ಜಿ.ಟಿ.ದೇವೇಗೌಡರಿಗೆ ಇನ್ನು  ಜೆಡಿಎಸ್ ಬಾಗಿಲು ಬಂದ್
ಮೈಸೂರು

ಜಿ.ಟಿ.ದೇವೇಗೌಡರಿಗೆ ಇನ್ನು ಜೆಡಿಎಸ್ ಬಾಗಿಲು ಬಂದ್

December 5, 2021

ಮೈಸೂರು: ಶಾಸಕ ಜಿ.ಟಿ.ದೇವೇಗೌಡ ಅವರಿಗೆ ಜೆಡಿಎಸ್ ಪಕ್ಷದ ಬಾಗಿಲು ಮುಚ್ಚಿದ್ದು, 2023ಕ್ಕೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೊಸ ನಾಯಕತ್ವ-ಹೊಸ ಶಾಸಕರನ್ನು ನೀವೇ ಆಯ್ಕೆ ಮಾಡಿಕೊಳ್ಳು ತ್ತೀರಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಕ್ಷೇತ್ರ ವ್ಯಾಪ್ತಿಯ ಚುನಾವಣಾ ಪ್ರಚಾರದಲ್ಲಿ ಘೋಷಿಸಿದರು. ಕೊಡವ ಸಮಾಜ ದಲ್ಲಿ ಶನಿವಾರ ಮಾತನಾಡಿದ ಅವರು, ನನಗೆ ಕಲ್ಯಾ ಣೋತ್ಸವ ಆಗಬೇಕಿರುವುದು ಯಾರನ್ನೋ ಮುಖ್ಯ ಮಂತ್ರಿ ಮಾಡಲು ಅಲ್ಲ. ರೈತರು ಸೇರಿದಂತೆ ಈ ನಾಡಿನ ಆರೂವರೆ ಕೋಟಿ ಜನತೆ ಕಲ್ಯಾಣೋತ್ಸವ ಆಗಬೇಕು ಎಂದು ಜಿ.ಟಿ.ದೇವೇಗೌಡರಿಗೆ ಕುಟುಕಿದರು.

ಚಾಮುಂಡೇಶ್ವರಿ ಕ್ಷೇತ್ರದ ಜನತೆ, ಕಳೆದ 12 ವರ್ಷಗಳಿಂದ ಪ್ರೀತಿ-ವಿಶ್ವಾಸದಿಂದ ಬೆಳೆಸಿದ್ದೀರಿ. ಪಕ್ಷ ಬಿಡುತ್ತೇನೆ ಎಂದವರನ್ನು
ದುಡುಕಿ ಕಳುಹಿಸಬೇಡವೆಂದು ಹೆಚ್.ಡಿ.ದೇವೇಗೌಡರು ಪದೇ ಪದೆ ಹೇಳುತ್ತಿದ್ದರು. ಜಿ.ಟಿ.ದೇವೇಗೌಡರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಹೆಚ್.ಡಿ.ದೇವೇಗೌಡರು ಮಾತ್ರವಲ್ಲದೆ, ನನ್ನ ಮಗನೂ ಪ್ರಯತ್ನ ಮಾಡಿ ಆಯಿತು ಎಂದರು.

ಜಿ.ಟಿ.ದೇವೇಗೌಡರು 2008ರಲ್ಲಿ ಪಕ್ಷ ತೊರೆದು ಹೋಗಿ, 2013ರಲ್ಲಿ ಮತ್ತೆ ಬಂದ ರೀತಿಯಲ್ಲಾದರೇನು ಮಾಡುವುದು? ನಾವೇಕೆ ಇಕ್ಕಟ್ಟಿಗೆ ಸಿಲುಕುವುದು? ಎಂಬ ಅಳಕು ಯಾರಿಗೂ ಬೇಡ. ಇಂದು ಓಪನ್ ಆಗಿ ಹೇಳುತ್ತೇನೆ. ಅವರಿಗೆ ಪಕ್ಷದ ಬಾಗಿಲು ಮುಚ್ಚಿದೆ. ಮತ್ತೆ ಸೇರಿಸಿಕೊಂಡರೆ ನಾವು ಇಕ್ಕಟ್ಟಿಗೆ ಸಿಲುಕುತ್ತೇವೆ ಎಂದುಕೊಳ್ಳಬೇಡಿ. ಅದು ಮುಗಿದ ಅಧ್ಯಾಯ. ಅವರ ಬಗ್ಗೆ ನಾನು ಸಣ್ಣದಾಗೂ ಮಾತನಾಡುವುದಿಲ್ಲ ಎಂದರು.
ಧಮ್ಕಿಗೆ ಹೆದರುವವರಲ್ಲ: ಈ ಸಭೆಗೆ ಹೋಗದಂತೆ ಯಾರು (ಜಿ.ಟಿ.ದೇವೇಗೌಡ) ಧಮ್ಕಿ ಹಾಕಿದ್ದಾರೆ ಎಂದು ಮಾವಿನಹಳ್ಳಿ ಸಿದ್ದೇಗೌಡರು ಪ್ರಸ್ತಾಪಿಸಿದ್ದಾರೆ. ಕುರುಕ್ಷೇತ್ರದ ಪ್ರಸಂಗದ ಮೂಲಕ ಅದನ್ನು ಅವರು ವಿವರಿಸಿದ್ದಾರೆ. ಆದರೆ ಚಾಮುಂಡೇಶ್ವರಿ ಕ್ಷೇತ್ರದ ಜನತೆ ಮತ್ತು ಪಕ್ಷದ ಮುಖಂಡರು ಪ್ರೀತಿ-ವಿಶ್ವಾಸಕ್ಕೆ ತಲೆ ಬಾಗುವರೇ ಹೊರತು ಧಮ್ಕಿಗೆ ಹೆದರುವವರಲ್ಲ. ಇದು ಹಲವು ಬಾರಿ ಸಾಬೀತಾಗಿದೆ. ಸಿದ್ದೇಗೌಡರು ಏನು ನೋವು ಅನುಭವಿಸಿದ್ದಾರೆ ಎಂಬುದು ನನಗೆ ಗೊತ್ತು. ಸಿದ್ದೇಗೌಡರು ಹೇಳಿದ ಮಾತುಗಳಲ್ಲಿ ಅತಿಶಯೋಕ್ತಿ ಇಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.

Translate »