ಗುಂಪು ಹಲ್ಲೆ: ರೆವರೆಂಡ್ ಆಸ್ಮಂಡ್ ವಿರುದ್ಧ ಬಿಷಪ್ ದೂರು
ಮೈಸೂರು

ಗುಂಪು ಹಲ್ಲೆ: ರೆವರೆಂಡ್ ಆಸ್ಮಂಡ್ ವಿರುದ್ಧ ಬಿಷಪ್ ದೂರು

November 19, 2018

ಮೈಸೂರು: ಮೈಸೂರಿನ ತಿಲಕ್ ನಗರ ಚರ್ಚಿನ ನೂತನ ಫಾದರ್ ಅವರಿಗೆ ಅಧಿಕಾರ ವಹಿಸಿಕೊಡಲು ತೆರಳಿದ್ದಾಗ ತಮ್ಮ ಮೇಲೆ ಗುಂಪೊಂದು ಹಲ್ಲೆ ನಡೆಸಿತು ಎಂದು ಬಿಷಪ್ ಮೋಹನ್ ಮನೋರಾಜ್ ಮಂಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನೂತನ ಫಾದರ್ ರೆವರೆಂಡ್ ವಿಕ್ಟರ್ ಹಾಗೂ ಇತರೆ ಅಯ್ಯಗಳೊಂ ದಿಗೆ ನ.17ರಂದು ಬೆಳಿಗ್ಗೆ 11 ಗಂಟೆಗೆ ತಿಲಕ್ ನಗರದ ಚರ್ಚಿನ ಬಳಿಗೆ ಹೋದಾಗ ಮುಂಬಾಗಿಲಿಗೆ ಒಳಗಿನಿಂದ ಬೀಗ ಹಾಕಲಾಗಿತ್ತು. ಹಾಗಾಗಿ ಚರ್ಚಿನ ಹಿಂಬಾಗಿಲಿ ನಿಂದ ಒಳಗೆ ಹೋಗುತ್ತಿದ್ದಾಗ ಮದ್ದೂರಿನ ಚರ್ಚಿಗೆ ವರ್ಗಾವಣೆಗೊಂಡಿರುವ ರೆವರೆಂಡ್ ಆಸ್ಮಂಡ್ ಎನ್.ಶಿರಿ, ಗಿರೀಶ್, ಸುಧಾಕರ್, ಸ್ಯಾಮುವೆಲ್, ಸದಾನಂದ, ಜ್ಞಾನಶೇಖರನ್ ಹಾಗೂನೋವೆಲ್ ಪಾರ್ಕರ್ ಗುಂಪು, ನಮ್ಮನ್ನು ತಡೆದು, ಕ್ಷುಲ್ಲಕ ಕಾರಣಕ್ಕೆ ಕೈಯಿಂದ ಹಲ್ಲೆ ಮಾಡಿತು. ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊರಳಿನಲ್ಲಿದ್ದ ಶಿಲುಬೆ ಮಾಲೆಯನ್ನೂ ಕಿತ್ತು ಬಿಸಾಕಿ, ಪ್ರಾಣ ಬೆದರಿಕೆ ಹಾಕಿತು ಎಂದು ಬಿಷಪ್ ಮೋಹನ್ ಮನೋರಾಜ್, ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರಿದಿದೆ ಎಂದು ಮಂಡಿ ಠಾಣೆ ಇನ್‍ಸ್ಪೆಕ್ಟರ್ ಅನ್ಸರ್ ಅಲಿ ತಿಳಿಸಿದ್ದಾರೆ.

ತಿಲಕ್‍ನಗರದ ಸಾಡೇ ಸ್ಮಾರಕ ದೇವಾಲಯದ ಸಭಾ ಪಾಲಕರಾದ ರೆವರೆಂಡ್ ಆಸ್ಮಂಡ್ ಶಿರಿ ಅವರನ್ನು ವಿನಾಕಾರಣ ಮದ್ದೂರಿಗೆ ವರ್ಗಾವಣೆ ಮಾಡಿದ್ದು, 10 ತಿಂಗಳಿಂದ ವೇತನವನ್ನೂ ನೀಡಿಲ್ಲ ಎಂದು ಸಭಾ ಪಾಲಕರು ಹಾಗೂ ಸದಸ್ಯರು, ನ.14ರಂದು ಬಿಷಪ್ ಮೋಹನ್ ಮನೋರಾಜ್ ಅವರ ವಿರುದ್ಧ ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

Translate »