ 13 ಸಾವಿರ ಕೋಟಿ ರೂ. ಸಾಲ ನೀಡಲಾಗಿತ್ತು. ಈ ಬಾರಿ 1 ಸಾವಿರ ಕೋಟಿ ರೂ. ಹೆಚ್ಚುವರಿಯಾಗಿ, ಅಂದರೆ 14 ಸಾವಿರ ಕೋಟಿ ರೂ. ಸಾಲ ನೀಡಲು ಉದ್ದೇಶಿಸಲಾಗಿದೆ. ಯೋಜನೆ ಯನ್ನು ಸಮರ್ಪಕವಾಗಿ ಜಾರಿಗೆ ತಂದು, ಸಂಕಷ್ಟದಲ್ಲಿ ರುವವರಿಗೆ ನೆರವಾಗಿ ಎಂದು ಸೂಚನೆ ನೀಡಿದರು.

ಹೊಸಬರಿಗೆ ಮನ್ನಣೆ: ಸಾಲ ಸೌಲಭ್ಯ ಪಡೆದವರೇ ಮತ್ತೆ ಮತ್ತೆ ಅರ್ಜಿ ಹಾಕುತ್ತಿದ್ದಾರೆ. ಆದರೆ ಈ ವರ್ಷ ಶೇ.20ರಷ್ಟು ಹೊಸಬರಿಗೆ ಸಾಲ ನೀಡಲು ಕ್ರಮ ಕೈಗೊಳ್ಳಬೇಕಿದೆ. ಮೈಸೂರು ಜಿಲ್ಲೆ ಸೇರಿ ದಂತೆ ವಿಭಾಗದ 8 ಜಿಲ್ಲೆಗಳಲ್ಲೂ ಎಲ್ಲ ಬ್ಯಾಂಕ್ ಗಳು ನಿರೀಕ್ಷೆಗಿಂತ ಕಡಿಮೆ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಸಾಲ ನೀಡಿದ್ದಾರೆ. ಇದು ಬೇಸರ ತಂದಿದೆ. ಕೂಡಲೇ ಫಲಾನುಭವಿಗಳನ್ನು ಗುರುತಿಸಿ ಸಾಲ ವಿತರಿಸಿ ಕೃಷಿಗೆ ಉತ್ತೇಜನ ನೀಡಿ ಸಾಲ ಮರು ಪಾವತಿ ಮಾಡಿಸಿಕೊಳ್ಳಬೇಕು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸದಸ್ಯರಿಗೆ ಸಾಲ ವಿತರಣೆ ಮಾಡಿ ಎಂದು ಸೂಚನೆ ನೀಡಿದರು. ಬಡವರು ಬಂಧು ಯೋಜನೆ ಯಡಿ ಬೀದಿ ಬದಿ ವ್ಯಾಪಾರಿಗಳಿಗೆ ಸಾಲು ನೀಡುವ ವಿಚಾರದಲ್ಲಿ ಅಧಿಕಾರಿಗಳು ವೈಯಕ್ತಿಕ ಆಸಕ್ತಿ ವಹಿಸಿ ಕೆಲಸ ಮಾಡುವಂತೆಯೂ ಸಚಿವರು ಆದೇಶಿಸಿದರು.

ವರ್ಗಾವಣೆ ದಂಧೆಗೆ ಅವಕಾಶವಿಲ್ಲ: ಸಹಕಾರ ಇಲಾಖೆಯಲ್ಲಿ ವರ್ಗಾವಣೆ ದಂಧೆಗೆ ಅವಕಾಶ ನೀಡುವುದಿಲ್ಲ. ಕೆಲಸ ಮಾಡಲು ಆಸಕ್ತಿ ಇಲ್ಲ ವೆಂದರೆ ಬೇರೆ ಕಡೆಗೆ ವರ್ಗಾವಣೆ ಮಾಡು ತ್ತೇನೆ. ಸಹಕಾರಿ ವ್ಯವಸ್ಥೆ ಯಲ್ಲಿ ರಾಜಕಾರಣ ಹೆಚ್ಚುತ್ತಿರುವುದು ತಿಳಿದು ಬಂದಿದೆ. ಇದರಿಂದ ಸಹಕಾರಿ ಕ್ಷೇತ್ರದ ಮಹತ್ವಕ್ಕೆ ಧಕ್ಕೆಯಾಗಲಿದೆ. ಅದಕ್ಕೆ ಅವಕಾಶ ನೀಡಿ ವ್ಯವಸ್ಥೆ ಹಾಳು ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು.

ಸಾಲ ಮರುಪಾವತಿಗೆ ಕ್ರಮ: ಸಹಕಾರ ಸಂಘ ಮತ್ತು ಬ್ಯಾಂಕ್‍ಗಳಲ್ಲಿ ಮರುಪಾವತಿ ಯಾಗದ ಸಾಲ ಸಾಕಷ್ಟಿದೆ. ವಸೂಲಾತಿಯೇ ದೊಡ್ಡ ಸಮಸ್ಯೆಯಾಗಿದೆ. ಬಾಕಿ ಸಾಲ ವಸೂಲಿಗೆ ಬಿಗಿಕ್ರಮ ಕೈಗೊಳ್ಳಬೇಕು. ಸ್ತ್ರೀಶಕ್ತಿ ಸಂಘಗಳು ಶೇ.100ರಷ್ಟು ಸಾಲ ಮರುಪಾವತಿ ಮಾಡಿವೆ. ಮಂಗಳೂರು ಬ್ಯಾಂಕ್ ಅತಿ ಹೆಚ್ಚು ಸಾಲ ಉಳಿಸಿ ಕೊಂಡಿದ್ದರೆ, ಮೈಸೂರು ಮತ್ತು ಚಾಮರಾಜನಗರದ ಸಹಕಾರಿ ಬ್ಯಾಂಕ್‍ಗಳಲ್ಲೂ ಹೆಚ್ಚಿನ ಪ್ರಮಾಣದ ಸಾಲ ಉಳಿಸಿಕೊಂಡಿವೆ. ಕೂಡಲೇ ಸಾಲ ಮರುಪಾವತಿಗೆ ಅಧಿಕಾರಿಗಳು ನಿಷ್ಠೆಯಿಂದ ಕೆಲಸ ಮಾಡಬೇಕು. ಸಾಲ ಮರು ಪಾವತಿಗೆ ಕ್ರಮ ಕೈಗೊಳ್ಳದ ಅಧಿಕಾರಿಗೆ ವರ್ಗಾವಣೆ ಭಾಗ್ಯ ಕಲ್ಪಿಸಲಾಗುವುದು ಎಂದು ಛಾಟಿ ಬೀಸಿದರು. ಬಡವರ ಬಂಧು ಸಾಲಕ್ಕೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸಾಲ ನೀಡಿದರೆ ಅವರು ಸ್ವಾಭಿಮಾನದಿಂದಾದರೂ ಸರಿಯಾದ ಸಮ ಯಕ್ಕೆ ಸಾಲ ಮರುಪಾವತಿ ಮಾಡುತ್ತಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಎಂಸಿಡಿಸಿಸಿ ವ್ಯವಸ್ಥಾಪಕ ನಿರ್ದೇಶಕ ಡಿ.ಬಿ.ಲಿಂಗಣ್ಣಯ್ಯ, ಮೈಸೂರಿನಲ್ಲಿ 1620 ಮಂದಿಯನ್ನು ಗುರುತಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬಡ ಕುಟುಂಬದ ಅರ್ಹರನ್ನು ಗುರುತಿಸಿ ಸಾಲ ನೀಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನಿಡಿದರು.

ರಾಜಕೀಯ ಅಗತ್ಯವಿಲ್ಲ: ಸಹಕಾರ ಸಂಘ ಮತ್ತು ಬ್ಯಾಂಕ್‍ಗಳಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಮತ್ತು ಯಾವುದೇ ರಾಜಕೀಯ ಹಿತಾಸಕ್ತಿ ಮತ್ತು ಒತ್ತಡಕ್ಕೆ ಮಣಿಯಾಗದೇ ಕಾನೂನು ರೀತಿ ಕರ್ತವ್ಯ ನಿರ್ವಹಿಸ ಬೇಕು. ಒಂದು ವೇಳೆ ಸರಿಯಾಗಿ ಕೆಲಸ ಮಾಡಲು ಆಸಕ್ತಿ ಇರದ ಅಧಿಕಾರಿಗಳು ಬೇರೆಡೆ ತೆರಳಬಹುದು ಎಂದರು.

ದೂರು ಹೆಚ್ಚುತ್ತಿದೆ: ಮೈಸೂರಿನಲ್ಲಿ ಗೃಹ ನಿರ್ಮಾಣ ಸಹಕಾರ ಸಂಘಗಳ ವಿರುದ್ಧ ಸಾಕಷ್ಟು ದೂರು ಬರು ತ್ತಿವೆ. ನಿವೇಶನ ನೀಡದೇ ಕೋಟ್ಯಂತರ ರೂ. ವಂಚಿಸಿದ ದೂರುಗಳಿವೆ. ಮೈಸೂರಿನ ಯಶಸ್ವಿನಿ ಗೃಹ ನಿರ್ಮಾಣ ಸಹಕಾರ ಸಂಘದ ಬಗ್ಗೆ ದೂರು ಬಂದಿದ್ದು,  ಮುಂದಿನ ಶುಕ್ರವಾರ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದರು. ಇಲಾಖೆ ಅಪರ ನಿಬಂಧಕ ಕೆ.ಎಸ್.ನವೀನ್, ಮೈಸೂರು ಪ್ರಾಂತ್ಯದ ಜಂಟಿ ನಿಬಂಧಕ ಪ್ರಕಾಶ್ ರಾವ್ ಸೇರಿದಂತೆ 8 ಜಿಲ್ಲೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.

 

 

Translate »