ಮೈಸೂರು, ಆ.11(ಆರ್‍ಕೆಬಿ)- ಪ್ರಧಾನಿ ನರೇಂದ್ರ ಮೋದಿ ಅವರು ಈವರೆಗೆ ಮೀಸ ಲಾತಿ ಸೌಲಭ್ಯ ಪಡೆಯದ, ಆರ್ಥಿಕವಾಗಿ ಹಿಂದುಳಿದ 144 ಜಾತಿಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.10ರಷ್ಟು ಮೀಸಲು ಇರು ವಂತೆ ಅವಕಾಶ ಕಲ್ಪಿಸಿದ್ದಾರೆ. ಲೋಕಸಭೆ, ರಾಜ್ಯಸಭೆಯಲ್ಲಿ ಇದಕ್ಕೆ ಅನುಮೋದನೆ ಪಡೆದಿದ್ದು, ಹೊಸ ನೀತಿ ಈಗಾಗಲೇ ಉತ್ತರ ಪ್ರದೇಶ, ಮಧ್ಯಪ್ರದೇಶ, ಜಾರ್ಖಂಡ್ ರಾಜ್ಯ ಗಳಲ್ಲಿ ಜಾರಿಗೊಂಡಿದೆ. ಆದರೆ ಕರ್ನಾ ಟಕದಲ್ಲಿನ್ನೂ ಜಾರಿಯಾಗಿಲ್ಲ. ಈಗಾಗಲೇ ತಯಾರಾಗಿರುವ ಕರಡನ್ನು ಸಚಿವ ಸಂಪುಟ ದಲ್ಲಿ ಮಂಡಿಸಿ ಶೀಘ್ರ ಜಾರಿಗೊಳಿಸು ವಂತೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿ ವೃದ್ಧಿ ಮಂಡಳಿ ಒತ್ತಾಯಿಸಿದೆ.
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕರಾದ ಎಂ.ಆರ್.ಬಾಲ ಕೃಷ್ಣ ಮತ್ತು ಸಿ.ವಿ.ಗೋಪಿನಾಥ್ ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ, ಇತ್ತೀಚೆಗೆ ನಡೆದ ಆಡಳಿತ ಮಂಡಳಿಯ ಮೊದಲ ಸಭೆಯಲ್ಲಿ ಅನೇಕ ಯೋಜನೆ ಗಳ ಬಗ್ಗೆ ಚರ್ಚಿಸಿ, ಆರ್ಥಿಕವಾಗಿ ಹಿಂದು ಳಿದಿರುವ ಬ್ರಾಹ್ಮಣ ಸಮುದಾಯಕ್ಕೆ ಸೌಲಭ್ಯ ತಲುಪಿಸುವ ಕಾರ್ಯತಂತ್ರದ ಬಗ್ಗೆ ಚರ್ಚಿಸಲಾಯಿತು ಎಂದರು.
ಸಾಂದೀಪನೀ ಶಿಷ್ಯ ವೇತನ, ಆಚಾರ್ಯತ್ರಯರ ವೇದ ಶಿಷ್ಯವೇತನ, ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ, ಚಾಣಕ್ಯ ಆಡಳಿತ ತರಬೇತಿ ಯೋಜನೆ, ಸನ್ನಿಧಿ ಯೋಜನೆ, ಸರ್ ಎಂ.ವಿಶ್ವೇಶ್ವರಯ್ಯ ಕೌಶ ಲಾಭಿವೃದ್ಧಿ ಯೋಜನೆ, ಪುರುಷೋತ್ತಮ ಯೋಜನೆ, ಅನ್ನದಾತ, ಸೌಖ್ಯ, ಕಲ್ಯಾಣ, ಚೈತನ್ಯ ಯೋಜನೆಗಳನ್ನು ಫಲಾನುಭವಿ ಗಳಿಗೆ ಹಂತ ಹಂತವಾಗಿ ತಲುಪಿಸಲು ತೀರ್ಮಾನಿಸಲಾಗಿದೆ ಎಂದರು.
ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ದಂತೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ಇಚ್ಛಿಸುವವರು ಆಧಾರ್ ಕಾರ್ಡ್ ಹಾಗೂ ಟಿಸಿಯನ್ನು ದಾಖಲೆಯಾಗಿ ನೀಡಬೇಕು. ರೂ.20 ಬಾಂಡ್ ಪೇಪರ್ ಮೇಲೆ ಎಲ್ಲಾ ಮೂಲಗಳಿಂದ ಬರುವ ತಮ್ಮ ವಾರ್ಷಿಕ ಆದಾಯ ದೃಢಪಡಿಸಬೇಕು. ತಾಲೂಕು ಅಥವಾ ನಾಡ ಕಚೇರಿ ಅಥವಾ ಅಟಲ್ ಸ್ನೇಹ ಕೇಂದ್ರದಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ, ಪ್ರಮಾಣಪತ್ರ ಪಡೆಯುವಂತೆ ಸಮುದಾಯದವರಲ್ಲಿ ಮನವಿ ಮಾಡಿದರು. ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಅಖಿಲ ಭಾರತೀಯ ಬ್ರಾಹ್ಮಣ ಮಹಾಸಭಾ ಮೈಸೂರು ಘಟಕ ಅಧ್ಯಕ್ಷ ವೆಂಕಟೇಶ್ ಪದಕಿ ಸುದ್ದಿಗೋಷ್ಠಿಯಲ್ಲಿದ್ದರು.