ಬೊಮ್ಮಾಯಿ ಸರ್ಕಾರಕ್ಕೆ  ಮತ್ತೆ ತಲೆ ನೋವು
News

ಬೊಮ್ಮಾಯಿ ಸರ್ಕಾರಕ್ಕೆ ಮತ್ತೆ ತಲೆ ನೋವು

April 10, 2022

ಬೆಂಗಳೂರು,ಏ.9(ಕೆಎಂಶಿ)-ಬಿಟ್‍ಕಾಯಿನ್ ಹಗರಣ ಮತ್ತೆ ಪ್ರತಿಧ್ವನಿಸಿದ್ದು, ಬೊಮ್ಮಾಯಿ ನೇತೃತ್ವದ ಸರ್ಕಾರ ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆ ಹೆಚ್ಚಾಗಿದೆ. ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಹಾಗೂ ಇಡಿ ನೀಡಿರುವ ವರದಿಯನ್ನು ಆಧರಿಸಿ, ಅಮೆರಿಕಾ ತನಿಖಾ ಸಂಸ್ಥೆ ಎಫ್‍ಬಿಐ (ಫೆಡರಲ್ ಬ್ಯುರೋ ಆಫ್ ಇನ್ವಿಸ್ಟಿ ಗೇಷನ್) ಇದೀಗ ತನ್ನದೇ ಆದ ಧಾಟಿಯಲ್ಲಿ ತನಿಖೆ ಆರಂ ಭಿಸಿದೆ. ಏಪ್ರಿಲ್ ಮೊದಲ ವಾರದಲ್ಲಿ ಈ ತನಿಖಾ ಸಂಸ್ಥೆ ಅಧಿಕಾರಿಗಳು ದೆಹಲಿಗೆ ಬಂದು ಒಂದಷ್ಟು ಮಾಹಿತಿ ಸಂಗ್ರಹಿಸಿ, ಹಿಂತಿರುಗಿದ್ದಾರೆ.

ಏಪ್ರಿಲ್ 3ನೇ ಇಲ್ಲವೆ 4ನೇ ವಾರದಲ್ಲಿ ಮತ್ತೆ ಬೆಂಗಳೂರಿಗೆ ಧಾವಿಸಿ, ಬಿಟ್ ಕಾಯಿನ್ ಹಗರಣದ ತನಿಖೆ ನಡೆಸುತ್ತಾರೆ ಎಂಬ ಸುದ್ದಿಗಳು ಕೇಳಿ ಬಂದಿವೆ. ಈ ಮಧ್ಯೆ ಕಾಂಗ್ರೆಸ್‍ನ ಎಐಸಿಸಿಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾ ಟಕದ ಕಾಂಗ್ರೆಸ್ ಉಸ್ತುವಾರಿ ರಣದೀಪ್‍ಸಿಂಗ್ ಸುರ್ಜೆವಾಲ ಮತ್ತು ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಕರ್ನಾಟಕ ಬಿಜೆಪಿ ಸರ್ಕಾರದಡಿಯಲ್ಲಿ ನಡೆದ ಭಾರತದ ಅತೀ ದೊಡ್ಡ ಬಿಟ್‍ಕಾಯಿನ್ ಹಗರಣದ ತನಿಖೆ ಮಾಡಲು ಎಫ್‍ಬಿಐ ಭಾರತದಲ್ಲಿ ಇದೆಯೇ ಎಂದು ಪ್ರಶ್ನಿಸಿದ್ದಾರೆ.

ಹಾಗಿದ್ದರೆ, ತನಿಖೆಯ ಹಾಗೂ ರಾಜಕೀಯ ವ್ಯಕ್ತಿಗಳೂ ಸೇರಿದಂತೆ ಶಂಕಿತರ ವಿವರಗಳನ್ನು ಬಿಡುಗಡೆ ಮಾಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಎಷ್ಟು ಬಿಟ್ ಕಾಯಿನ್ ಕದ್ದಿದ್ದಾರೆ ಮತ್ತು ಅವು ಎಷ್ಟು ಮೌಲ್ಯದ್ದು, ರಾಜ್ಯದಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ. ಕದ್ದ ಬಿಟ್‍ಕಾಯಿನ್‍ಗಳನ್ನು ಹ್ಯಾಕರ್ ಶ್ರೀಕೃಷ್ಣನ ವ್ಯಾಲೆಟ್‍ನಿಂದ ವರ್ಗಾಯಿಸ ಲಾಗಿದೆಯೇ ಎಂದು ಕೇಳಿದ್ದಾರೆ. ಹಗರಣದ ಬಯಲಿಗೆ ಅಂದಿನ ಗೃಹ ಸಚಿವರಾಗಿದ್ದ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇತರ ಸಚಿವರ ಜವಾಬ್ದಾರಿ ಏನು ಎಂದೆಲ್ಲ ಪ್ರಶ್ನಿಸಿದ್ದಾರೆ. ಬಿಜೆಪಿ ಸರ್ಕಾರ ಎನ್‍ಐಎ ಹಾಗೂ ಇ.ಡಿ.ಗೆ ಯಾಕೆ ಮಾಹಿತಿ ನೀಡಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಟ್ ಕಾಯಿನ್‍ಗೂ ನನಗೂ ಸಂಬಂಧವಿಲ್ಲ. ನಾನು ಈಗಾಗಲೇ ವಿಧಾನಸಭೆಯಲ್ಲೇ ಸ್ಪಷ್ಟಣೆ ನೀಡಿದ್ದೇನೆ. ಹಗರಣಕ್ಕೆ ಸಂಬಂಧಿಸಿದಂತೆ ದಾಖಲೆಗಳಿದ್ದರೆ, ಬಹಿರಂಗ ಮಾಡಿ, ಅನಗತ್ಯ ಆರೋಪ ಬೇಡ ಎಂದಿದ್ದಾರೆ.

Translate »