ಚಾಮುಂಡಿಬೆಟ್ಟದ ನಂದಿಗೆ ವಿಜೃಂಭಣೆ ಮಹಾಭಿಷೇಕ
ಮೈಸೂರು

ಚಾಮುಂಡಿಬೆಟ್ಟದ ನಂದಿಗೆ ವಿಜೃಂಭಣೆ ಮಹಾಭಿಷೇಕ

November 22, 2021

ಮೈಸೂರು, ನ.21(ಎಂಟಿವೈ)- ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದ ನಂದಿಗೆ ಮಹಾಭಿಷೇಕ ಹಾಗೂ ವಿಶೇಷ ಪೂಜಾ ಮಹೋತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು.

ಲೋಕ ಕಲ್ಯಾಣಕ್ಕಾಗಿ ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್ ವತಿಯಿಂದ ಭಾನುವಾರ ಬೆಳಗ್ಗೆ ಆಯೋಜಿಸಿದ್ದ 16ನೇ ವರ್ಷದ ಮಸ್ತಕಾಭಿಷೇಕದಲ್ಲಿ ನೂರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು. ಬೆಟ್ಟ ಹತ್ತುವವರಿಂದಲೇ ಸ್ಥಾಪಿತಗೊಂಡಿರುವ ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್ ಸದಸ್ಯರು ನಡೆಸಿದ ಮಹಾಭಿಷೇಕ ಹಾಗೂ ವಿಶೇಷ ಪೂಜಾ ಮಹೋತ್ಸವದಲ್ಲಿ ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ, ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿ ಪಾಲ್ಗೊಂಡು ನಂದಿಯ ಮಹಾಮಜ್ಜನಕ್ಕೆ ಚಾಲನೆ ನೀಡಿದರು.

ಬಳಿಕ ಏಕಶಿಲಾ ನಂದಿ ವಿಗ್ರಹಕ್ಕೆ ಮಹಾಭಿಷೇಕ ಆರಂಭಿಸಲಾಯಿತು. ನಾಡಿಗೆ ಸುಖ, ಶಾಂತಿ, ನೆಮ್ಮದಿ ನೆಲೆಸುವಂತೆ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ವಿವಿಧ ದ್ರವ್ಯಗಳು ಫಲಾಮೃತ, ಪುಷ್ಪ ಮತ್ತು ಬಿಲ್ವಪತ್ರೆ ಸೇರಿದಂತೆ 38 ಬಗೆಯ ದ್ರವ್ಯ ಹಾಗೂ ವಿವಿಧ ಪದಾರ್ಥಗಳಿಂದ ನಂದಿಗೆ ಮಜ್ಜನ ಮಾಡÀಲಾಯಿತು. 25 ಲೀಟರ್ ಹಾಲು, 10 ಲೀಟರ್ ಮೊಸರು, 2 ಕೆಜಿ ತುಪ್ಪ, 5 ಕೆಜಿ ಜೇನುತುಪ್ಪ, ಸಕ್ಕರೆ, ಬಾಳೆಹಣ್ಣು, ದ್ರಾಕ್ಷಿ, ಬೆಲ್ಲ, ಖರ್ಜೂರ, ಸೌತೆಕಾಯಿ, ಕಬ್ಬಿನ ರಸ, ಎಳನೀರು, ನಿಂಬೆಹಣ್ಣಿನ ರಸ, ತೈಲ, ಗೋಧಿಹಿಟ್ಟು, ಕಡಲೆ ಹಿಟ್ಟು, ಅರಿಶಿನ, ಕುಂಕುಮ, ಸಿಂಧೂರ, ರಕ್ತಚಂದನ, ಭಸ್ಮ, ಗಂಧಗಳಿಂದ ಅಭಿಷೇಕವನ್ನು ನಡೆಸಲಾಯಿತು. ನಂತರದಲ್ಲಿ ರುದ್ರಾಭಿಷೇಕ, ಸುಗಂಧ ದ್ರವ್ಯದ ಅಭಿಷೇಕ ಮಾಡಲಾಯಿತು.
ಎಲ್ಲಾ ಬಗೆಯ ಅಭಿಷೇಕ ನೆರವೇರಿದÀ ನಂತರ ನಂದಿ ಮೂರ್ತಿಗೆ ಜಲಾಭಿಷೇಕ ಮಾಡಿ, ಸ್ವಚ್ಛಗೊಳಿಸಲಾಯಿತು. ನಂತರ ಅಲಂಕಾರ ಮಾಡಿ ಅಷ್ಟೋತ್ತರ ಪೂಜೆ ನೆರವೇರಿಸಿ ಮಹಾಮಂಗಳಾರತಿ ಬೆಳಗಲಾಯಿತು. ಬೆಟ್ಟದ ಬಳಗ ಟ್ರಸ್ಟ್ ಸದಸ್ಯರು ಹಾಗೂ ಭಕ್ತರ ಸಮ್ಮುಖದಲ್ಲಿ ಪೂಜಾ ಕೈಂಕರ್ಯ ನೆರವೇರಿತು. ಮಹಾಭಿಷೇಕ ನಡೆಯುವ ವಿಷಯ ತಿಳಿದು ಹಲವು ಮಂದಿ ಭಕ್ತರು ಹಾಗೂ ಭಾನುವಾರವಾಗಿದ್ದರಿಂದ ಬೆಟ್ಟಕ್ಕೆ ಮೆಟ್ಟಿಲು ಮೂಲಕ ಹಲವು ಮಂದಿ ವಾಯುವಿಹಾರಿಗಳು, ಪ್ರವಾಸಿಗರೂ ಮಹಾಭಿಷೇಕ ವೀಕ್ಷಿಸಿದರು. ಅಲ್ಲದೆ ಅಲಂಕಾರದಿಂದ ಕಂಗೊಳಿಸುತ್ತಿದ್ದ ನಂದಿಯನ್ನು ಕಣ್ತುಂಬಿಕೊಂಡು ಪ್ರಾರ್ಥಿಸಿದರು. ಮಹಾಭಿಷೇಕ ಮುಗಿದ ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿ ಮಾತ ನಾಡಿ, ಬೆಟ್ಟದ ಬಳಗದ ಚಾರಿಟಬಲ್ ಟ್ರಸ್ಟ್‍ನವರು ಹಲವು ವರ್ಷಗಳಿಂದ ಬೆಟ್ಟದ ನಂದಿಗೆ ಮಹಾಭಿಷೇಕ ನೆರವೇರಿಸುತ್ತಾ ಬಂದಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ಆಚರಿಸಲಾಗುತ್ತಿದೆ. ಕೋವಿಡ್ ಸಂಪೂರ್ಣ ವಾಗಿ ದೂರ ಆಗಿ, ನಾಡು ಸುಭಿಕ್ಷವಾಗಲಿ. ಮುಂದಿನ ವರ್ಷ ನಂದಿಯ ಮಹಾ ಭಿಷೇಕ ಮೊದಲಿನಂತೆ ವಿಜೃಂಭಣೆಯಿಂದ ಜರುಗಲಿ ಎಂದು ಆಶಿಸಿದರು.

16 ವರ್ಷದ ಸೇವೆ: ಬೆಟ್ಟದ ಬಳಗದ ಚಾರಿಟಬಲ್ ಟ್ರಸ್ಟ್ ಕಾರ್ಯ ದರ್ಶಿ ಗೋವಿಂದ ಮಾತನಾಡಿ, ಬೆಟ್ಟಕ್ಕೆ ಮೆಟ್ಟಿಲು ಹತ್ತಲು ಬರುತ್ತಿದ್ದ ಗೆಳೆಯರೆಲ್ಲ ಸೇರಿಕೊಂಡು ಟ್ರಸ್ಟ್ ರಚಿಸಿಕೊಂಡು 2005ರಿಂದ ನಂದಿ ವಿಗ್ರಹಕ್ಕೆ ಮಹಾಭಿಷೇಕ ಮಾಡುವುದನ್ನು ಆರಂಭಿಸಿದೆವು. ಈ ಸಾಲಿನ ಮಹಾಭಿಷೇಕ 16ನೇ ವರ್ಷದ್ದಾಗಿದೆ. ಪ್ರತಿ ವರ್ಷ ನಂದಿ ಮೂರ್ತಿಯ ಸುತ್ತಲೂ ಅಟ್ಟಣೆ ನಿರ್ಮಿಸಿ ವಿಜೃಂಭಣೆಯಿಂದ ಅಭಿಷೇಕ ಮಾಡ ಲಾಗುತ್ತಿತ್ತು. ಐದು ಸಾವಿರ ಲೀಟರ್ ಹಾಲು, ಮೊಸರು ಸೇರಿದಂತೆ ಇನ್ನಿತರ ದ್ರವ್ಯ ಅಭಿಷೇಕಕ್ಕೆ ಬಳಸಲಾಗುತ್ತಿತ್ತು ಎಂದರು.

ಕೋವಿಡ್-19 ಹಿನ್ನೆಲೆಯಲ್ಲಿ ಕಳೆದ ವರ್ಷ ಹಾಗೂ ಈ ವರ್ಷ ಸರಳವಾಗಿ ಆಚರಿಸಿದ್ದೇವೆ. ಈ ಬಾರಿ ಕಡಿಮೆ ಪ್ರಮಾಣದ ದ್ರವ್ಯವನ್ನು ಬಳಸಲಾಗಿದೆ. ಮಹಾರಾಜರ ಕಾಲದಲ್ಲಿ ನಂದಿಗೆ ಮಹಾಭಿಷೇಕ ನೆರವೇರಿಸುವ ಪದ್ಧತಿ ಚಾಲ್ತಿಯಲ್ಲಿತ್ತು. ಆದರೆ ಕೆಲವು ವರ್ಷಗಳಿಂದ ನಂದಿಗೆ ಅಭಿಷೇಕ ಮಾಡುವುದನ್ನು ಕೆಲ ಕಾರಣದಿಂದ ಸ್ಥಗಿತಗೊಳಿಸ ಲಾಗಿದೆ. ಇದನ್ನು ಮನಗಂಡು ನಮ್ಮ ಚಾರಿಟಬಲ್ ಟ್ರಸ್ಟ್ ವತಿಯಿಂದ 16 ವರ್ಷದಿಂದ ಕಾರ್ತಿಕ ಮಾಸದಲ್ಲಿ ನಂದಿಗೆ ಮಹಾಭಿಷೇಕ ಮಾಡಿಕೊಂಡು ಬರಲಾಗುತ್ತಿದೆ. ಈ ಸಂಪ್ರದಾಯವನ್ನು ಮುಂದುವರೆಸಿ ಕೊಂಡು ಹೋಗಲು ಉದ್ದೇಶಿಸಿದ್ದೇವೆ ಎಂದರು. ಈ ಸಂದರ್ಭದಲ್ಲಿ ಬೆಟ್ಟದ ಬಳಗದ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಪ್ರಕಾಶನ್, ಖಜಾಂಚಿ ಸುರೇಶ್, ಟ್ರಸ್ಟಿ ವಿ.ಎನ್.ಸುಂದರ್, ಶಿವಕುಮಾರ್, ಶಂಕರ್, ಚಿನ್ನಪ್ಪ, ಬಸವರಾಜು, ಸುಬ್ಬಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

Translate »