ಮೈಸೂರಲ್ಲಿ ‘ಒಮಿಕ್ರಾನ್’ಗೆ ಕಡಿವಾಣ ಹಾಕಿ
ಮೈಸೂರು

ಮೈಸೂರಲ್ಲಿ ‘ಒಮಿಕ್ರಾನ್’ಗೆ ಕಡಿವಾಣ ಹಾಕಿ

December 5, 2021

ಮೈಸೂರು, ಡಿ. 4(ಆರ್‍ಕೆ)- ಕೊರೊನಾ 3ನೇ ಅಲೆಯ ರೂಪಾಂತರಿ ಒಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರು ಅಧೀನಾಧಿಕಾರಿಗಳಿಗೆ ಇಂದಿಲ್ಲಿ ಸೂಚನೆ ನೀಡಿದ್ದಾರೆ.

ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆರೋಗ್ಯ, ಶಿಕ್ಷಣ, ಪೊಲೀಸ್ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು, ಸಿನಿಮಾ ಮಂದಿರ ಮಾಲೀಕರ ಸಂಘ, ಮಾಲ್ ಗಳ ಮಾಲೀಕರು, ಸರ್ಕಾರಿ ನೌಕರರ ಸಂಘದ ಪದಾಧಿಕಾರಿ ಗಳೊಂದಿಗೆ ಸಭೆ ನಡೆಸಿದ ಅವರು, ಒಮಿಕ್ರಾನ್ ಸೋಂಕು ಹರಡದಂತೆ ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಎಲ್ಲಾ ಬಗೆಯ ಸಭೆ, ಸಮಾರಂಭ, ಸಮ್ಮೇಳನಗಳಲ್ಲಿ 500 ಮಂದಿಗಿಂತ ಹೆಚ್ಚು ಜನರು ಸೇರಲು ಅವಕಾಶ ನೀಡಬಾರದು, ಸ್ಥಳದಲ್ಲಿ ಕೋವಿಡ್-19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆಯೋಜಕರಿಗೆ ತಿಳುವಳಿಕೆ ನೀಡಬೇಕು, ಶೈಕ್ಷಣಿಕ ಸಂಸ್ಥೆಗಳಲ್ಲಿ ನಡೆಸಲು ದ್ದೇಶಿಸಿದ್ದ ಸಾಂಸ್ಕøತಿಕ ಚಟುವಟಿಕೆ, ಸಮಾರಂಭಗಳನ್ನು 2022ರ ಜನವರಿ 15ರವರೆಗೆ ಮುಂದೂಡಬೇಕು ಎಂದ ಅವರು, ಶಾಲೆ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳ ಪೋಷಕರು ಕಡ್ಡಾಯ ವಾಗಿ ಕೋವಿಡ್-19 ಲಸಿಕೆ ಪಡೆದಿರಬೇಕೆಂಬುದನ್ನು ದೃಢಪಡಿಸಿ ಕೊಳ್ಳಬೇಕೆಂದು ತಾಕೀತು ಮಾಡಿದರು.

ಎರಡೂ ಡೋಸ್ ಪಡೆಯದ ಪ್ರೇಕ್ಷಕರು ಹಾಗೂ ಗ್ರಾಹಕರನ್ನು ಚಿತ್ರಮಂದಿರ, ಮಾಲ್‍ಗಳಿಗೆ ಪ್ರವೇಶ ಕಲ್ಪಿಸ ಬಾರದು, ಮೊದಲ ಡೋಸ್ ಪಡೆದು, ಎರಡನೇ ಡೋಸ್ ಲಸಿಕೆ ಪಡೆಯಲು ಅವಧಿ ಪೂರ್ಣಗೊಳ್ಳದ ಹಾಗೂ ಎರಡೂ ಡೋಸ್‍ಗಳನ್ನು ಹಾಕಿಸಿಕೊಂಡಿರುವವರ ಮೊಬೈಲ್‍ನಲ್ಲಿ ದೃಢೀಕರಣ ಪತ್ರ ನೋಡಿ ಖಾತರಿಪಡಿಸಿಕೊಂಡು ಪ್ರವೇಶ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಎಲ್ಲಾ ಇಲಾಖೆಗಳ ಸರ್ಕಾರಿ, ಅರೆ ಸರ್ಕಾರಿ ನೌಕರರು ಕಡ್ಡಾಯವಾಗಿ ಲಸಿಕೆ ಪಡೆಯಬೇಕು, ಮಾಸ್ಕ್ ಧರಿಸದವರಿಗೆ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 250 ರೂ. ಹಾಗೂ ಗ್ರಾಮೀಣ ಭಾಗದಲ್ಲಿ 100 ರೂ. ದಂಡ ವಿಧಿಸುವ ಕಾರ್ಯಾಚರಣೆಯನ್ನು ಇಂದಿನಿಂದಲೇ ತೀವ್ರಗೊಳಿಸಬೇಕು, ಕೇರಳ ಗಡಿ ಭಾಗದ ಚೆಕ್‍ಪೋಸ್ಟ್‍ಗಳಲ್ಲಿ ಹೆಚ್ಚಿನ ಕಣ್ಗಾವಲು ಇರಿಸಿ ತಪಾಸಣೆ ನಡೆಸಬೇಕೆಂದೂ ಡಾ. ಬಗಾದಿ ಗೌತಮ್ ಇದೇ ವೇಳೆ ಸೂಚನೆ ನೀಡಿದರು. ಸಾರ್ವಜನಿಕ ಶಿಕ್ಷಣ ಉಪನಿರ್ದೇಶಕರು ಸೋಮವಾರವೇ ಎಲ್ಲಾ ಶಾಲಾ ಮುಖ್ಯೋಪಾಧ್ಯಾಯರೊಂದಿಗೆ, ಪದವಿ ಪೂರ್ವ ಶಿಕ್ಷಣ ಉಪನಿರ್ದೇಶಕರು ಕಾಲೇಜು ಪ್ರಾಂಶುಪಾಲರೊಂದಿಗೆ ಸಭೆ ನಡೆಸಿ ವಿದ್ಯಾರ್ಥಿಗಳ ಪೋಷಕರು ಕೊರೊನಾ ಲಸಿಕೆ ಪಡೆದಿರುವ ಬಗ್ಗೆ ದೃಢೀಕರಿಸಿಕೊಳ್ಳಬೇಕು, ಪಡೆಯದ ಪೋಷಕರ ಮಕ್ಕಳನ್ನು ಶಾಲಾ-ಕಾಲೇಜುಗಳಿಗೆ ಪ್ರವೇಶಾವಕಾಶ ನೀಡಬಾರದು ಎಂದು ಅವರು ತಾಕೀತು ಮಾಡಿದರು.

ಮೈಸೂರು ಮಹಾನಗರ ಪಾಲಿಕೆಯ ಅಧಿಕಾರಿಗಳ ತಂಡಗಳು ಮಾಲ್, ಸಿನೆಮಾ ಮಂದಿರ, ಕಲ್ಯಾಣ ಮಂಟಪಗಳಿಗೆ ಭೇಟಿ ನೀಡಿ ಕೋವಿಡ್ ನಿಯಮ ಪಾಲಿಸಲಾ ಗಿದೆಯೇ ಎಂಬುದನ್ನು ಪರಿಶೀಲಿಸಿ ಉಲ್ಲಂಘನೆ ಮಾಡಿದವರ ವಿರುದ್ಧ ವಿಪತ್ತು ನಿರ್ವಹಣಾ ಅಧಿನಿಯಮ 2005ರ ಸೆಕ್ಷನ್ 51ರಿಂದ 60 ರನ್ವಯ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ತಾಕೀತು ಮಾಡಿದರು. ಅಡಿಷನಲ್ ಡಿಸಿ ಮಂಜುನಾಥಸ್ವಾಮಿ, ಎಸ್ಪಿ ಆರ್. ಚೇತನ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕೆ.ಹೆಚ್. ಪ್ರಸಾದ್, ಪಾಲಿಕೆ ಆರೋಗ್ಯಾಧಿಕಾರಿ ಡಾ. ಡಿ.ಜಿ. ನಾಗರಾಜ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್, ದೇವರಾಜ ಉಪವಿಭಾಗದ ಎಸಿಪಿ ಶಶಿಧರ್ ಸೇರಿದಂತೆ ಹಲವು ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Translate »