ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್
News

ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್

April 10, 2022

ಬೆಂಗಳೂರು,ಏ.9(ಕೆಎಂಶಿ)-ಹದಿನೆಂಟು ವರ್ಷ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕೆಯಾಗಿ ಬೂಸ್ಟರ್ ಡೋಸ್ ನಾಳೆಯಿಂದ ಲಭ್ಯವಾಗಲಿದೆ. ವಯ ಸ್ಕರು 2 ಡೋಸ್ ಪಡೆದು 9 ತಿಂಗಳು ಪೂರ್ಣ ವಾಗಿದ್ದಲ್ಲಿ, ಬೂಸ್ಟರ್ ಡೋಸ್ ಪಡೆಯಬಹುದಾಗಿದೆ.

ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಈ ಬೂಸ್ಟರ್ ಡೋಸ್ ಲಭ್ಯವಾಗಲಿದೆ. ಪ್ರಾಥಮಿಕ ಹಾಗೂ ಸರ್ಕಾರಿ ಆಸ್ಪತ್ರೆ ಗಳಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಈ ಡೋಸ್ ಲಭ್ಯವಾಗುವುದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಕೊರೊನಾ ವಿರುದ್ಧದ ಹೋರಾಟಕ್ಕೆ ಇನ್ನಷ್ಟು ವೇಗ ನೀಡಲು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಇಂತಹ ಕ್ರಮ ಕೈಗೊಂಡಿದ್ದು, ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಈ ಡೋಸ್ ನೀಡಲಾಗುವುದು. ಪ್ರಧಾನಿ ನರೇಂದ್ರ ಮೋದಿ ಸರ್ಕಾರ, ರೋಗ ಪೂರ್ವ ನಿಯಂತ್ರಣ ಕ್ರಮಗಳಿಗೆ ಹೆಚ್ಚು ಒತ್ತು ನೀಡಿದೆ. ಇದೇ ರೀತಿ ಕೋವಿಡ್ ಲಸಿಕಾಕರಣಕ್ಕೂ ವೇಗ ನೀಡಿದ್ದು, ದೇಶದಲ್ಲಿ ಈವರೆಗೆ 185 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದ ನಮ್ಮ ಸರ್ಕಾರ ಲಸಿಕಾಕರಣವನ್ನು ಚುರುಕುಗೊಳಿಸಿರುವುದರಿಂದ, ಈವರೆಗೆ 10.47 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಇದರ ಜೊತೆಗೆ, ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು, 60+ ವಯಸ್ಸಿನ ನಾಗರಿಕರಿಗೆ ಮುನ್ನೆಚ್ಚರಿಕೆ ಡೋಸ್ ನೀಡಲಾಗುತ್ತಿದೆ ಎಂದು ಸಚಿವರು ವಿವರಿಸಿದ್ದಾರೆ. ರಾಜ್ಯದಲ್ಲಿ ಈವರೆಗೆ, 12-14 ವಯೋಮಾನದವರಿಗೆ 13,27,985 ಮೊದಲ ಡೋಸ್ (65.6%), 15-17 ವಯೋಮಾನದವರಿಗೆ 25,09, 276 ಮೊದಲ ಡೋಸ್ (79%) ಹಾಗೂ 20,48,576 ಎರಡನೇ ಡೋಸ್ (64.5%) ನೀಡಲಾಗಿದೆ. ಈವರೆಗೆ 15+ ವಯೋಮಾನದವರಿಗೆ 5,23,05,424 ಮೊದಲ ಡೋಸ್ (100.4%) ಹಾಗೂ 4,97,08,909 ಎರಡನೇ ಡೋಸ್ (95.4%) ನೀಡಲಾಗಿದೆ. 18+ ವಯೋಮಾನದವರಿಗೆ 4,97,96,148 ಮೊದಲ ಡೋಸ್ (101.8%) ಹಾಗೂ 4,76,60,333 ಎರಡನೇ ಡೋಸ್ (97.4%) ನೀಡಲಾಗಿದೆ. ಈವರೆಗೆ 14,24,433 (57.6%) ಮುನ್ನೆಚ್ಚರಿಕೆ ಲಸಿಕೆ ಡೋಸ್ ನೀಡಲಾಗಿದೆ. ಈ ಮೂಲಕ ರಾಜ್ಯವು ಲಸಿಕಾ ಕರಣದಲ್ಲಿ ಶ್ಲಾಘನೀಯ ಪ್ರಗತಿ ಸಾಧಿಸುತ್ತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಕೇಂದ್ರ ಸರ್ಕಾರ ಮಾಡಿಕೊಟ್ಟ ಈ ಅವಕಾಶವನ್ನು ಎಲ್ಲರೂ ತಪ್ಪದೇ ಬಳಸಿಕೊಂಡು ಮುನ್ನೆಚ್ಚರಿಕೆ ಲಸಿಕೆ ಪಡೆಯಬೇಕು. ಎರಡು ಡೋಸ್‍ಗಳಂತೆ ಮುನ್ನೆಚ್ಚರಿಕೆ ಡೋಸ್ ಕೂಡ ಅಗತ್ಯ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು. ಜೊತೆಗೆ ಕೋವಿಡ್ ಸುರಕ್ಷತಾ ಕ್ರಮಗಳನ್ನೂ ಪಾಲಿಸಬೇಕು ಎಂದು ಸಚಿವರು ಕೋರಿದ್ದಾರೆ.

Translate »