ಬೆಂಗಳೂರು,ಏ.18-ಹೆಚ್.ಡಿ.ಕುಮಾರಸ್ವಾಮಿ ಅವರದ್ದು ದೊಡ್ಡ ಕುಟುಂಬ.. ಆದರೆ ನಿಖಿಲ್ ಮತ್ತು ರೇವತಿ ವಿವಾಹ ಸರಳವಾಗಿ ನಡೆದಿದೆ. ಈ ಬಗ್ಗೆ ಚರ್ಚೆ ಅನಗತ್ಯ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಏ.20ರ ಬಳಿಕ ರಾಜ್ಯದಲ್ಲಿ ಹೇರ ಲಾಗಿರುವ ಲಾಕ್‍ಡೌನ್ ವೇಳೆ ಯಾವೆಲ್ಲಾ ಕ್ಷೇತ್ರದಲ್ಲಿ ವಿನಾಯಿತಿ ನೀಡಬೇಕು ಎಂಬ ವಿಚಾರದ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಸುದ್ದಿಗೋಷ್ಠಿ ಯಲ್ಲಿ ಸಿಎಂ ಯಡಿಯೂರಪ್ಪ ಮಾತನಾಡಿದರು. ಈ ವೇಳೆ ಸುದ್ದಿಗಾರರೊಬ್ಬರು ನಿಖಿಲ್ ಕುಮಾರಸ್ವಾಮಿ-ರೇವತಿ ವಿವಾಹ ವಿಚಾರ ಪ್ರಸ್ತಾಪಿಸಿ ವಿವಾಹದ ವೇಳೆ ಲಾಕ್‍ಡೌನ್ ನಿಯಮ ಉಲ್ಲಂಘನೆ ಕುರಿತು ಪ್ರಶ್ನಿಸಿದ್ದಾರೆ. ಈ ವೇಳೆ ಮಾತನಾಡಿದ ಸಿಎಂ ಯಡಿಯೂರಪ್ಪ, ಕುಮಾರಸ್ವಾಮಿ ಮತ್ತು ದೇವೇಗೌಡರದ್ದು ದೊಡ್ಡ ಕುಟುಂಬ. ಆದರೂ ತುಂಬಾ ಸರಳವಾಗಿ ವಿವಾಹ ನಡೆಸಿದ್ದಾರೆ. ವಿವಾಹದ ವೇಳೆ ಕಾನೂನು ಉಲ್ಲಂಘನೆಯಾಗಿಲ್ಲ. ಕಾನೂನಿನಡಿಯಲ್ಲೇ ವಿವಾಹ ಜರುಗಿದ್ದು, ಈ ಬಗ್ಗೆ ಅನಗತ್ಯ ಚರ್ಚೆ ಬೇಡ. ನೂತನ ವಧು-ವರರಿಗೆ ನಾನು ಶುಭಾಶಯ ಕೋರುತ್ತೇನೆ ಎಂದರು. ಅಂತೆಯೇ ಪಬ್, ಬಾರ್, ಹೋಟೆಲ್, ಮಾಲ್ ಯಾವುದೂ ಇರಲ್ಲ. ವಾಣಿಜ್ಯ ಉದ್ದೇಶದ ಶಾಪ್ ಓಪನ್ ಇರಲ್ಲ. ಅಲ್ಲದೇ ಬಸ್‍ಗಳ ಸಂಚಾರ ಇರಲ್ಲ. ಆದರೆ ಕಂಪನಿಗಳ ಬಸ್‍ಗಳು ಓಡಾಟ ಮಾಡಬಹುದು. ಲಾಕ್‍ಡೌನ್ ಮುಗಿಯುವ ಮೇ 3ರ ತನಕ ರಾಜ್ಯಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದೆ. ಹೀಗಾಗಿ ಮೇ 3ರ ನಂತರ ಮದ್ಯ ಮಾರಾಟಕ್ಕೆ ತೀರ್ಮಾನ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.