ಗುಜರಾತ್ ಫಲಿತಾಂಶ ಕರ್ನಾಟಕದ ಮೇಲೂ ಪರಿಣಾಮ ಬೀರಲಿದೆ…
News

ಗುಜರಾತ್ ಫಲಿತಾಂಶ ಕರ್ನಾಟಕದ ಮೇಲೂ ಪರಿಣಾಮ ಬೀರಲಿದೆ…

December 7, 2022

ಬೆಂಗಳೂರು, ಡಿ. 6(ಕೆಎಂಶಿ)- ಗುಜರಾತ್ ಚುನಾವಣೋ ತ್ತರ ಸಮೀಕ್ಷೆಯಲ್ಲಿ ಬಿಜೆಪಿಗೆ ಬಹುಮತ ಬರಲಿದ್ದು, ಕರ್ನಾಟಕದಲ್ಲಿಯೂ ಇದರ ಪರಿಣಾಮ ಬೀರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಾವು ನೂರಕ್ಕೆ ನೂರರಷ್ಟು ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯವುದು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ಮೂರು ವರ್ಷಗಳಲ್ಲಿ ನಾವು ನೀಡಿರುವ ಕಾರ್ಯಕ್ರಮಗಳು ಜನಮನ್ನಣೆಯನ್ನು ಗಳಿಸಿವೆ. ಪ್ರತಿಪಕ್ಷದ ನಾಯಕರ ಸುಳ್ಳುಗಳ ಸರಮಾಲೆ ಜನರ ದಾರಿ ತಪ್ಪಿಸಲು ಸಾಧ್ಯವಾಗಿಲ್ಲ. ಗುಜರಾತ್ ಆಡಳಿತದ ಮೇಲೂ ಆರೋಪಗಳ ಸುರಿಮಳೆಯೇ ನಡೆದಿತ್ತು. ಆದರೆ ಮತದಾರರು ಸತತವಾಗಿ ಬಿಜೆಪಿಯನ್ನು ಅಲ್ಲಿ ಅಧಿಕಾರಕ್ಕೆ ತಂದಿದ್ದಾರೆ. ಅದೇ ಫಲಿತಾಂಶ ಕರ್ನಾಟಕದ ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ಬರಲಿದೆ ಎಂದರು. ಜನ ಇಂದು ಸುಶಾಸನ, ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿ ಸುತ್ತಾರೆ. ಸುಳ್ಳು ಹಾಗೂ ರಾಜಕೀಯ ಪ್ರೇರಿತ ಆರೋಪಗಳಿಗೆ ಬೆಂಬಲವಿಲ್ಲ ಎಂಬುದು ಸ್ಪಷ್ಟವಾಗಿದೆ. ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಜಯಭೇರಿ ಹೊಡೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವಕ್ಕೆ ಇಡೀ ಭಾರತ ಬೆಂಬಲ ನೀಡುತ್ತಿದೆ. ಇದೊಂದು ಸಕಾರಾತ್ಮಕ, ಅಧಿಕಾರದ ಪರ ಮತದಾರರ ತೀರ್ಪು. ಗುಜರಾತ್‍ನಲ್ಲಿ 7ನೇ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದು, ಇದು ನರೇಂದ್ರ ಮೋದಿಯವರ ನಾಯಕತ್ವ, ಆಡಳಿತದಲ್ಲಿ ಜನರ ಪ್ರಬಲವಾದ ನಂಬಿಕೆಯನ್ನು ತೋರುತ್ತಿದೆ ಎಂದರು.

ಮಹಾರಾಷ್ಟ್ರ ಸಚಿವರು ಬಾರದೆ ಇರುವುದಕ್ಕೂ, ಚುನಾವಣೆಗೂ ಸಂಬಂಧವಿಲ್ಲ. ಇದು ಮಹಾರಾಷ್ಟ್ರದವರು ಬಹಳ ವರ್ಷಗಳಿಂದ ವಿವಾದ ಮಾಡಿಕೊಂಡು ಬಂದಿದ್ದಾರೆ. ವಿವಾದದಿಂದ ಎರಡೂ ಕಡೆ ಪ್ರತಿಕ್ರಿಯೆ ಬರುತ್ತದೆ. ಜನರ ಮಧ್ಯೆ ಇರುವ ಸಾಮರಸ್ಯ ಕದಡುವ ಕೆಲಸ ಬೇಡ ಎಂದು ಹೇಳಿದ್ದೇನೆ. ಸುಪ್ರೀಂಕೋರ್ಟ್‍ನಲ್ಲಿ ಪ್ರಕರಣವಿದ್ದು, ನಮ್ಮ ನಡೆ ಸಂವಿಧಾನಬದ್ಧವಾಗಿರುವುದರಿಂದ ಕಾನೂನು ಸಮರದಲ್ಲಿ ಗೆಲ್ಲುವ ವಿಶ್ವಾಸವಿದೆ.

Translate »