ಮನೆ ಮನೆಗೆ ಗಂಗೆ
News

ಮನೆ ಮನೆಗೆ ಗಂಗೆ

April 10, 2022

ಬೆಂಗಳೂರು,ಏ.9(ಕೆಎಂಶಿ)-ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನವೇ ಗ್ರಾಮೀಣ ಭಾಗದ ಎಲ್ಲ ಮನೆ ಗಳಿಗೂ ನಲ್ಲಿ ನೀರು ಪೂರೈಸಲಾಗುವುದು ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 97 ಲಕ್ಷ ಮನೆಗಳಿಗೆ ಮನೆಮನೆಗೆ ಗಂಗೆ ಯೋಜನೆಯಡಿಯಲ್ಲಿ ನೀರು ಸರಬರಾಜು ಮಾಡಲಾಗುವುದು ಎಂದರು. ಮನೆ ಮನೆಗೆ ನಲ್ಲಿ ನೀರು ನೀಡುವ ಕೆಲಸ ವೇಗವಾಗಿ ಸಾಗುತ್ತಿದೆ. ರಾಜ್ಯದ ಕಾಮಗಾರಿ ಸಂಬಂಧ ಕೇಂದ್ರ ಸರಕಾರದಿಂದ ಈ ವಿಚಾರದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮನೆ ಮನೆಗೆ ಗಂಗೆ ಯೋಜನೆ 2020 ರಲ್ಲಿ ಆರಂಭವಾಗಿದೆ. 50 ಸಾವಿ ರಕ್ಕೂ ಹೆಚ್ಚು ಗ್ರಾಮಗಳಲ್ಲಿ ಯೋಜ ನೆಗೆ ಚಾಲನೆ ಕೊಟ್ಟಿದ್ದೇವೆ. ಈಗಾ ಗಲೇ 3 ಸಾವಿರ ಗ್ರಾಮಗಳ ಪ್ರತಿ ಮನೆಗೆ ಕೊಳಾಯಿ ಮೂಲಕ ನೀರು ಸರಬರಾಜು ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರ
3,325 ಕೋಟಿ ನೀಡಿದ್ದು, ರಾಜ್ಯ ಸರಕಾರ 2,323 ಕೋಟಿ ಹಣವನ್ನು ಬಿಡುಗಡೆ ಮಾಡಿದೆ. ನೀರು ಪರೀಕ್ಷೆಗೆ 31 ಜಿಲ್ಲೆಗಳ 46 ತಾಲೂಕುಗಳಲ್ಲಿ ಪ್ರಯೋಗ ಶಾಲೆಗಳನ್ನು ನಾವು ಸ್ಥಾಪಿಸಿದ್ದೇವೆ. 18,600 ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಹಾಳಾದ ಘಟಕಗಳನ್ನು ದುರಸ್ತಿ ಮಾಡಿಸಲಾಗಿದೆ. ಈ ಯೋಜನೆ ಆರಂಭಕ್ಕೆ ಮುನ್ನ ರಾಜ್ಯದ ಶೇ. 25 ಮನೆಗಳಿಗೆ ನಳ್ಳಿನೀರಿನ ಸಂಪರ್ಕ ಇತ್ತು. ಇದಾದ ನಂತರ 20,56,650 ಮನೆಗಳಿಗೆ ಹೊಸದಾಗಿ ನೀರಿನ ಸಂಪರ್ಕ ಕೊಡಲಾಗಿದೆ. ಈಗ ಶೇ. 46ರಷ್ಟು ಮನೆಗಳಿಗೆ ಕೊಳಾಯಿ ನೀರಿನ ಸಂಪರ್ಕ ಇದೆ ಎಂದರು.

ಮನ್‍ರೇಗಾ ಮಹಾ ಸಾಧನೆ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ (ಮನ್‍ರೇಗಾ) ಪ್ರಗತಿಯಲ್ಲಿ ದಾಖಲೆ ಸಾಧನೆ ಮಾಡಿದ್ದೇವೆ. 2021-22ರಲ್ಲಿ 13 ಕೋಟಿ ಮಾನವ ದಿನಗಳ ಗುರಿ ಇದ್ದು, ಡಿಸೆಂಬರ್ 2021ರವೇಳೆಗೆ ಆ ಗುರಿ ತಲುಪಲಾಗಿತ್ತು. ಮತ್ತೆ ನಮ್ಮ ಕೋರಿಕೆ ಮೇರೆಗೆ 3 ಕೋಟಿ ಮಾನವ ದಿನಗಳನ್ನು ಕೇಂದ್ರ ಸರಕಾರ ನೀಡಿತು. ಮಾರ್ಚ್ ಅಂತ್ಯಕ್ಕೆ 3.13 ಕೋಟಿ ಮಾನವ ದಿನಗಳನ್ನು ಬಳಸಿಕೊಂಡು ಗುರಿ ಸಾಧನೆಗೆ ದಾಖಲೆ ಮಾಡಿದ್ದೇವೆ. ರಾಜ್ಯದ 32 ಲಕ್ಷ ಕುಟುಂಬಗಳು ಈ ಯೋಜನೆಯಲ್ಲಿ ಭಾಗವಹಿಸುತ್ತಿವೆ ಎಂದು ತಿಳಿಸಿದರು.

ಒಟ್ಟು 3,957.45 ಕೋಟಿ ರೂಪಾಯಿಯನ್ನು ಕೂಲಿ ರೂಪದಲ್ಲಿ ನೀಡುತ್ತಿದ್ದೇವೆ. 8.8 ಲಕ್ಷ ಪರಿಶಿಷ್ಟ ಜಾತಿ-ಪಂಗಡದ ಕುಟುಂಬಗಳು ಈ ಯೋಜನೆಯ ಲಾಭ ಪಡೆದುಕೊಂಡಿವೆ ಎಂದರು. 6.97 ಕೋಟಿ ಮಾನವ ದಿನಗಳನ್ನು ಮಹಿಳೆಯರಿಗೆ ನೀಡಿ ಮಹಿಳಾ ಸ್ವಾವಲಂಬನೆ ಸಾಧಿಸಲಾಗಿದೆ. 22,441 ದಿವ್ಯಾಂಗರು ಈ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ವಿವರಿಸಿದರು.

ಕೇಂದ್ರದ ಜೊತೆ ಮಾತುಕತೆಯ ಬಳಿಕ ಮನ್‍ರೇಗಾಕ್ಕೆ ಕೂಲಿ ಹಣವನ್ನು 289 ರೂಪಾಯಿಯಿಂದ ಈಗ 309ಕ್ಕೆ ಹೆಚ್ಚಿಸಿದ್ದಾರೆ. ಬಾಂಡ್ಲಿ, ಪಿಕಾಸು ತಂದರೆ 10 ರೂಪಾಯಿ ಹೆಚ್ಚು ಕೂಲಿ ಕೊಡುತ್ತಿದ್ದಾರೆ. ಮಹಿಳೆ- ಪುರುಷರಿಗೆ ಸಮಾನವಾಗಿ ಕೂಲಿ ಕೊಡಲಾಗುತ್ತಿದೆ ಎಂದರು. ಹಿಂದೆ ಆರೆಂಟು ತಿಂಗಳ ಕಾಲ ಕೂಲಿ ಹಣ ಸಿಗುತ್ತಿರಲಿಲ್ಲ. ಭ್ರಷ್ಟಾಚಾರವೂ ಸಾಕಷ್ಟು ಆಗುತ್ತಿತ್ತು. ಪಿಡಿಒಗಳು ಕಡಿಮೆ ಕೂಲಿ ಕೊಡುವುದೂ ನಡೆಯುತ್ತಿತ್ತು. ಈಗ ನೇರವಾಗಿ ಕೂಲಿ ಹಣ ಬ್ಯಾಂಕ್ ಖಾತೆಗೇ 15 ದಿನಗಳೊಳಗೆ ಹಾಕಲಾಗುತ್ತಿದೆ ಎಂದು ನುಡಿದರು. ಜಲಧಾರೆ ಯೋಜನೆಯಡಿ ನಾವು ಮುಂಚೂಣಿಯಲ್ಲಿದ್ದೇವೆ ಎಂದರು. ಗ್ರಾಮೀಣ ಪ್ರದೇಶದಲ್ಲಿ ಸಂಪೂರ್ಣ ನೈರ್ಮಲ್ಯ ಸಾಧನೆಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು 2021-22ನೇ ಸಾಲಿಗೆ 2,468 ಕೋಟಿ ರೂಪಾಯಿ ಬಿಡುಗಡೆ ಮಾಡಿವೆ. ಇದರಡಿ 2,211 ಕೋಟಿ ವೆಚ್ಚ ಮಾಡಿದ್ದೇವೆ. ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ 12,62,423 ವೈಯಕ್ತಿಕ ಗೃಹ ಶೌಚಾಲಯಗಳು, 1,496 ಸಮುದಾಯ ಶೌಚಾಲಯಗಳು ಹಾಗೂ 3,982 ಘನ- ದ್ರವ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ನಾವು ಸ್ಥಾಪಿಸಿದ್ದೇವೆ ಎಂದು ತಿಳಿಸಿದರು.

Translate »