ಚಾಮುಂಡೇಶ್ವರಿಯಲ್ಲಿ ಜಿಟಿಡಿ ಮಹಾ ಶಕ್ತಿ ಪ್ರದರ್ಶನ
ಮೈಸೂರು

ಚಾಮುಂಡೇಶ್ವರಿಯಲ್ಲಿ ಜಿಟಿಡಿ ಮಹಾ ಶಕ್ತಿ ಪ್ರದರ್ಶನ

February 6, 2023

ಮೈಸೂರು, ಫೆ.5(ಎಂಕೆ, ಎಸ್‍ಬಿಡಿ)- ಜೆಡಿಎಸ್ ಯುವ ನಾಯಕರ ಜನ್ಮದಿನೋ ತ್ಸವದ ಅದ್ಧೂರಿ ಆಚರಣೆ ಮೂಲಕ ಭಾನು ವಾರ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಪಕ್ಷದ ಮಹಾಶಕ್ತಿ ಪ್ರದರ್ಶಿಸಲಾಯಿತು. ಇದರೊಂದಿಗೆ ಕ್ಷೇತ್ರದ ಶಾಸಕ ಜಿ.ಟಿ.ದೇವೇ ಗೌಡರ ವಿರುದ್ಧ ಹರಿಹಾಯ್ದು ಸವಾಲೆಸೆದಿ ದ್ದವರಿಗೆ ಖಡಕ್ ಪ್ರತ್ಯುತ್ತರ ನೀಡಿದಂತಿತ್ತು.

ಜೆಡಿಎಸ್ ಯುವ ನಾಯಕರಾದ ನಿಖಿಲ್ ಕುಮಾರಸ್ವಾಮಿ ಹಾಗೂ ಜಿ.ಡಿ.ಹರೀಶ್ ಗೌಡರು ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿ ಕೊಂಡಿದ್ದು, ಈ ಹಿನ್ನೆಲೆಯಲ್ಲಿ ಚಾಮುಂ ಡೇಶ್ವರಿ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಮೈಸೂರು-ಹೆಚ್.ಡಿ.ಕೋಟೆ ರಸ್ತೆ, ಜಯ ಪುರ ಬಳಿಯ ದಾರಿಪುರದಲ್ಲಿ ಇಂದು ಆಯೋಜಿಸಿದ್ದ ಬೃಹತ್ ಕಾರ್ಯಕ್ರಮದಲ್ಲಿ ಜನಸ್ತೋಮವೇ ನೆರೆದಿದ್ದಿತ್ತು. ಮಧ್ಯಾಹ್ನ 12 ಗಂಟೆಯಿಂದಲೂ ಕ್ಷೇತ್ರದ ಮೂಲೆ ಮೂಲೆಗಳಿಂದ ಜನ ಆಗಮಿಸಿದ್ದರು.
ಕಾರ್ಯಕರ್ತರ ಬೈಕ್ ರ್ಯಾಲಿಯೊಂದಿಗೆ ತೆರೆದ ವಾಹನದಲ್ಲಿ ರೋಡ್ ಶೋ ನಡೆ ಸಿದ ಯುವ ನಾಯಕರು, ದಾರಿಯುದ್ದಕ್ಕೂ ಪ್ರೀತಿಯ ಅಭಿನಂದನೆಯನ್ನು ಸ್ವೀಕರಿಸಿ ವೇದಿಕೆಗೆ ಆಗಮಿಸುವುದು ಸಂಜೆಯಾ ದರೂ ಕೂಡ ಕಾರ್ಯಕರ್ತರು ಕದಲದೆ ಕುಳಿತಿದ್ದರು. ಕಾರ್ಯಕ್ರಮದ ಕೊನೆವರೆಗೂ ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇ ಗೌಡರು, ಮಾಜಿ ಸಿಎಂ ಹೆಚ್.ಡಿ.ಕುಮಾರ ಸ್ವಾಮಿ, ಜಿ.ಟಿ.ದೇವೇಗೌಡರು, ನಿಖಿಲ್, ಹರೀಶ್‍ಗೌಡರಿಗೆ ಜೈಕಾರ, ಹರ್ಷೋದ್ಘಾರ ಕಾರ್ಯಕ್ರಮದ ಕೊನೆವರೆಗೂ ಮಾರ್ಧ ನಿಸಿತು. ಕಣ್ಣು ಹಾಯಿಸಿದಲ್ಲೆಲ್ಲಾ ಜೆಡಿಎಸ್ ಬಾವುಟಗಳು ರಾರಾಜಿಸುತ್ತಿದ್ದವು.
ಯುವ ನಾಯಕರ ಜನ್ಮದಿನೋತ್ಸವ ವಾಗಿದ್ದರೂ ಬೃಹತ್ ರಾಜಕೀಯ ಸಮಾ ವೇಶದಂತೆ ಕಂಡು ಬಂದಿತು. ಚಾಮುಂ ಡೇಶ್ವರಿ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಒಗ್ಗಟ್ಟಿಗೆ ಸಾಕ್ಷಿಯಾಗಿತ್ತು.

ಆರೋಪಕ್ಕೆ ಇದೇ ಉತ್ತರ: ಕಾರ್ಯಕ್ರಮದಲ್ಲಿ ಶಾಸಕ ಜಿ.ಟಿ.ದೇವೇಗೌಡರು ಮಾತನಾಡಿ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಸುಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ನನ್ನ ಪುತ್ರ ಜಿ.ಡಿ.ಹರೀಶ್‍ಗೌಡರ ಹುಟ್ಟುಹಬ್ಬ ಆಚರಣೆಯಲ್ಲಿ ಭಾಗಿಯಾಗಲೆಂದು ಬೆಳಗ್ಗೆಯಿಂದಲೇ ನೀವೆಲ್ಲಾ ನೆರೆದ್ದೀರಿ. ನೀವೆಲ್ಲಾ ಯಾವ ಕ್ಷೇತ್ರದ ವರು, ಚಾಮುಂಡೇಶ್ವರಿ ಕ್ಷೇತ್ರದವರು ದಯಮಾಡಿ ಕೈಯೆತ್ತಿ ಎಂದಾಗ ನೆರೆದಿದ್ದವರೆಲ್ಲಾ ಕೈ ಮೇಲೆತ್ತಿದರು. ಕಾರ್ಯಕರ್ತರ ಹಷೋದ್ಘಾರದ ನಡುವೆ ಜಿಟಿಡಿ `ಹೋ.. ಹೋ… ಯಾರೋ ಕೇಳಿದ್ದರಲ್ಲಪ್ಪ, ಇಲ್ಲಿ ನೋಡಿ. ನಾವು ಪ್ರೀತಿ ಮಾಡೋದೇ ತಪ್ಪಾ, ಎಲ್ಲರನ್ನೂ ನಂಬುವುದೇ ತಪ್ಪಾ. ಇಂದು ಇಡೀ ಇಡೀ ದೇಶಕ್ಕೆ ಚಾಮುಂಡೇಶ್ವರಿ ಕ್ಷೇತ್ರದ ಜನರ ಶಕ್ತಿ ಗೊತ್ತಾಗಿದೆ. ಕ್ಷೇತ್ರದ ಎಲ್ಲಾ ಕಡೆಯಿಂದ ತಾಯಂದಿರು, ಹಿರಿಯರು, ಸಹೋದರರು, ಯುವಕರು ಸೇರಿದಂತೆ ಒಂದು ಲಕ್ಷಕ್ಕೂ ಅಧಿಕ ಜನ ಬಂದಿದ್ದೀರಿ. ನಾವು ಯಾರ ವಿರುದ್ಧವೂ ಮಾತನಾಡಿಲ್ಲ, ಮೌನವಾಗಿದ್ದೇವೆ. ಆರೋಪ ಮಾಡಿದವರಿಗೆ ಇದೊಂದೇ ಉತ್ತರ’ ಎಂದು ನಯವಾಗಿಯೇ ತಮ್ಮ ವಿರೋಧಿಗಳಿಗೆ ಟಾಂಗ್ ನೀಡಿದರು.

ಜನರೇ ಹೇಳುತ್ತಾರೆ: ಜಿ.ಟಿ.ದೇವೇಗೌಡ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಶಾಸಕನಾದ ನಂತರ ಇಲ್ಲಿನ ಹಳ್ಳಿಗಳ ಅಭಿವೃದ್ಧಿ ಆಗಿದೆಯೋ ಅಥವಾ ಅದಕ್ಕಿಂತ ಹಿಂದೆಯೇ ಆಗಿತ್ತೋ ಎನ್ನುವುದನ್ನು ಜನರೇ ಹೇಳುತ್ತಾರೆ. ಪ್ರತಿ ಗ್ರಾಮಗಳಿಗೆ ಬೀದಿದೀಪ, ಚರಂಡಿ, ರಸ್ತೆ, ಕುಡಿಯುವ ನೀರು ಸೇರಿದಂತೆ ಎಲ್ಲಾ ಸೌಕರ್ಯಗಳು, ಕೆರೆಗಳಿಗೆ ನೀರು ತುಂಬಿಸುವುದು, ಉಂಡುವಾಡಿ, ಮೇಳಾಪುರ, ಕಬಿನಿ ಕುಡಿಯುವ ನೀರು ಯೋಜನೆ, ಹೊಸ ನಾಲ್ಕು ಪಟ್ಟಣ ಪಂಚಾಯ್ತಿ, ಒಂದು ನಗರ ಸಭೆ ಸ್ಥಾಪನೆ, ಹೀಗೆ ಅಭಿವೃದ್ಧಿ ಕಾರ್ಯಗಳಲ್ಲಿ ಚಾಮುಂಡೇಶ್ವರಿ ಕ್ಷೇತ್ರ ದಾಖಲೆ ಮಾಡಿದೆ. ಕೊರೊನಾ ಸಂದರ್ಭದಲ್ಲಿ ಜಿಟಿಡಿ ಏನು ಮಾಡಿದರೆಂದು ಕೆಲವರು ಪ್ರಶ್ನಿಸಿದರು. ಆ ವೇಳೆ ಪಂಚಾಯ್ತಿ ಅಧಿಕಾರಿ ಗಳ ಮೂಲಕ ಮನೆ ಮನೆಗೆ ಅಗತ್ಯ ವಸ್ತು ತಲುಪಿಸಿದ್ದು ಸರ್ಕಾರವಲ್ಲ. ಜಿ.ಟಿ.ದೇವೇ ಗೌಡ ಹಾಗೂ ಹರೀಶ್‍ಗೌಡ ಸ್ವಂತ ಹಣದಿಂದ ನೀಡಿದ್ದು. ಆದರೂ ಕೆಲವರು ಆರೋಪ ಮಾಡುತ್ತಾರೆ. ಆದರೆ ಕ್ಷೇತ್ರದ ಜನ ಅವರ ಮಾತುಗಳನ್ನು ನಂಬುವುದಿಲ್ಲ. ತಮ್ಮ ಶಕ್ತಿ ಬಗ್ಗೆ ಪ್ರಶ್ನಿಸಿದ್ದನ್ನು ಸವಾಲಾಗಿ ಸ್ವೀಕರಿಸಿ ಜನರೇ ಉತ್ತರ ನೀಡಿದ್ದಾರೆ. ನಮಗೆ ನಾವೇ ಸಾಟಿ ಎನ್ನುವುದನ್ನು ಮತ್ತೆ ನಿರೂಪಿಸಿದ್ದೀರಿ ಎಂದು ಕೃತಜ್ಞತೆ ಸಲ್ಲಿಸಿದರು.

ಪಕ್ಷಕ್ಕಾಗಿ, ನಮಗಾಗಿ ಬಂದಿದ್ದೀರಿ: ರೋಡ್ ಶೋನಲ್ಲಿ ಆಗಮಿಸಿದ ನಿಖಿಲ್ ಹಾಗೂ ಹರೀಶ್‍ಗೌಡರನ್ನು ನಾಗನಹಳ್ಳಿ, ಸಿದ್ದಲಿಂಗಪುರ, ಕೆ.ಆರ್‍ಮಿಲ್ ಕಾಲೋನಿ, ಹಿನಕಲ್, ಬೋಗಾದಿ, ಶ್ರೀರಾಂಪುರ, ಕೋಟೆಹುಂಡಿ, ಗೋಪಾಲಪುರ, ಸಾಲುಂಡಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಸಂಭ್ರಮದಿಂದ ಸ್ವಾಗತಿಸಿದ್ದಾರೆ. ಕ್ರೇನ್ ಮೂಲಕ ನೂರಾರು ರೀತಿಯ ಬೃಹತ್ ಹಾರ ಹಾಕುವ ಮೂಲಕ ಸಂಭ್ರಮಿಸಿದ್ದಾರೆ. ಕ್ಷೇತ್ರದ ಮೂಲೆ ಮೂಲೆಗಳಿಂ ದಲೂ ಕಾರ್ಯಕರ್ತರು ಕಾರ್ಯಕ್ರಮಕ್ಕೆ ಆಗಮಿಸಿದ್ದೀರಿ. ಹಣದಿಂದಲೇ ಚುನಾವಣೆಗಳನ್ನು ಗೆಲ್ಲುತ್ತೇವೆ ಎನ್ನುವ ಭಾವನೆವುಳ್ಳವರಿಗೆ ಸರಿಯಾದ ಪ್ರತಿಕ್ರಿಯೆ ನೀಡಿದ್ದೀರಿ. ವರಿಷ್ಠರಾದ ಹೆಚ್.ಡಿ.ದೇವೇಗೌಡರು, ಕುಮಾರಸ್ವಾಮಿ, ಜಿಟಿಡಿ, ಹರೀಶ್‍ಗೌಡ, ನಿಖಿಲ್‍ಗಾಗಿ, ಜೆಡಿಎಸ್ ಪಕ್ಷಕ್ಕಾಗಿ ನೀವೆಲ್ಲಾ ಸೇರಿದ್ದೀರಿ. ನಿಮಗೆ ಅನಂತ ಧನ್ಯವಾದಗಳು ಎಂದು ಹೇಳಿದರು.

ಆಶೀರ್ವದಿಸಿ: ತಾಯಿ ಚಾಮುಂಡೇಶ್ವರಿ ಹಾಗೂ ಉತ್ತನಹಳ್ಳಿ ಅಮ್ಮನ ಸನ್ನಿಧಿಯಲ್ಲಿ ಹೆಚ್.ಡಿ.ದೇವೇಗೌಡರು ಕುಟುಂಬ ಸಮೇತ ಪೂಜೆ ಸಲ್ಲಿಸಿ, 2018ರಲ್ಲಿ `ಕುಮಾರ ಪರ್ವ’ ಯಾತ್ರೆಗೆ ಚಾಲನೆ ನೀಡಿದ್ದರು. ಆ ಅವಧಿಯಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದರು. ಅವರು ಮೊದಲ ಬಾರಿ ಸಿಎಂ ಆಗುವ ಪೂರ್ವದಲ್ಲೂ ನಾನು ಕಲಾಮಂದಿರದಲ್ಲಿ ಆಶಿಸಿದ್ದೆ. ಮುಂದಿನ ಮಾರ್ಚ್‍ನಲ್ಲಿ `ಪಂಚರತ್ನ’ ಯಾತ್ರೆ ಆರಂಭವಾಗುತ್ತದೆ. ಎರಡು ಬಾರಿ ಸಿಎಂ ಆಗಲು ಕುಮಾರಸ್ವಾಮಿಗೆ ಹರಸಿದ ನೀವು, ಮೂರನೇ ಬಾರಿ ಸಿಎಂ ಆಗಲು ಆಶೀರ್ವದಿಸಬೇಕು. ಈ ನಿಟ್ಟಿನಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಜೊತೆಗೆ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಬೇಕೆಂದು ಮನವಿ ಮಾಡಿದರು.

ನಿಮ್ಮ ಮತ ವಜ್ರದ ಹಾರವಿದ್ದಂತೆ: ಚಾಮುಂಡೇಶ್ವರಿ ಕ್ಷೇತ್ರದ ಜನ ನನಗೆ ನೀಡುವ ಪ್ರತಿಯೊಂದು ಅತ್ಯಮೂಲ್ಯ ಮತವೂ ಕುಮಾರಸ್ವಾಮಿ ಅವರಿಗೆ ನೀಡಿದಂತೆ. ಶಾಸಕರಾಗಿ, ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿದ್ದ 91 ವರ್ಷದ ಹೆಚ್.ಡಿ.ದೇವೇಗೌಡರು, ರೈತರು, ಮಹಿಳೆಯರು, ಹಿಂದುಳಿದವರು, ದಲಿತರು, ನೊಂದವರ ಪರವಾಗಿ ಕೆಲಸ ಮಾಡಿದ್ದಾರೆ. ರಾಜ್ಯದ ನೀರಾವರಿ ಯೋಜನೆಗಳಿಗೆ ನಿರಂತರ ಹೋರಾಟ ಮಾಡಿದ್ದಾರೆ. ನಿಮ್ಮ ಒಂದೊಂದು ಮತವೂ ಹೆಚ್.ಡಿ.ದೇವೇಗೌಡರ ಕೊರಳಿಗೆ ಹಾಕುವ ವಜ್ರದ ಹಾರ ಇದ್ದಂತೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ತರಲು ನೀವು ತೀರ್ಮಾನಿಸಿದ್ದೀರಿ ಎನ್ನುವುದು ನನ್ನ ಅಚಲ ವಿಶ್ವಾಸ ಎಂದು ನುಡಿದರು.

Translate »