ಗೂಡ್ಸ್ ಆಟೋಗೆ ಸಾರಿಗೆ ಬಸ್ ಡಿಕ್ಕಿ: ಮದುಮಗ ಸೇರಿ ಮೂವರ ಸಾವು
ಮೈಸೂರು

ಗೂಡ್ಸ್ ಆಟೋಗೆ ಸಾರಿಗೆ ಬಸ್ ಡಿಕ್ಕಿ: ಮದುಮಗ ಸೇರಿ ಮೂವರ ಸಾವು

October 11, 2021

ಮೈಸೂರು, ಅ.10(ಎಂಟಿವೈ)- ಕೆಎಸ್‍ಆರ್ ಟಿಸಿ ಬಸ್ಸೊಂದು ಗೂಡ್ಸ್ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಮದುವೆಗೆ ಬಟ್ಟೆ ಖರೀದಿಸಲು ಬರುತ್ತಿದ್ದ ಮದುಮಗ ಸೇರಿದಂತೆ ಮೂವರು ಸಾವನ್ನಪ್ಪಿ, ನಾಲ್ವರು ಗಾಯಗೊಂಡಿರುವ ಘಟನೆ ಮೈಸೂರು- ತಿ.ನರಸೀಪುರ ಮುಖ್ಯ ರಸ್ತೆಯ ವರಕೋಡು ಮೊರಾರ್ಜಿ ದೇಸಾಯಿ ಶಾಲೆಯ ತಿರುವಿನಲ್ಲಿ ಭಾನುವಾರ ಸಂಜೆ ಸಂಭವಿಸಿದೆ.

ತಿ.ನರಸೀಪುರದ ಇಂದಿರಾ ಕಾಲೋನಿಯ ನಿವಾಸಿ ಗಂಧದ ಕಡ್ಡಿ ವ್ಯಾಪಾರಿ ಬಾಬು ಅವರ ಮಗನಾದ ಮದುಮಗ ಇಮ್ರಾನ್ ಪಾಷ(30), ಈತನ ತಂಗಿ ಯಾಸ್ಮಿನ್(28), ಬಾಬು ಅವರ ಹಿರಿಯ ಪುತ್ರ ಇರ್ಫಾನ್‍ರವರ ಪುತ್ರಿ ಐದು ವರ್ಷದ ಅಫ್ನಾನ್ ಸ್ಥಳದಲ್ಲೇ
ಸಾವನ್ನಪ್ಪಿದರೆ, ನಾಲ್ವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಸೇರಿಸಲಾಗಿದೆ. ಭಾನುವಾರ ಮಧ್ಯಾಹ್ನ 3 ಗಂಟೆಗೆ ಮದುಮಗ ಇಮ್ರಾನ್ ಪಾಷ ಕುಟುಂಬದ 8 ಮಂದಿ ಗೂಡ್ಸ್ ಆಟೋರಿಕ್ಷಾ (ಕೆಎ 11 ಎ 6052)ದಲ್ಲಿ ಮೈಸೂರಿಗೆ ಬರುತ್ತಿದ್ದಾಗ ವರಕೋಡು ಮೊರಾರ್ಜಿ ದೇಸಾಯಿ ಶಾಲೆ ಸಮೀಪದ ತಿರುವಿನಲ್ಲಿ ಮೈಸೂರಿನಿಂದ ತಿ.ನರಸೀಪುರ ಮಾರ್ಗವಾಗಿ ಚಾಮರಾಜನಗರಕ್ಕೆ ತೆರಳುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ (ಕೆಎ 10 ಎಫ್ 0334) ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಗೂಡ್ಸ್ ಆಟೋ ಪಲ್ಟಿಯಾಗಿ ನಜ್ಜುಗುಜ್ಜಾದ ಪರಿಣಾಮ ಮೂವರು ಸ್ಥಳದಲ್ಲೇ ದುರ್ಮರಣಕ್ಕೀಡಾದರೆ, ನಾಲ್ವರು ತೀವ್ರವಾಗಿ ಗಾಯಗೊಂಡರು. ಬಸ್ ಎಡ ಭಾಗದ ರಸ್ತೆ ಬದಿಯ ಪೊದೆಗೆ ನುಗ್ಗಿ ನಿಂತಿದೆ. ಅಪಘಾತದ ವೇಳೆ ಮಳೆ ಜೋರಾಗಿ ಬರುತ್ತಿದ್ದುದರಿಂದ ಅಟೋ ಚಾಲಕ ಎದುರಿಗೆ ಬರುತ್ತಿದ್ದ ಬಸ್ಸನ್ನು ಗುರುತಿಸಲು ವಿಫಲನಾಗಿರುವುದೇ ಈ ಘಟನೆಗೆ ಕಾರಣವೆನ್ನಲಾಗಿದೆ.

ಇಮ್ರಾನ್ ಪಾಷಗೆ ಅ.25ರಂದು ವಿವಾಹ ನಿಶ್ಚಯವಾಗಿತ್ತು. ಇದಕ್ಕಾಗಿ ಇಂದು ಮೈಸೂರಿ ನಲ್ಲಿ ಮಧುಮಗ ಹಾಗೂ ಕುಟುಂಬಸ್ಥರು ಹೊಸ ಬಟ್ಟೆ ಖರೀದಿಸಿ ಸಂಜೆ ಮೈಸೂರಿನಲ್ಲಿ ದಸರಾ ದೀಪಾಲಂಕಾರವನ್ನು ನೋಡಿಕೊಂಡು ಮನೆಗೆ ಮರಳುವ ಉದ್ದೇಶದೊಂದಿಗೆ ಮೈಸೂರಿನತ್ತ ಆಗಮಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಅಪಘಾತ ಸಂಭವಿಸಿದ ಕೂಡಲೇ ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಇತರ ವಾಹನ ಸವಾರರು ಹಾಗೂ ಪ್ರಯಾಣಿಕರು ಗಾಯಾಳುಗಳ ನೆರವಿಗೆ ಬಂದು ರಕ್ಷಿಸುವ ಪ್ರಯತ್ನ ಮಾಡಿದರು. ಅಷ್ಟರ ಲ್ಲಾಗಲೇ ಮೂವರ ಪ್ರಾಣಪಕ್ಷಿ ಹಾರಿಹೋಗಿತ್ತು. ಗೂಡ್ಸ್ ಆಟೋ ಅಡಿ ಸಿಲುಕಿದ್ದ ಗಾಯಾಳುಗಳನ್ನು ಹೊರ ತೆಗೆದು ಕೆ.ಆರ್.ಆಸ್ಪತ್ರೆಗೆ ದಾಖಲಿಸಲು ನೆರವಾದರು. ಘಟನಾ ಸ್ಥಳಕ್ಕೆ ಎಸ್ಪಿ ಆರ್.ಚೇತನ್, ಎಎಸ್‍ಪಿ ಶಿವಕುಮಾರ್, ಡಿವೈಎಸ್‍ಪಿ ಡಾ.ಸುಮಿತ್, ಗ್ರಾಮಾಂತರ ಠಾಣೆ ಸರ್ಕಲ್ ಇನ್ಸ್‍ಪೆಕ್ಟರ್ ಮಹೇಶ್, ವರುಣಾ ಠಾಣೆ ಸಬ್‍ಇನ್ಸ್‍ಪೆಕ್ಟರ್ ಆರ್.ಲಕ್ಷ್ಮೀ ಹಾಗೂ ಸಿಬ್ಬಂದಿ ಭೇಟಿ ನೀಡಿ ಎರಡೂ ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಸಂಬಂಧ ವರುಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »