ಡಾ.ಸುಧಾಮೂರ್ತಿ ಅವರಿಂದ ಹಸ್ತಾಕ್ಷರ ಕಾರ್ಯಕ್ರಮ
ಮೈಸೂರು

ಡಾ.ಸುಧಾಮೂರ್ತಿ ಅವರಿಂದ ಹಸ್ತಾಕ್ಷರ ಕಾರ್ಯಕ್ರಮ

May 16, 2022

ಮೈಸೂರು, ಮೇ ೧೫(ಎಂಕೆ)- ನಗರದ ಫೋರಂ ಸೆಂಟರ್ ಸಿಟಿ ಮಾಲ್‌ನಲ್ಲಿರುವ ಕ್ರಾಸ್‌ವರ್ಲ್ಡ್ ಪುಸ್ತಕ ಮಳಿಗೆಯಲ್ಲಿ ಇನ್ ಫೋಸಿಸ್ ಪ್ರತಿಷ್ಠಾನದ ಮಾಜಿ ಅಧ್ಯಕ್ಷೆ ಮತ್ತು ಕವಯತ್ರಿ ಡಾ.ಸುಧಾಮೂರ್ತಿ ಅವರು ‘ಹಸ್ತಾಕ್ಷರ’ ಕಾರ್ಯಕ್ರಮ ನಡೆಸಿಕೊಟ್ಟರು.

ಈ ವೇಳೆ ಡಾ.ಸುಧಾಮೂರ್ತಿ ಅವರು ತಾವು ಬರೆದ ಪುಸ್ತಕಗಳನ್ನು ಖರೀದಿಸಿದ ನೂರಾರು ಮಂದಿ ಓದುಗರು, ವಿದ್ಯಾರ್ಥಿ ಗಳೊಂದಿಗೆ ಫೋಟೊ ತೆಗೆಸಿಕೊಂಡರಲ್ಲದೆ, ಪುಸ್ತಕಗಳಿಗೆ ಸಹಿ ಹಾಕಿ ಹೆಚ್ಚೆಚ್ಚು ಪುಸ್ತಕ ಓದುವಂತೆ ಪ್ರೋತ್ಸಾಹಿಸಿದರು. ಬಳಿಕ ‘ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ವಿದ್ಯಾರ್ಥಿಗಳು, ಮಕ್ಕಳು ಮೊಬೈಲ್ ಬಿಟ್ಟು ಪುಸ್ತಕಗಳನ್ನು ಓದುವಂತಾಗಬೇಕು. ಪುಸ್ತಕಗಳೊಂದಿಗೆ ಹೆಚ್ಚಾಗಿ ಬೆರೆಯ ಬೇಕು. ಕೊರೊನಾ ನಂತರ ಹೊರಗೆ ಬಂದಿದ್ದು, ಓದುಗರೊಂದಿಗೆ ಬೆರೆಯುವ ಉದ್ದೇಶದಿಂದ ‘ಹಸ್ತಾಕ್ಷರ’ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

ದೇಶದೆಲ್ಲೆಡೆ ೩೩ ಲಕ್ಷಕ್ಕೂ ಹೆಚ್ಚು ಇಂಗ್ಲಿಷ್ ಪುಸ್ತಕಗಳೇ ಮಾರಾಟವಾಗಿವೆ. ಪುಸ್ತಕಗಳು ಖರ್ಚಾಗುವುದಕ್ಕಿಂತ ಮಕ್ಕಳು ಓದಬೇಕು. ಪುಸ್ತಕ ಕೊಟ್ಟರೆ ಮಕ್ಕಳು ಓದುತ್ತಾರೆ ಎಂಬುದು ನನ್ನ ಮನಸ್ಸಿನಲ್ಲಿದೆ. ಆದ್ದರಿಂದ ಸಹಿ ಮಾಡಿ ಪುಸ್ತಕಗಳನ್ನು ನೀಡಿ, ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.

ಸಂಭ್ರಮಿಸಿದ ಓದುಗರು, ವಿದ್ಯಾರ್ಥಿ ಗಳು: ನೆಚ್ಚಿನ ಸಾಧಕಿ ಡಾ.ಸುಧಾಮೂರ್ತಿ ಅವರನ್ನು ಕಂಡ ನೂರಾರು ಮಂದಿ ಓದುಗರು, ವಿದ್ಯಾರ್ಥಿಗಳು, ಅಭಿಮಾನಿಗಳು ಪುಸ್ತಕ ಗಳನ್ನು ಖರೀದಿಸಿ ಸಹಿ ಪಡೆದರಲ್ಲದೆ, ಫೋಟೊ ತೆಗೆದು ಕೊಂಡು ಸಂಭ್ರಮಿಸಿ ದರು. ನಿಮ್ಮಂತೆ ಸಾಧಕರಾಗುವ ಆಸೆ, ನಿಮ್ಮ ಇನ್ ಫೋಸಿಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದರಲ್ಲದೆ ಕುಶಲೋಪರಿ ವಿಚಾರಿಸಿದರು.

Translate »