ಮಡಿಕೇರಿಯಲ್ಲಿ ಭಾರೀ ಮಳೆ
ಕೊಡಗು

ಮಡಿಕೇರಿಯಲ್ಲಿ ಭಾರೀ ಮಳೆ

September 2, 2022

ಮಡಿಕೇರಿ,ಸೆ.1- ಗುರುವಾರ ಸಂಜೆ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಏಕಾಏಕಿ ಭಾರೀ ಮಳೆ ಸುರಿದಿದ್ದು, ಅವಾಂತರಗಳನ್ನು ಸೃಷ್ಟಿಸಿದೆ. ವರುಣನ ರೌದ್ರಾವತಾರಕ್ಕೆ ಮಡಿಕೇರಿ ನಗರ ಬೆಚ್ಚಿ ಬಿದ್ದಿದ್ದು, ಹಲವು ಕಡೆಗಳಲ್ಲಿ ಚರಂಡಿ ಹಾಗೂ ರಾಜಕಾಲುವೆಗಳ ನೀರು ಉಕ್ಕಿ ಹರಿದ ಪರಿಣಾಮ ಜನ ವಸತಿ ಪ್ರದೇಶಗಳನ್ನು ಜಲಾವೃತಗೊಳಿಸಿದೆ.

ನಗರದ ಕೈಗಾರಿಕಾ ಬಡಾವಣೆ, ಓಂಕಾ ರೇಶ್ವರ ದೇವಾಲಯ ರಸ್ತೆ, ಪ್ರಕೃತಿ ಬಡಾವಣೆ, ನಿಸರ್ಗ ಬಡಾವಣೆ, ಎಲ್.ಐ.ಸಿ. ಸಮೀಪ, ಜ್ಯೂನಿಯರ್ ಕಾಲೇಜು ರಸ್ತೆ, ಪತ್ರಿಕಾ ಭವನ ರಸ್ತೆಗಳ ಚರಂಡಿಗಳಲ್ಲಿ ಏಕಾಏಕಿ ನೀರು ಉಕ್ಕಿ ಹರಿದು ತಗ್ಗು ಪ್ರದೇಶಗಳ ಮನೆ, ಮಳಿಗೆ ಗಳಿಗೆ ನೀರು ನುಗ್ಗಿ ಆತಂಕ ಸೃಷಿಸಿದೆ.
ಕೃತಕ ಪ್ರವಾಹ ಸೃಷ್ಟಿ: ರಾಜ ಕಾಲುವೆಗಳು ತುಂಬಿ ಹರಿಯುತ್ತಿದ್ದು, ಕಾಲುವೆ ಸಂಪರ್ಕಿ ಸುವ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯಲಾರದೇ ಮನೆಗಳ ಆವರಣಕ್ಕೆ ನೀರು ನುಗ್ಗಿದೆ. ಪರಿಣಾಮ ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾಗಿದ್ದು, ನಗರ ಸಭೆ ವಿರುದ್ದ ಜನಾಕ್ರೋಷ ವ್ಯಕ್ತವಾಗುತ್ತಿದೆ. ನಗರದ ಓಂಕಾರೇಶ್ವರ ದೇವಾಲಯ ರಸ್ತೆ ಸಮುದ್ರದಂತಾಗಿದ್ದು, ಪಾದಚಾರಿಗಳ ಸಂಚಾರ ದುಸ್ಥರವಾಗಿ ಪರಿಣಮಿಸಿದೆ. ಕೆಲವೇ ಗಂಟೆಗಳ ಅವಧಿಗೆ ಸೀಮಿತವಾಗಿ ಸುರಿದ ಮಳೆಗೆ ಈ ಅವಾಂತರಗಳು ಸೃಷ್ಟಿಯಾ ಗಿದ್ದು, ಸಹಜವಾಗಿಯೇ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಅಕ್ಕಿ-ಭತ್ತ ನೀರು ಪಾಲು: ಪತ್ರಿಕಾ ಭವನದ ಬಳಿ ಇರುವ ರೈಸ್ ಮಿಲ್ ಒಂದಕ್ಕೂ ಚರಂಡಿ ನೀರು ನುಗ್ಗಿದ್ದು, ಭತ್ತ, ಅಕ್ಕಿ ಕೊಳಚೆ ನೀರಿ ನಲ್ಲಿ ಕೊಚ್ಚಿ ಹೋಗಿದೆ. ನೂರಾರು ಕ್ವಿಂಟಾಲ್ ಭತ್ತ, ಅಕ್ಕಿ ಮೂಟೆಗಳು ನೀರಿನಲ್ಲಿ ತೋಯ್ದು ಹೋಗಿವೆ. ಮಾತ್ರವಲ್ಲದೇ ಒಣಗಲು ಹರಡಿದ್ದ ಭತ್ತ ನೀರು ಪಾಲಾಗಿದೆ. ಭತ್ತದ ಹೊಟ್ಟು, ಹುಡಿ ಅಕ್ಕಿ, ಮಿಲ್ ಮಾಡಲು ಕೃಷಿಕರು ನೀಡಿದ್ದ ಭತ್ತ, ಖರೀದಿ ಮಾಡಿದ್ದ ಭತ್ತದ ಮೂಟೆಗಳು ನೀರಿನಲ್ಲಿ ಮುಳುಗಿವೆ. ನೀರಿ ನಿಂದ ಮಿಲ್‍ನಲ್ಲಿರುವ ಯಂತ್ರೋಪ ಕರಣಗಳಿಗೂ ಭಾರೀ ಹಾನಿಯಾಗಿದೆ.

ದಿಢೀರ್ ಪ್ರವಾಹದಿಂದಾಗಿ ಲಕ್ಷಾಂತರ ರೂ.ಗಳು ನಷ್ಟವಾಗಿದೆ ಎಂದು ಮಿಲ್ ಮಾಲೀಕರು ಅಳಲು ತೋಡಿಕೊಂಡಿ ದ್ದಾರೆ. ಈ ರೈಸ್‍ಮಿಲ್ ಪಕ್ಕದಲ್ಲೇ ಕಲ್ಯಾಣ ಮಂಟಪಕ್ಕೂ ನೀರು ನುಗ್ಗಿದ್ದರೇ, ಪಕ್ಕದಲ್ಲೇ ಇರುವ ಹೋಲ್‍ಸೇಲ್ ಮದ್ಯ ಮಳಿಗೆ ಒಂದು ಅರ್ಧಭಾಗ ಮುಳುಗಿ ಹೋಗಿದೆ. ಗುರುವಾರ ಯಾವುದೇ ಮದುವೆ ಸಮಾ ರಂಭ ಇಲ್ಲದಿರುವ ಕಾರಣ ಅನಾಹುತ ಒಂದು ತಪ್ಪಿದಂತಾಗಿದೆ. ನಗರದ ಹೊಟೇಲ್ ಒಂದರ ಸ್ಪೈಸಸ್ ಅಂಗಡಿ ಮಳಿಗೆಗೆ ರಾಜ ಕಾಲುವೆಯ ಕೆಸರು ಮಿಶ್ರಿತ ನೀರು ನುಗ್ಗಿ ಅಪಾರ ಹಾನಿಯಾಗಿದೆ.ಬಾಕ್ಸ್: ಆರೆಂಜ್ ಅಲರ್ಟ್: ಕೊಡಗು ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಮಳೆ ಬಿಡುವು ನೀಡಿದ್ದು, ಜಿಲ್ಲೆಯಾದ್ಯಂತ ಮತ್ತೆ ಮಳೆ ಮುಂದುವರೆಯುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗಿನ 8.30ರವರೆಗೆ ಜಿಲ್ಲೆಯಾದ್ಯಂತ “ಆರೆಂಜ್ ಅಲರ್ಟ್” ಘೋಷಣೆ ಮಾಡಲಾಗಿದೆ. ಇದೀಗ ಗುಡುಗು ಸಹಿತ ಮಳೆ ಸುರಿಯುತ್ತಿರುವ ಕಾರಣ ಭಾರೀ ಮಳೆ ಮುಂದುವರೆಯಬಹುದು ಎಂದು ಅಂದಾಜಿಸಲಾಗಿದೆ.

Translate »