ಬೆಂಗಳೂರು, ಸೆ.9-ಮಂಗಳವಾರ ಬೆಂಗಳೂರಲ್ಲಿ ನಡೆದ ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಮಾಜಿ ಸಚಿವರೂ ಆದ ಹಾಲಿ ಶಾಸಕ ಜಿ.ಟಿ. ದೇವೇಗೌಡ ಶಾಶ್ವತ ದಸರಾ ಪ್ರಾಧಿಕಾರ ಸ್ಥಾಪನೆಗೆ ಸರ್ಕಾರದ ಗಮನ ಸೆಳೆದಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಮ್ಮ ಅಭಿ ಪ್ರಾಯಗಳನ್ನು ಮಂಡಿಸಿದ ಜಿಟಿಡಿ, ಮೈಸೂರು ದಸರಾ ಪ್ರಾಧಿಕಾರವನ್ನು ರಚಿಸಿದರೆ, ಸಾಂಸ್ಕøತಿಕ ರಾಜಧಾನಿಯಾದ ಮೈಸೂರಿನಲ್ಲಿ ನಿರಂತರವಾಗಿ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲು ಅನುಕೂಲವಾಗುತ್ತದೆ. ಇದರ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಈಗ ಪ್ರತೀ ವರ್ಷ ದಸರಾ ಸಂದರ್ಭದಲ್ಲಿ ತರಾತುರಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಸರಿಯಾದ ಕ್ರಮವಲ್ಲ. ಆದ್ದರಿಂದ ಸರ್ಕಾರ ಈಗಲಾದರೂ ದಸರಾ ಪ್ರಾಧಿಕಾರ ರಚನೆಗೆ ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.
ಪ್ರತ್ಯೇಕ ಮಂಡಳಿ ರಚನೆಗೆ ಪ್ರಸ್ತಾಪ: ಮೈಸೂರಿಗೆ ಸಮರ್ಪಕ ಕುಡಿಯುವ ನೀರು ಪೂರೈಕೆ ಹಾಗೂ ಒಳ ಚರಂಡಿ ಮೂಲಕ ಸ್ವಚ್ಛತೆಯನ್ನು ಕಾಯ್ದುಕೊಳ್ಳಲು ಪ್ರತ್ಯೇಕ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯನ್ನು ರಚಿಸುವುದು ಅನಿವಾರ್ಯ ವಾಗಿದೆ ಎಂದು ಜಿಟಿಡಿ ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ಬೆಂಗಳೂರು, ಧಾರವಾಡಗಳಲ್ಲಿ ಪ್ರತ್ಯೇಕ ಮಂಡಳಿಯನ್ನು ರಚನೆ ಮಾಡಲಾಗಿದೆ. ಮೈಸೂರಲ್ಲಿ ನಗರವೂ ಸೇರಿದಂತೆ ನಗರಕ್ಕೆ ಹೊಂದಿಕೊಂಡಂತೆ ಇರುವ ಬಡಾವಣೆಗಳು ಹಾಗೂ ಗ್ರಾಮ ಗಳಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆ ಇಲ್ಲ. ಒಳ ಚರಂಡಿ ಸ್ವಚ್ಛತೆಯನ್ನಂತೂ ಕೇಳುವಂತೆಯೇ ಇಲ್ಲ. ಇದಕ್ಕೆಲ್ಲಾ ಒಂದು ಪರಿಹಾರವೆಂದರೆ ಅದು ಪ್ರತ್ಯೇಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯನ್ನು ರಚಿಸುವುದೇ ಆಗಿದೆ ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ. ಮೈಸೂರು ನಗರ ದಿನೇದಿನೆ ವಿಸ್ತಾರ ಗೊಳ್ಳುತ್ತಿದೆ. ರಿಂಗ್ ರಸ್ತೆ ಒಳಗೆ ಮತ್ತು ಹೊರಗೆ ನಗರ ವ್ಯಾಪಕ ವಾಗಿ ಅಭಿವೃದ್ಧಿಗೊಂಡಿದೆ. ಮೈಸೂರಿನ ಹೊರ ವಲಯದ ಪ್ರಮುಖ ಗ್ರಾಮಗಳನ್ನು ಪಟ್ಟಣ ಪಂಚಾಯತ್ ಆಗಿ ಪರಿವರ್ತನೆ ಮಾಡು ವುದು ಹಾಗೂ ಗ್ರೇಟರ್ ಮೈಸೂರ್ ರೂಪಿಸುವ ಮೂಲಕ ನಗರದ ಯೋಜಿತ ಬೆಳವಣಿಗೆಗೆ ಅನುವು ಮಾಡಿಕೊಡುವುದಕ್ಕೆ ಇದು ಸೂಕ್ತ ಸಮಯ ಎಂದು ಜಿಟಿಡಿ ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಮುಂದಿನ ದಿನಗಳಲ್ಲಿ ಪ್ರತ್ಯೇಕ ಸಭೆ ಸೇರಿ, ಇದರ ಬಗ್ಗೆ ಚರ್ಚಿಸಿ, ಒಂದು ನಿರ್ಧಾರ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ ಎಂದು ಹೇಳಲಾಗಿದೆ.