ಮೈಸೂರು, ಆ.11(ಪಿಎಂ)- ಲಾಕ್‍ಡೌನ್ ಅವಧಿಯ ಗೌರವಧನ ಪಾವತಿ ಮಾಡಬೇಕೆಂಬುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿಯ ಜಿಲ್ಲಾ ಸಮಿತಿ ಆಶ್ರಯದಲ್ಲಿ ಅತಿಥಿ ಉಪ ನ್ಯಾಸಕರು ಮಂಗಳವಾರ ಪ್ರತಿಭಟನೆ ನಡೆಸಿದರು.
ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ನೆರೆದ ಪ್ರತಿ ಭಟನಾಕಾರರು, ರಾಜ್ಯದ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 14,564 ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದು, ಕೇವಲ 11ರಿಂದ 13 ಸಾವಿರ ರೂ. ಮಾಸಿಕ ಗೌರವಧನ ನೀಡುವ ಮೂಲಕ ಸರ್ಕಾರ ನಮ್ಮನ್ನು ಭಿಕ್ಷುಕರಂತೆ ನಡೆಸಿಕೊಳ್ಳುತ್ತಿದೆ. ಈಗ ಲಾಕ್‍ಡೌನ್ ಅವಧಿಯ ವೇತನ ನೀಡಿಲ್ಲ, ಉದ್ಯೋಗವೂ ಕೈತಪ್ಪಿ ತೀವ್ರ ಕಷ್ಟದಲ್ಲಿದ್ದೇವೆ ಎಂದು ಅಳಲು ತೋಡಿಕೊಂಡರು. ನಮ್ಮ ಸಂಕಷ್ಟವನ್ನು ಸರ್ಕಾರದ ಗಮನಕ್ಕೆ ತರಲೆಂದೇ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿ ಮಂಗಳವಾರ ಪ್ರತಿಭಟನೆ ನಡೆಸುತ್ತಿದ್ದೇವೆ. ಇಂದು ಮೈಸೂರಿನಲ್ಲೂ 6ನೇ ಮಂಗಳವಾರ ಪ್ರತಿಭಟನೆ ನಡೆಸಿದ್ದೇವೆ ಎಂದರು.
ಸಹಾಯಕ ಪ್ರಾಧ್ಯಾಪಕರ ನೇಮಕ ಅಧಿಸೂಚನೆ ರದ್ದು ಗೊಳಿಸಿ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಕಲ್ಪಿಸಲು ಸೇವೆಯಲ್ಲಿ ವಿಲೀನಗೊಳಿಸಬೇಕು. ಗುತ್ತಿಗೆ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದ ವೈದ್ಯಕೀಯ ಸಿಬ್ಬಂದಿಯನ್ನು ನೇಮಕ ಮಾಡಿದಂತೆ ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡಿ ಕೊಳ್ಳಲು ಶೀಘ್ರವೇ ಕ್ರಮ ವಹಿಸಬೇಕು ಎಂದು ಒತ್ತಾಯಿ ಸಿದರು. ಪಿಎಫ್ ಹಾಗೂ ವೈದ್ಯಕೀಯ ಸೌಲಭ್ಯ ಒದಗಿಸ ಬೇಕು. ಆತ್ಮಹತ್ಯೆ ಮಾಡಿಕೊಂಡ ಹಾಗೂ ಅನಾ ರೋಗ್ಯದಿಂದ ಮೃತಪಟ್ಟ ಅತಿಥಿ ಉಪನ್ಯಾಸಕರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡ ಬೇಕು. ಸರ್ಕಾರ ಸ್ಪಂದಿಸದಿದ್ದರೆ ಆ.15ರ ಸ್ವಾತಂತ್ರ್ಯ ದಿನ ಉಪವಾಸ ಮಾಡುತ್ತೇವೆ ಎಂದು ಎಚ್ಚರಿಸಿದರು.
ಕೆಟಿಶ್ರೀ ಬೆಂಬಲ: ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಪ್ರತಿಭಟನೆಯಲ್ಲಿ ಪಾಲ್ಗೊಂಡು ಹೋರಾ ಟಕ್ಕೆ ಬೆಂಬಲ ಸೂಚಿಸಿದರು. ಸಂಘಟನೆಯ ಜಿಲ್ಲಾ ಸಮಿತಿ ಉಪಾಧ್ಯಕ್ಷ ಎನ್.ಮಹೇಶ್, ಪ್ರಧಾನ ಕಾರ್ಯ ದರ್ಶಿ ಹನುಮಂತೇಶ್, ಅತಿಥಿ ಉಪನ್ಯಾಸಕರಾದ ರಾಮಣ್ಣ, ಅನಂತಕುಮಾರ್ ಮತ್ತಿತರರು ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದರು.