ಪ್ರವಾಸಿಗರಿಂದ ತುಂಬಿ ತುಳುಕುತ್ತಿರುವ ರಂಗನತಿಟ್ಟು ಪಕ್ಷಿಧಾಮ
ಮಂಡ್ಯ

ಪ್ರವಾಸಿಗರಿಂದ ತುಂಬಿ ತುಳುಕುತ್ತಿರುವ ರಂಗನತಿಟ್ಟು ಪಕ್ಷಿಧಾಮ

October 11, 2021

ಶ್ರೀರಂಗಪಟ್ಟಣ, ಅ.10(ವಿನಯ್ ಕಾರೇಕುರ)- ಇತಿಹಾಸÀ ಪ್ರಸಿದ್ಧ ಶ್ರೀರಂಗಪಟ್ಟಣ ಪ್ರವಾಸೋದ್ಯಮಕ್ಕೆ ಹರಿದು ಬಂದ ಜನಸಾಗರ… ಎತ್ತ ನೋಡಿದರು ಪ್ರವಾಸಿಗರ ದಂಡು…

ಕೋವಿಡ್ ಮಹಾಮಾರಿಯಿಂದ ಕಳೆದೆರಡು ವರ್ಷಗಳಿಂದ ಪ್ರವಾ ಸೋದ್ಯಮ ನೆಲಕಚ್ಚಿ ಅದೆಷ್ಟೋ ಅನೇಕ ಕುಟುಂಬಗಳನ್ನು ಬೀದಿಗೆ ತಂದಿತ್ತು. ಇದರ ಬಿಸಿ ಪ್ರವಾಸೋದ್ಯಮಕ್ಕೆ ಬಾರಿ ಹೊಡೆತ ನೀಡಿತ್ತು.

ಕಳೆದ 2 ವರ್ಷ ಕೋವಿಡ್ ಕಾರಣ ತಾಲೂಕಿನ ಹಲವು ಪ್ರವಾಸಿ ತಾಣಗಳಿಗೆ ಬೀಗ ಜಡಿಯಲಾಗಿತ್ತು. ಇದರಿಂದ ತಾಲೂಕಿನ ಪ್ರವಾಸಿ ತಾಣಗಳಿಂದ ಸರ್ಕಾರದ ಬೋಕ್ಕಸಕ್ಕೆ ಕೋಟಿ ಕೋಟಿ ನಷ್ಟವಾಗಿತ್ತು.

ಸದ್ಯ ಪರಿಸ್ಥಿತಿ ತಿಳಿಯಾಗಿದ್ದು ಕೋವಿಡ್ ಹರಡುವಿಕೆಯಲ್ಲಿ ಗಣ ನೀಯ ಇಳಿಕೆ ಕಂಡಿರುವುದರಿಂದ ಸರ್ಕಾರ ಮಾರ್ಗಸೂಚಿಯನ್ನು ಸಡಲಿಕೆ ಮಾಡಿದ ನಂತರ ತಾಲೂಕಿನ ಧಾರ್ಮಿಕ ಕ್ಷೇತ್ರ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಚೇತರಿಕೆ ಕಂಡಿದ್ದು ಪ್ರವಾಸಿಗರು ಪ್ರವಾಸಿ ತಾಣಗಳತ್ತ ಮುಖ ಮಾಡಿದ್ದಾರೆ.

ಪಕ್ಷಿಧಾಮ: ವಿಶ್ವ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮಕ್ಕೆ ಕಳೆದ 15 ದಿನಗಳಿಂದ ಪ್ರವಾಸಿಗರ ಆಗಮನದಲ್ಲಿ ಭಾರೀ ಏರಿಕೆ ಕಂಡಿದೆ. ನಿತ್ಯ ಮಕ್ಕಳು ಹಾಗೂ ವಯಸ್ಕರು ಸೇರಿ ಅಂದಾಜು 1000ಕ್ಕೂ ಹೆಚ್ಚು ಜನ ಪಕ್ಷಿಗಳ ವೀಕ್ಷಣೆಗೆ ಬರುತ್ತಿದ್ದಾರೆ. ಹಲವು ತಿಂಗಳಿನಿಂದ ಪ್ರವಾಸಿಗರಿಲ್ಲದೆ ಬಿಕೋ ಎನ್ನುತಿದ್ದ ಪಕ್ಷಿಧಾಮದಲ್ಲಿ ಈಗ ಎತ್ತ ನೋಡಿದರತ್ತ ಪ್ರವಾಸಿ ಗರು ತುಂಬಿದ್ದು, ಬೈನಾಕುಲರ್‍ನಿಂದ ಪಕ್ಷಿವೀಕ್ಷಣೆ ಮಾಡುತ್ತಿರುವವರು ಒಂದು ಕಡೆಯಾದರೆ ಮತ್ತೊಂದು ಕಡೆ ಡಿಎಸ್‍ಆರ್ ಕ್ಯಾಮರಾಗಳನ್ನು ಹಿಡಿದು ಪಕ್ಷಿಗಳ ವಿವಿಧ ಭಂಗಿಗಳನ್ನು ಸೆರೆಹಿಡಿಯುತ್ತಿದ್ದಾರೆ. ಮತ್ತೊಂದು ಕಡೆ ಪಕ್ಷಿ ಸಂಕುಲಗಳನ್ನು ಹತ್ತಿರದಿಂದ ವೀಕ್ಷಿಸಿ ಉಲ್ಲಾಸಪಡಲು ಬೋಟಿಂಗ್ ಮಾಡಲು ಸಾಲುಗಟ್ಟಿ ಟಿಕೆಟ್ ಪಡೆದು ಸರದಿ ಸಾಲಿನಲ್ಲಿ ಜೀವ ರಕ್ಷಕಗಳನ್ನು ತೊಟ್ಟು ಬೋಟಿಂಗ್ ಮಾಡುತ್ತಿರುವುದು ಸಾಮಾನ್ಯವಾಗಿದೆ.

ವಿಶೇಷವೆಂದರೆ ರಂಗನತಿಟ್ಟಿಗೆ ಪಕ್ಷಿ ವೀಕ್ಷಣೆಗೆ ಪ್ರವಾಸಿಗರು ಕುಟುಂಬ ಸಮೇತರಾಗಿ ಬರುತ್ತಿರುವುದು ಉತ್ತಮ ಬೆಳವಣಿಗೆ ಎಂದು ಪಕ್ಷಿಧಾಮದ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.

ನಿರೀಕ್ಷೆ ಮುಟ್ಟದ ಬೃಂದಾವನ: ರಂಗನತಿಟ್ಟಿನಲ್ಲಿ ಪ್ರವಾಸಿಗರ ಕಲರವ ಹೆಚ್ಚುತ್ತಿದ್ದರೆ ಇತ್ತ ದೇಶ ವಿದೇಶಗಳ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುತ್ತಿದ್ದ ಕೆಆರ್‍ಎಸ್ ಬೃಂದಾವನ ಸಾಧಾರಣ ಪ್ರವಾಸಿ ಗರಿಂದ ಅಷ್ಟೋ ಇಷ್ಟೋ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದೆ.
‘ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ವ್ಯಾಪಾರಿ ಮೋಹನ್, ಮೊದಲೆಲ್ಲಾ ದಸರಾ ವೇಳೆ ಬೃಂದಾವನದಲ್ಲಿ ಎತ್ತ ನೋಡಿದರೂ ಜನಸಾಗರವಿರುತ್ತಿತ್ತು. ನಮಗೂ ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಾರ ವಹಿವಾಟಾಗಿ ಸಂತೋಷದಿಂದ ಇದ್ದವು. ಆದರೆ ಕೋವಿಡ್ ನಮ್ಮ ಬದುಕನ್ನು 10 ವರ್ಷಗಳ ಹಿಂದಕ್ಕೆ ದೂಡಿದೆ. ಸದ್ಯ ಜನರು ಪ್ರವಾಸಿ ತಾಣ ಗಳಿಗೆ ಬರುತ್ತಿರುವುದರಿಂದ ಜೀವನ ಸಾಗುತ್ತಿದೆ ಆದರೂ ನಾವು ಈ ಬಾರಿ ನಿರೀಕ್ಷಸಿದಷ್ಟು ಜನ ಬರುತ್ತಿಲ್ಲ. ಪ್ರತಿ ದಿನ 800ರಿಂದ 1000 ಜನ ಭೇಟಿ ನೀಡುತ್ತಿದ್ದಾರೆ ಎಂದರು.

ಧಾರ್ಮಿಕ ಕ್ಷೇತ್ರದ ಚೇತರಿಕೆ: ಕಳೆದ ಮಹಾಲಯ ಅಮಾವಾಸ್ಯೆಯ ಪಕ್ಷದಿಂದ ಶ್ರೀರಂಗ ಪಟ್ಟಣದ ದಾರ್ಮಿಕ ಕ್ಷೇತ್ರ ವೇಗವಾಗಿ ಚುರುಕು ಕಂಡಿದೆ ಸಾವಿರಾರು ಜನ ಪಿತೃಪಿಂಡ ಪ್ರಧಾನ ಮಾಡಲು ಕಾವೇರಿ ನದಿ ದಡದಲ್ಲಿ ಜಮಾಯಿಸಿ ನಂತರ ಪಟ್ಟಣದ ಶ್ರೀ ರಂಗ ನಾಥಸ್ವಾಮಿ ದೇವಾಲಯ, ನಿಮಿಷಾಂಭ, ಕ್ಷಣಾಂಬಿಕ, ಸಂಗಮ, ಗೋಸಾಯ್ ಘಾಟ್, ಕಾಶಿ ವಿಶ್ವನಾಥ, ಸೇರಿದಂತೆ ಹಲವು ದೇವಾಲಯಗಳಲ್ಲಿ ಭಕ್ತರ ದಂಡನ್ನು ಕಾಣಬಹುದಾಗಿದೆ.

ಪ್ಯಾಕೇಜ್ ಟೂರ್: ಸಾಮಾನ್ಯವಾಗಿ ಮೈಸೂರು ದಸರಾ ವೇಳೆ ಪ್ರವಾಸಿಗರು ಪ್ಯಾಕೇಜ್ ಟೂರ್ ಮಾಡುವುದು ಸಾಮಾನ್ಯ. ಮೈಸೂರಿನ ಚಾಮುಂಡಿಬೆಟ್ಟ, ಮೃಗಾಲಯ, ವಸ್ತು ಪ್ರದರ್ಶನ, ಮೈಸೂರು ಅರಮನೆ, ಸೇರಿದಂತೆ ಪ್ರಾವಾಸಿ ತಾಣ ಮುಗಿಸಿ ಬಹುತೇಕ ಪ್ರವಾಸಿಗರು ಮೈಸೂರಿನಿಂದ 12 ಕಿ.ಮೀ ಅಂತರದಲ್ಲಿರುವ ಶ್ರೀರಂಗಪಟ್ಟಣದ ಪ್ರವಾಸಿ ತಾಣಗಳ ಕಡೆ ಮುಖ ಮಾಡುತ್ತಾರೆ. ಹೀಗೆ ಬಂದವರು ಮೊದಲು ಶ್ರೀ ರಂಗನಾಥಸ್ವಾಮಿ ದೇವಾಲಯ, ನಿಮಿಷಾಂಬ, ಕ್ಷಣಾಂಬಿಕ, ಸಂಗಮ, ಗೋಸಾಯ್ ಘಾಟ್, ಟಿಪ್ಪು ಸಮ್ಮರ್ ಪ್ಯಾಲೆಸ್ ಪ್ರದೇಶಗಳನ್ನು ಮುಗಿಸಿ, ನಂತರ ರಂಗನತಿಟ್ಟು ಪಕ್ಷಿಧಾಮ ಮುಗಿಸಿ ಸಂಜೆ ವೇಳೆಗೆ ಬೃಂದಾವನಕ್ಕೆ ಬರುವುದು ವಾಡಿಕೆ. ಪ್ರವಾಸಿಗರು ಶ್ರೀರಂಗಪಟ್ಟಣದ ಪ್ರವಾಸಿ ತಾಣಗಳತ್ತ ಮುಖ ಮಾಡಿದ್ದಾರೆ. ಇದರಿಂದ ತಾಲೂಕಿನ ಪ್ರವಾಸಿ ತಾಣಗಳು ಗಿಜಗುಡುತ್ತಿವೆ.

ಶ್ರೀರಂಗಪಟ್ಟಣ ಪ್ರವಾಸೋದ್ಯಮ ವಿಶ್ವದಲ್ಲೇ ಪ್ರಸಿದ್ದಿ ಪಡೆದಿದೆ ಸದ್ಯ ಕೋವಿಡ್ ನಮ್ಮ ಜಿಲ್ಲೆಯಲ್ಲಿ ಇಲ್ಲ. ಹಾಗಾಗಿ ಯಾರೂ ಆತಂಕ ಪಡುವ ಅಗತ್ಯವಿಲ್ಲ. ನೆಮ್ಮದಿಯಿಂದ ಶ್ರೀರಂಗಪಟ್ಟಣದ ಧಾರ್ಮಿಕ ಸ್ಥಳಗಳು ಹಾಗೂ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಬರಲಿ. ಪ್ರವಾಸೋದ್ಯಮವನ್ನೇ ನಂಬಿ ನಮ್ಮ ತಾಲೂಕಿನಲ್ಲಿ ಸಾವಿರಾರು ಕುಟುಂಬ ಜೀವನ ನಡೆಸುತ್ತಿದ್ದಾರೆ ಅಂತವರಿಗೆ ಪ್ರವಾಸೋದ್ಯಮ ಸಂಜೀವಿನಿಯೆ ಸರಿ ಎಂದರು.

Translate »