ಮಹಾರಾಜ ಪಿಯು ಕಾಲೇಜು ಪ್ರಥಮ ಪಿಯು ಪ್ರವೇಶಕ್ಕೆ ಭಾರೀ ಡಿಮ್ಯಾಂಡ್
ಮೈಸೂರು

ಮಹಾರಾಜ ಪಿಯು ಕಾಲೇಜು ಪ್ರಥಮ ಪಿಯು ಪ್ರವೇಶಕ್ಕೆ ಭಾರೀ ಡಿಮ್ಯಾಂಡ್

August 19, 2021

ಮೈಸೂರು,ಆ.18(ಎಂಟಿವೈ)-ಕೋವಿಡ್-19 ಕರಿನೆರಳು ಕಳೆದ ಒಂದೂವರೆ ವರ್ಷದಿಂದ ಶಿಕ್ಷಣ ವ್ಯವಸ್ಥೆಯ ಮೇಲೆ ಬಿದ್ದಿದ್ದು, ಇದೀಗ ಸೋಂಕಿನ ಆತಂಕದ ನಡುವೆಯೂ ಪದವಿ ಹಾಗೂ ಪದವಿ ಪೂರ್ವ ಶಿಕ್ಷಣ ಪ್ರವೇಶಕ್ಕೆ ಮುಗಿ ಬೀಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ.

ಮೈಸೂರಿನ ಪ್ರತಿಷ್ಠಿತ ಕಾಲೇಜು ಮಹಾರಾಜ ಪದವಿ ಪೂರ್ವ ಕಾಲೇಜಲ್ಲಿ ಕಲೆ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಕ್ಕೆ ದಾಖ ಲಾಗಲು ಮೈಸೂರು ಮತ್ತು ಮಂಡ್ಯ ಜಿಲ್ಲೆಯ ವಿವಿಧೆಡೆಯಿಂದ ನೂರಾರು ಮಂದಿ ಅರ್ಜಿ ಸಲ್ಲಿಸಿದ್ದು, ಪ್ರಥಮ ಪಿಯುಸಿ ದಾಖಲಾತಿಗಾಗಿ ವಿದ್ಯಾರ್ಥಿಗಳ ಮೊದಲ ಪಟ್ಟಿ ಪ್ರಕಟಿಸಲಾಗಿದೆ.

ಕಾಲೇಜಲ್ಲಿ ಮೂರು ವಿಭಾಗದಿಂದ 1100 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶವಿದ್ದು, 2965 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಇಂದು ಪ್ರಕಟವಾದ ಮೊದಲ ಪಟ್ಟಿಯಲ್ಲಿ ಶೇ.80ರಿಂದ 96ರಷ್ಟು ಅಂಕ ಪಡೆದ ಸುಮಾರು 800ಕ್ಕೂ ಹೆಚ್ಚು ವಿದ್ಯಾರ್ಥಿಗಳ ಆಯ್ಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳಲು ವಿದ್ಯಾರ್ಥಿಗಳು ಕಾತರದಿಂದ ಕಾದಿದ್ದರು.

ಬೆಳಗ್ಗೆ 11 ಗಂಟೆಗೆ ಮೊದಲ ಲಿಸ್ಟ್ ಪ್ರಕಟವಾಯಿತು. 10 ಗಂಟೆಯಿಂದ ಪೋಷಕರೊಂದಿಗೆ ಕಾಯುತ್ತಿದ್ದ ವಿದ್ಯಾರ್ಥಿಗಳು ಲಿಸ್ಟ್ ನೋಡಲು ಮುಗಿಬಿದ್ದು, ಕೋವಿಡ್-19 ನಿಯಮ ಗಾಳಿಗೆ ತೂರಿದರು. ವಿದ್ಯಾರ್ಥಿಗಳನ್ನು ಸಾಲಾಗಿ, ದೈಹಿಕ ಅಂತರ ಕಾಯ್ದುಕೊಂಡು ಬರುವಂತೆ ನೋಡಿಕೊಳ್ಳಲು ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ಪೋಷಕರು ಕೊರೊನಾ ಸೋಂಕು ಹರಡುವಿಕೆಯ ಆತಂಕ ವ್ಯಕ್ತಪಡಿಸುತ್ತಿದ್ದರು. ಮಧ್ಯಾಹ್ನ 2 ಗಂಟೆವರೆಗೂ ವಿದ್ಯಾರ್ಥಿಗಳ ಗುಂಪು ಹೆಚ್ಚಿತ್ತು.

ಪ್ರತಿಭಾವಂತರಿಗೆ ಮಣೆ: ಸರ್ಕಾರಿ ಶಾಲೆ ಎಂದು ಮೂಗು ಮುರಿಯುವವರ ಸಂಖ್ಯೆ ಹೆಚ್ಚಾಗಿರುವ ಈ ಸಮಯದಲ್ಲಿ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾಗಿರುವ ಮಹಾರಾಜ ಪದವಿ ಪೂರ್ವ ಕಾಲೇಜಿಗೆ ಅರ್ಜಿ ಸಲ್ಲಿಸಿರುವವರಲ್ಲಿ ಬಹುತೇಕ ಮಂದಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಾಗಿದ್ದಾರೆ. ಇಂದು ಪ್ರಕಟವಾದ ಮೊದಲ ಲಿಸ್ಟ್‍ನಲ್ಲಿ ಸ್ಥಾನ ಗಳಿಸಿರುವ ವಿದ್ಯಾರ್ಥಿ ಗಳ ಶೇಕಡಾವಾರು ಅಂಕ ಶೇ.80ಕ್ಕಿಂತ ಹೆಚ್ಚಿರುವುದು ಕಂಡು ಬಂದಿತು. ಯಾವುದೇ ಖಾಸಗಿ ಶಾಲೆಗಳಿಗೂ ಕಡಿಮೆಯಿಲ್ಲದಂತೆ ಸರ್ಕಾರಿ ಶಾಲೆಗಳ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿ ಗಳು ಅಂಕಗಳಿಕೆಯಲ್ಲಿ ಸಾಧನೆ ಮಾಡಿದ್ದು, ಪ್ರವೇಶಾವಕಾಶ ಸಿಕ್ಕಿದ್ದಕ್ಕೆ ಸಂತಸ ವ್ಯಕ್ತಪಡಿಸುತ್ತಿದ್ದ ದೃಶ್ಯ ಕಂಡು ಬಂದಿತು

Translate »