ಗುಂಪುಗಳ ಮಾರಾಮಾರಿ: ಓರ್ವನ ಕೊಲೆ
ಮೈಸೂರು

ಗುಂಪುಗಳ ಮಾರಾಮಾರಿ: ಓರ್ವನ ಕೊಲೆ

October 11, 2021

ಮೈಸೂರು, ಅ.10(ಎಸ್‍ಬಿಡಿ)- ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿ ಯಲ್ಲಿ ಓರ್ವ ಯುವಕನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿ ಮತ್ತೋ ರ್ವನನ್ನು ಗಾಯಗೊಳಿಸಿರುವ ಘಟನೆ ಮೈಸೂ ರಿನ ಗುಂಡೂರಾವ್ ನಗರದ ಖಾಲಿ ಪ್ರದೇಶದಲ್ಲಿ ಭಾನುವಾರ ಸಂಜೆ ನಡೆದಿದೆ.

ಭೈರವೇಶ್ವರನಗರದ ನಂದ ಕಿಶೋರ್ (24) ಹತ್ಯೆಯಾದವನಾಗಿದ್ದು, ಗಾಯಗೊಂಡಿ ರುವ ಇವನ ಸ್ನೇಹಿತ ಸಂಜಯ್(25)ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಟ್ಟಹಾಸ ಮೆರೆದು ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಗುಂಡೂ ರಾವ್‍ನಗರ ಹಾಗೂ ಕನಕಗಿರಿ ನಡುವೆ ಗಿಡಗಂಟಿಗಳು ಬೆಳೆ ದಿರುವ ಖಾಲಿ ಜಾಗದಲ್ಲಿ ಭಾನುವಾರ ಸಂಜೆ 6.30ರಲ್ಲಿ ಏಳೆಂಟು ಜನ ಗುಂಪಾಗಿ ಕುಳಿತಿದ್ದರು. ಈ ವೇಳೆ ಸಂಜಯ್ ಹಾಗೂ ಇಬ್ಬರು ಸ್ನೇಹಿತರು ನಾಯಿ ಹಿಡಿದು ಕೊಂಡು ಅದೇ ಸ್ಥಳದಲ್ಲಿ ವಾಕ್ ಮಾಡುತ್ತಿದ್ದರು. ಈ ವೇಳೆ ಗುಂಪಿನಲ್ಲಿದ್ದವರು, ಸಂಜಯ್ ನನ್ನು ನೋಡಿ `ಏನೋ ಗುರಾಯಿಸ್ತೀಯಾ’ ಎಂದು ಕೇಳಿದ್ದಾರೆ. ಆ ವೇಳೆ ಮಾತಿಗೆ ಮಾತು ಬೆಳೆದು ಒಬ್ಬ ಸಂಜಯ್‍ಗೆ ಕೈಯಿಂದ ಹೊಡೆದಿದ್ದಾನೆ. ಇದರಿಂದ ಕೋಪಗೊಂಡ ಸಂಜಯ್ ತನ್ನ ಸ್ನೇಹಿತ ನಂದ ಕಿಶೋರ್‍ಗೆ ಕರೆ ಮಾಡಿ ವಿಷಯ ತಿಳಿಸಿ, ಸ್ಥಳಕ್ಕೆ ಬರುವಂತೆ ತಿಳಿಸಿದ್ದಾನೆ. ಕೆಲ ಹೊತ್ತಿನಲ್ಲೇ ಸ್ಥಳಕ್ಕೆ ಬಂದ ನಂದಕಿಶೋರ್, `ನನ್ನ ಫ್ರೆಂಡ್‍ಗೆ ಏಕೆ ಹೊಡೆದಿರಿ?’ ಎಂದು ಗುಂಪನ್ನು ಪ್ರಶ್ನಿಸಿದ್ದಾನೆ. ಮಾತಿಗೆ ಮಾತು ಬೆಳೆದು ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆಯಿತೆನ್ನ ಲಾಗಿದೆ. ಈ ಮಧ್ಯೆ ಒಬ್ಬ ಚಾಕು ಹಿಡಿದುಕೊಂಡು ಸಂಜಯ್‍ಗೆ ಚುಚ್ಚಲು ಯತ್ನಿಸಿದ್ದಾನೆ. ಆಗ ಸಂಜಯ್ ತಪ್ಪಿಸಿಕೊಂಡಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಇದರಿಂದ ಸಿಟ್ಟಿಗೆದ್ದ ನಂದಕಿಶೋರ್ ಮಧ್ಯೆ ಪ್ರವೇಶಿಸಿ, ಗುಂಪಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಆ ವೇಳೆ ನಂದಕಿಶೋರ್‍ಗೆ ಐದಾರು ಬಾರಿ ಚಾಕುವಿನಿಂದ ಮನಸೋಇಚ್ಛೆ ತಿವಿದಿದ್ದರಿಂದ ತೀವ್ರ ರಕ್ತಸ್ರಾವವಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿಷಯ ತಿಳಿದ ವಿದ್ಯಾರಣ್ಯಪುರಂ ಠಾಣೆ ಇನ್‍ಸ್ಪೆಕ್ಟರ್ ರಾಜು ಹಾಗೂ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ತೆರಳಿ, ಸ್ಥಳೀಯರ ಮಾಹಿತಿಯಂತೆ ಆರೋಪಿಗಳಿಗಾಗಿ ಹುಡುಕಾಟ ನಡೆಸಿದರಾ ದರೂ ಸದ್ಯಕ್ಕೆ ಪತ್ತೆಯಾಗಿಲ್ಲ. ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಡಿಸಿಪಿ ಪ್ರದೀಪ್ ಗುಂಟಿ, ಎಸಿಪಿ ಪೂರ್ಣಚಂದ್ರ ತೇಜಸ್ವಿ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ.

ನಂದಕಿಶೋರ್ ಮೃತದೇಹವನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಸಂಶೋದನಾ ಸಂಸ್ಥೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದ್ದು, ಸೋಮವಾರ ಬೆಳಗ್ಗೆ ವೈದ್ಯಕೀಯ ಪರೀಕ್ಷೆ ನಂತರ ವಾರಸುದಾರರಿಗೆ ಒಪ್ಪಿಸಲಾಗುವುದು ಎಂದು ತಿಳಿಸಿದ್ದಾರೆ. ಈ ಸಂಬಂಧ ವಿದ್ಯಾರಣ್ಯ ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಲಭ್ಯವಾದ ಮಾಹಿತಿಯನ್ವಯ ಆರೋಪಿಗಳ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.

Translate »