ಹಿರಿಯ ನಟ ಶಿವರಾಂ ಇನ್ನಿಲ್ಲ
News

ಹಿರಿಯ ನಟ ಶಿವರಾಂ ಇನ್ನಿಲ್ಲ

December 5, 2021

ಬೆಂಗಳೂರು, ಡಿ.4-ಕನ್ನಡ ಚಿತ್ರ ರಂಗದ ಹಿರಿಯ ನಟ ಶಿವರಾಂ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಕಳೆದ ಮೂರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ನಿಧನರಾದರು. ಕನ್ನಡ ಚಿತ್ರರಂಗ ಹಿರಿಯ ನಟರೊಬ್ಬರನ್ನು ಕಳೆದುಕೊಂಡಿದೆ.

ಕನ್ನಡದ ಹಲವಾರು ಚಿತ್ರಗಳಲ್ಲಿ ಹಾಸ್ಯ ನಟರಾಗಿ ನಟಿಸಿದ್ದ ಶಿವರಾಂ, ಮಹಾ ದೈವಭಕ್ತರಾಗಿದ್ದು, ಅಯ್ಯಪ್ಪ ಸ್ವಾಮಿ ಆರಾಧಕರಾಗಿದ್ದರು. ತಮ್ಮ ಮನೆಯ ಟೆರೇಸ್‍ನಲ್ಲಿ ಅಯ್ಯಪ್ಪ ಸ್ವಾಮಿ ಪೂಜೆ ಮಾಡಲು ಪ್ರತ್ಯೇಕ ವ್ಯವಸ್ಥೆ ಮಾಡಿಕೊಂಡಿದ್ದರು. ಪೂಜೆ ಮಾಡು ವಾಗ ಏಕಾಂತ ಬಯಸುತ್ತಿದ್ದರು. ಪೂಜೆ ವೇಳೆ ಕೊಠಡಿಯ ಬಾಗಿಲು ಮುಚ್ಚಿರುತ್ತಿತ್ತು. ಈ ವೇಳೆ ಅಯ್ಯಪ್ಪ ಸ್ವಾಮಿ ಸ್ಮರಣೆಯಲ್ಲಿ ಮುಳುಗಿರುತ್ತಿದ್ದರು.
ಮೊನ್ನೆ ಇದೇ ರೀತಿ ಪೂಜೆ ಮಾಡಲು ಕೊಠಡಿ ಒಳಗೆ ಹೋದ ಶಿವರಾಂ ಅವರು, ಎಷ್ಟು ಹೊತ್ತಾದರೂ ಹೊರಗೆ ಬಂದಿ ರಲಿಲ್ಲ. ಮನೆಯವರು ಅನುಮಾನಗೊಂಡು ಹೋಗಿ ನೋಡಿದಾಗ ಅವರು ಪ್ರಜ್ಞಾಶೂನ್ಯ ರಾಗಿ ಬಿದ್ದಿದ್ದರು.

ತಲೆಗೆ ಬಲವಾದ ಪೆಟ್ಟು ಬಿದ್ದು, ಮೆದುಳಿನಲ್ಲಿ ರಕ್ತಸ್ರಾವವಾಗಿತ್ತು. ತಕ್ಷಣ ಅವರನ್ನು ಸೀತಾ ಸರ್ಕಲ್‍ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಶಸ್ತ್ರಚಿಕಿತ್ಸೆಯ ಅಗತ್ಯವಿತ್ತಾದರೂ, ವಯಸ್ಸಾಗಿರುವ ಕಾರಣ ಕಷ್ಟವೆಂದು ವೈದ್ಯರು ಅವರನ್ನು ಐಸಿಯುನಲ್ಲಿ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾರಂಭಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಮೂರ್ನಾಲ್ಕು ಬಾರಿ ಶಬರಿಮಲೆಗೆ ಹೋಗಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದು ಬಂದಿದ್ದರು. ನಟ ಶಿವರಾಜ್‍ಕುಮಾರ್ ಅವರ ಜೊತೆಯೂ ಶಿವರಾಂ ಅವರು ಶಬರಿಮಲೆಗೆ ಹೋಗಿ ಸ್ವಾಮಿ ದರ್ಶನ ಪಡೆದು ಬಂದಿದ್ದರು. ಇದಕ್ಕೂ ಮುನ್ನ ಶಿವರಾಮ್ ಅವರ ಕಾರು ಅಪಘಾತಕ್ಕೆ ಒಳಗಾಗಿತ್ತು. ಆಗ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಅಂದರೆ ಬುಧವಾರ (ಡಿ. 1) ಅಯ್ಯಪ್ಪನ ಪೂಜೆ ಮಾಡಲು ಹೋಗಿ ಕೋಣೆಯಲ್ಲಿ ಜಾರಿ ಬಿದ್ದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಗುಬ್ಬಿ ವೀರಣ್ಣ ನಾಟಕಗಳಿಂದ ಸ್ಫೂರ್ತಿ: ಹಿರಿತೆರೆ ಮತ್ತು ಕಿರುತೆರೆ ಎರಡರಲ್ಲೂ ಗುರುತಿಸಿಕೊಂಡಿದ್ದ ಶಿವರಾಂ ಅವರು, 1938ರಲ್ಲಿ ಅಂದಿನ ಮದ್ರಾಸ್ ಪ್ರಾಂತ್ಯದಲ್ಲಿದ್ದ ಚೂಡಸಂದ್ರ ಹಳ್ಳಿಯಲ್ಲಿ ಜನಿಸಿ, ಸುಮಾರು 6 ದಶಕಗಳ ಕಾಲ ನೂರಾರು ಚಿತ್ರಗಳಲ್ಲಿ ನಟಿಸಿ, ಮನೆ ಮಾತಾಗಿದ್ದರು. ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ ಶಿವರಾಂ ಅವರು ಬೆಂಗಳೂರಿಗೆ ಬಂದು, ಸಹೋದರನ ಜೊತೆ ವಾಸ ಮಾಡಲಾರಂಭಿಸಿದ್ದರು.
ಗುಬ್ಬಿ ವೀರಣ್ಣ ಅವರ ನಾಟಕಗಳಿಂದ ಪ್ರೇರಣೆಗೊಳಗಾಗಿದ್ದರು. ಅವರು ನಾಟಕಗಳಲ್ಲಿ ಬಣ್ಣ ಹಚ್ಚಲು ಆರಂಭಿಸುವ ಮೂಲಕ ರಂಗಭೂಮಿ ಪ್ರವೇಶಿಸಿದರು. 1965ರಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಶಿವರಾಂ ‘ಬೆರೆತ ಜೀವ’ ಚಿತ್ರದಲ್ಲಿ ನಟಿಸಿದರು. ನಂತರ ಚಿತ್ರ ನಿರ್ಮಾಣದಲ್ಲೂ ಆಸಕ್ತಿ ಬೆಳೆಸಿಕೊಂಡ ಶಿವರಾಂ 1970ರಲ್ಲಿ ತೆರೆಗೆ ಬಂದ ‘ಗೆಜ್ಜೆ ಪೂಜೆ’, ‘ಉಪಾಸನೆ’, ‘ನಾನೊಬ್ಬ ಕಳ್ಳ’ ಚಿತ್ರಗಳನ್ನು ನಿರ್ಮಾಣ ಕೂಡ ಮಾಡಿದ್ದರು. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಸದಭಿರುಚಿಯ ಚಿತ್ರಗಳ ಕೊಡುಗೆ ನೀಡಿದ್ದರು. ನಟನೆ ಮಾತ್ರವಲ್ಲದೆ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಜೊತೆ ಸಹಾಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಮೇರು ನಟರಾದ ದಿವಂಗತ ಡಾ. ರಾಜ್‍ಕುಮಾರ್, ವಿಷ್ಣುವರ್ಧನ್ ಹಾಗೂ ಅವರ ಕುಟುಂಬದ ಜೊತೆ ಒಡನಾಟ ಹೊಂದಿದ್ದ ಶಿವರಾಂ ಅವರೆಲ್ಲರಿಗೂ ಪ್ರೀತಿಪಾತ್ರರಾಗಿದ್ದರು.
ಶಿವರಾಂ ಚಿತ್ರಗಳು: ಶಿವರಾಂ ಅವರು ಬೆರೆತ ಜೀವ(1965) ಮೂಲಕ ನಟನೆಗೆ ಇಳಿದರು. ನಂತರ ಮಾವನ ಮಗಳು, ದುಡ್ಡೆ ದೊಡ್ಡಪ್ಪ, ಲಗ್ನ ಪತ್ರಿಕೆ, ಶರಪಂಜರ, ಮುಕ್ತಿ, ಭಲೆ ಅದೃಷ್ಟವೋ ಅದೃಷ್ಟ, ಸಿಪಾಯಿ ರಾಮು, ನಾಗರಹಾವು, ನಾ ಮೆಚ್ಚಿದ ಹುಡುಗ, ಹೃದಯ ಸಂಗಮ, ಕಿಲಾಡಿ ಕಿಟ್ಟು, ನಾನೊಬ್ಬ ಕಳ್ಳ, ಹಾಲು-ಜೇನು, ಪಲ್ಲವಿ ಅನುಪಲ್ಲವಿ, ಭಜರಂಗಿ, ಬಂಗಾರ S/o ಬಂಗಾರದ ಮನುಷ್ಯ ಸೇರಿದಂತೆ ನೂರಾರು ಚಿತ್ರಗಳಲ್ಲಿ ನಟಿಸಿದ್ದಾರೆ.

ನಾಳೆ 11 ಗಂಟೆಗೆ ಅಂತ್ಯಕ್ರಿಯೆ: ಅಗಲಿದ ನಟ ಶಿವರಾಂ ಅವರ ಮೃತ ದೇಹವನ್ನು ನಾಳೆ ಬೆಳಗ್ಗೆ 7.30ರಿಂದ 10 ಗಂಟೆವರೆಗೆ ರವೀಂದ್ರ ಕಲಾ ಕ್ಷೇತ್ರದಲ್ಲಿ ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, 11 ಗಂಟೆಗೆ ಬನಶಂಕರಿ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಶಿವರಾಂ ಅವರ ಮಗ ಲಕ್ಷ್ಮೀಶ ತಿಳಿಸಿದ್ದಾರೆ.

ನಟರಾದ ಶಿವರಾಜ್‍ಕುಮಾರ್, ಅನಂತನಾಗ್, ಶ್ರೀನಾಥ್, ನಟಿ ಗಿರಿಜಾ ಲೋಕೇಶ್, ವಿಜಯ್ ಪ್ರಕಾಶ್, ಅಶೋಕ್, ಬಿ.ಸಿ. ಪಾಟೀಲ್, ರಾಘವೇಂದ್ರ ರಾಜಕುಮಾರ್ ಸೇರಿದಂತೆ ಅನೇಕ ಸಿನಿ ತಾರೆಯರು ನಟ ಶಿವರಾಂ ಅಂತಿಮ ದರ್ಶನ ಪಡೆದರು.

Translate »