ಹಳೆ ವಿದ್ಯಾರ್ಥಿ ಸೋಗಿನಲ್ಲಿ ಶಿಕ್ಷಕಿಯರ ವ್ಯಾನಿಟಿ ಬ್ಯಾಗ್ ಕದ್ದ ಯುವಕ ಕಾವೇರಿ ನದಿಗೆ ಹಾರಿದರೂ ಬೆನ್ನತ್ತಿ ಹಿಡಿದ ಜನ!
ಕೊಡಗು

ಹಳೆ ವಿದ್ಯಾರ್ಥಿ ಸೋಗಿನಲ್ಲಿ ಶಿಕ್ಷಕಿಯರ ವ್ಯಾನಿಟಿ ಬ್ಯಾಗ್ ಕದ್ದ ಯುವಕ ಕಾವೇರಿ ನದಿಗೆ ಹಾರಿದರೂ ಬೆನ್ನತ್ತಿ ಹಿಡಿದ ಜನ!

December 7, 2022

ವಿರಾಜಪೇಟೆ, ಡಿ.6- ಹಳೆ ವಿದ್ಯಾರ್ಥಿ ಸೋಗಿನಲ್ಲಿ ವರ್ಗಾವಣೆ ಪತ್ರ (ಟಿಸಿ) ಕೇಳುವ ನೆಪದಲ್ಲಿ ಶಾಲೆಗೆ ಬಂದು ಶಿಕ್ಷಕಿಯರಿಬ್ಬರ ಹಣ, ಬೆಳ್ಳಿ ಬ್ರೇಸ್‍ಲೇಟ್ ಮತ್ತು ಎಟಿಎಂ ಕಾರ್ಡ್ ಇದ್ದ ವ್ಯಾನಿಟಿ ಬ್ಯಾಗ್ ಕದ್ದು, ಕಾವೇರಿ ನದಿಗೆ ಹಾರಿ ಈಜಿ ಪರಾರಿಯಾಗಲೆತ್ನಿಸಿದರೂ ಬಿಡದೆ ಹಳೆ ಕಳ್ಳನನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಈ ಘಟನೆ ತಾಲೂಕಿನ ಬೇತ್ರಿ ಗ್ರಾಮದ ಬಳಿ ನಡೆದಿದೆ. ಮೂರ್ನಾಡು ವಾಸಿ ಶಿವಕುಮಾರ್ ಹಳೇ ವಿದ್ಯಾರ್ಥಿ ಸೋಗಿನಲ್ಲಿ ಶಿಕ್ಷಕಿಯರ ಬ್ಯಾಗ್ ಕಳ್ಳತನ ಮಾಡಿ, ಪೊಲೀಸರ ಅತಿಥಿಯಾದವನು.

ತಾಲೂಕಿನ ಕಾಕೋಟು ಪರಂಬುವಿನ ಪ್ರಾಥಮಿಕ ಶಾಲೆಯ ಶಿಕ್ಷಕಿ ಮಾಲತಿ ಅವರು ಸೋಮವಾರ(ಡಿ.5) ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಶಾಲೆಯ ಕಚೇರಿಯಲ್ಲಿ ತಮ್ಮ ಸಹೋದ್ಯೋಗಿಗಳಾದ ಕೆ.ವಿ.ಕುಸುಮಾವತಿ, ಶ್ರೀಮತಿ ತಂಗಮ್ಮ ಹಾಗೂ ಶ್ರೀಮತಿ ಕೆ.ಆರ್.ಗ್ರೇಸಿ ಅವ ರೊಂದಿಗೆ ಊಟ ಮಾಡಿ ಕೈ ತೊಳೆಯಲು ಹೋಗುತ್ತಿದ್ದಾಗ ಅಲ್ಲಿಗೆ ಬಂದ ಸುಮಾರು 25 ವರ್ಷದ ಅಪರಿಚಿತ ಯುವಕ ತಾನು ಶಿವಕುಮಾರ್, ಮೂರ್ನಾಡು ವಾಸಿ, ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದು, ಟಿಸಿ ಬೇಕಾಗಿದೆ ಎಂದು ಕೇಳಿದ್ದಾನೆ.

ಆಗ ಮಾಲತಿಯವರು ನೀವು ಹೊರಗಡೆ ಇರಿ. ನಾವು ಕೈತೊಳೆದುಕೊಂಡು ಬರ್ತೀವಿ ಎಂದು ಅತ್ತ ಹೋಗುತ್ತಿದ್ದಂತೆ ಇತ್ತ ಆ ಅಪರಿಚಿತ ಮಾಲತಿ ಮತ್ತು ಗ್ರೇಸಿ ಅವರ ವ್ಯಾನಿಟಿ ಬ್ಯಾಗ್ ಎತ್ತಿಕೊಂಡು ಓಡಿದ್ದಾನೆ. ಇದನ್ನು ಕಂಡ ಮಾಲತಿ ಅವರು ಜೋರಾಗಿ ಕಳ್ಳ.. ಕಳ್ಳ..

ಎಂದು ಕಿರುಚಿಕೊಂಡಿದ್ದಾರೆ. ಅಷ್ಟರಲ್ಲಿ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ವಿಷಯ ತಿಳಿದಿದೆ. ಇತ್ತ ಖದೀಮ ತಾನು ಕದ್ದ ವ್ಯಾನಿಟಿ ಬ್ಯಾಗಿನಲ್ಲಿದ್ದ ಚಿನ್ನದ ಸರ, ಹಣ ಮತ್ತು ಎಟಿಎಂ ಕಾರ್ಡುಗಳನ್ನು ತನ್ನ ಜೇಬಿನಲ್ಲಿಟ್ಟುಕೊಂಡು ಬ್ಯಾಗುಗಳನ್ನು ಬಿಸಾಡಿ, ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಅಡ್ಡಹಾಕಿ ಡ್ರಾಪ್ ಕೇಳಿದ್ದಾನೆ. ಶಾಲೆಯಲ್ಲಿ ಕಳ್ಳತನವಾಗಿರುವ ವಿಷಯ ತಿಳಿದಿದ್ದ ಬೈಕ್ ಸವಾರನಿಗೆ ಈ ಅಪರಿಚಿತನ ಮೇಲೆ ಅನುಮಾನ ಬಂದಿದೆ. ತೋರ್ಪಡಿಸದೆ ಆತನನ್ನು ಬೈಕ್‍ನಲ್ಲಿ ಕೂರಿಸಿಕೊಂಡು ಬೇತ್ರಿ ಗ್ರಾಮದ ಬಳಿ ಬೈಕ್ ನಿಲ್ಲಿಸಿದ್ದಾನೆ. ಅಲ್ಲಿ ಜನರ ಕಂಡು ಭಯದಿಂದ ಆ ಅಪರಿಚಿತ ಬೈಕ್‍ನಿಂದ ಜಂಪ್ ಮಾಡಿ, ಓಡಲಾರಂಭಿಸಿದ್ದಾನೆ. ತಕ್ಷಣ ಅಲ್ಲಿದ್ದ ಕೆಲವರು ಆತನನ್ನು ಹಿಡಿಯಲು ಯತ್ನಿಸಿದ್ದಾರೆ. ಅವರಿಂದ ತಪ್ಪಿಸಿಕೊಳ್ಳಲು ಪಕ್ಕದ ಕಾವೇರಿ ನದಿಗೆ ಹಾರಿ, ಈಜಿ ಮತ್ತೊಂದು ದಡ ಸೇರಲು ಯತ್ನಿಸಿದ್ದಾನೆ. ಆದರೆ ಮತ್ತೊಂದು ದಡದಲ್ಲಿದ್ದವರಿಗೆ ವಿಷಯ ತಿಳಿದಿದ್ದರಿಂದ ಅಪರಿಚಿತ ಈಜಿ ದಡ ಸೇರುತ್ತಿದ್ದಂತೆ ಆತನನ್ನು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಹಳೇ ಕಳ್ಳನಾಗಿದ್ದು, ಸುಮಾರು 6 ಪ್ರಕರಣಗಳ ಆರೋಪಿ ಎಂದು ತಿಳಿದಿದೆ. ಜೈಲು ಸೇರಿದ್ದ ಖದೀಮ ಕಳೆದ 15 ದಿನಗಳ ಹಿಂದೆಯಷ್ಟೇ ಬಿಡುಗಡೆಯಾಗಿದ್ದ. ಆದರೆ ಜೈಲಿಗೆ ಹೋಗಿ ಬಂದರೂ ಬದಲಾಗದೆ ಕಳ್ಳತನ ಚಾಳಿ ಮುಂದುವರೆಸಿ ಸಿಕ್ಕಿಬಿದ್ದಿದ್ದಾನೆ. ಸಾರ್ವಜನಿಕರ ಸಾಹಸದಿಂದ ಆತ ಮತ್ತೆ ಜೈಲು ಸೇರುವಂತಾಗಿದೆ. ಮಡಿಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 3-4 ಪ್ರಕರಣಗಳಲ್ಲಿ ಆತ ಭಾಗಿಯಾಗಿವುದು ವಿಚಾರಣೆಯಲ್ಲಿ ತಿಳಿದುಬಂದಿದೆ.

Translate »