ಶಿವಮೊಗ್ಗ,ಫೆ.20-ನನ್ನ ವಿಚಾರವಾಗಿ ಮಾಡುತ್ತಿರುವ ಧರಣಿಯನ್ನು ಕೈಬಿಟ್ಟು ವಿಧಾನಸಭೆಯಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿ ಸಲು ಬನ್ನಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಕೈ ಮುಗಿದು ಕೇಳುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಇಂದಿಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವುದಾಗಿ ನಾನು ಹೇಳಿದ್ದೇನೆ ಬಗ್ಗೆ ಕಾಂಗ್ರೆಸ್ ತನ್ನ ಅಭಿಪ್ರಾಯವನ್ನು ತಿಳಿಸಿ ಆಗಿದೆ. ಹಾಗಿದ್ದು ವಿಧಾನಸಭೆ ನಡೆಯಲು ಬಿಡದೆ ಧರಣಿ ನಡೆಸುತ್ತಿರುವುದು ಸರಿಯಲ್ಲ. ಈ ಒಂದೇ ವಿಷಯವನ್ನು ಇಟ್ಟುಕೊಂಡು ಚುನಾವಣೆಗೂ ಹೋಗುತ್ತೀರಾ ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದ್ದಾರೆ. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಈ ವಿಷಯ ವನ್ನು ಜನರ ಬಳಿಗೆ ಕೊಂಡೊಯ್ಯುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಆ ಕೆಲಸವನ್ನು ಮಾಡಲಿ. ಆದರೆ, ವಿಧಾನಸಭೆ ನಡೆಯಲು ಬಿಡಿ, ವಿಧಾನ ಸಭೆಯಲ್ಲಿ ಚರ್ಚೆ ಮಾಡಬೇಕಾದ್ದನ್ನು ಅಲ್ಲೇ ಮಾಡಬೇಕು. ಜನರ ಬಳಿಗೆ ಹೋಗ ಬೇಕಾದ ವಿಷಯವನ್ನು ಹೊರಗೆ ಹೋರಾಟದ ಮೂಲಕ ತಿಳಿಸಬೇಕು. ಅದನ್ನು ಬಿಟ್ಟು ಒಂದೇ ವಿಷಯವನ್ನಿಟ್ಟುಕೊಂಡು ಹೀಗೆ ವಿಧಾನಸಭಾ ಕಲಾಪವನ್ನು ವ್ಯರ್ಥ ಮಾಡಬಾರದು. ಒಂದು ವಿಷಯದ ಮೇಲೆ ವಿಧಾನಸಭೆಯಲ್ಲಿ ಹೋರಾಟ ಎಂದರೆ, ಒಂದು ಅಥವಾ ಎರಡು ದಿನ ಮಾಡಬಹುದು. ನಾವು ಹಾಗೇ ಮಾಡಿಯೇ ಅಧಿಕಾರಕ್ಕೆ ಬಂದಿದ್ದೇವೆ. ಒಂದೇ ವಿಷಯದಲ್ಲಿ ಈ ರೀತಿ ಹಠ ಮಾರಿತನದಿಂದ ವಿಧಾನಸಭೆಯಲ್ಲಿ ಹೋರಾಟ ನಡೆಸುವುದನ್ನು ಯಾವ ರಾಜ್ಯದಲ್ಲೂ, ಯಾವ ಪಕ್ಷವೂ ಮಾಡಿಲ್ಲ ಎಂದ ಅವರು, ನಾನು ಡಿ.ಕೆ. ಶಿವಕುಮಾರ್, ಬಿ.ಕೆ. ಹರಿಪ್ರಸಾದ್ ಬಗ್ಗೆ ಮಾತನಾಡುವುದಿಲ್ಲ. ಅವರೂ ನನ್ನ ಸ್ನೇಹಿತರೇ, ಆದರೆ, ಪದೇ ಪದೆ ಹೇಳಿಕೆ ನೀಡಿ ವಿವಾದ ಬೆಳೆಸಲು ನನಗಿಷ್ಟವಿಲ್ಲ. ನಾನೊಂದು ಹೇಳಿಕೆ ಕೊಟ್ಟರೆ ಅವರೊಂದು ಹೇಳಿಕೆ ಕೊಡುತ್ತಾರೆ. ಅದು ಬೆಳೆಯುತ್ತಾ ಹೋಗುತ್ತದೆ. ಆದರೆ, ನನ್ನ ಆತ್ಮೀಯ ಸ್ನೇಹಿತ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಳಿ ಕೈ ಮುಗಿದು ಕೇಳುತ್ತಿದ್ದೇನೆ. ರಾಜ್ಯದ ಅನೇಕ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕಾಗಿದೆ. ನೀವು ಅದರ ಬಗ್ಗೆ ಬೆಳಕು ಚೆಲ್ಲಿ, ನಾವು ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.
ನಾನು ಹೀಗೆ ಹೇಳಿದೆನೆಂದಾಕ್ಷಣ ಹೆದರಿದ್ದೇನೆ ಎಂದು ಅರ್ಥವಲ್ಲ. ರಾಷ್ಟ್ರಧ್ವಜ ನನ್ನ ತಾಯಿ ಸಮಾನ. ಅದಕ್ಕೆ ಯಾರೇ ಅಪಮಾನ ಮಾಡಿದರೂ ಸಹಿಸುವುದಿಲ್ಲ. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದವರು ರಾಷ್ಟ್ರ ದ್ರೋಹಿಗಳು ಎಂಬುದನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಇನ್ನೂ ಯಾವುದೇ ಕಾರಣಕ್ಕೂ ಇದರ ಬಗ್ಗೆ ಚರ್ಚೆ ಮಾಡುವುದಿಲ್ಲ. ನಿಮ್ಮ ರಾಜೀನಾಮೆ ಬೇಡಿಕೆಗೆ ನಾನು ಜಗ್ಗಲ್ಲ-ಬಗ್ಗಲ್ಲ. ಅದನ್ನು ಇಲ್ಲಿಗೇ ಬಿಟ್ಟುಬಿಡಿ ಎಂದು ಮನವಿ ಮಾಡುತ್ತಿದ್ದೇನೆ. ಆದರೂ, ಕಾಂಗ್ರೆಸ್‍ನವರು ಹಠ ಮಾಡಿಕೊಂಡು ಮುಂದುವರೆದರೆ ನಾನೇನೂ ಮಾಡಲು ಸಾಧ್ಯವಿಲ್ಲ. ಉಳಿದದ್ದನ್ನು ರಾಜ್ಯದ ಜನರು ತೀರ್ಮಾನಿಸುತ್ತಾರೆ ಎಂದು ಈಶ್ವರಪ್ಪ ಹೇಳಿದರು.