ಭಾರೀ ಮಳೆ, ನೆರೆ ಹಿನ್ನೆಲೆ ಆಹಾರ ಉತ್ಪಾದನೆ ಕುಸಿತ ಭೀತಿ
ಮೈಸೂರು

ಭಾರೀ ಮಳೆ, ನೆರೆ ಹಿನ್ನೆಲೆ ಆಹಾರ ಉತ್ಪಾದನೆ ಕುಸಿತ ಭೀತಿ

October 20, 2020

ಬೆಂಗಳೂರು,ಅ.19(ಕೆಎಂಶಿ)- ಕೋವಿಡ್-19 ಭೀತಿಯ ಜೊತೆಗೆ ಆಹಾರ ಉತ್ಪಾ ದನೆಯಲ್ಲಿ ದಾಖಲೆ ನಿರೀಕ್ಷೆ ಹುಸಿಯಾಗು ತ್ತಿದೆ. ರಾಜ್ಯದಲ್ಲಿ ಇತ್ತೀಚೆಗೆ ಬಿದ್ದ ಭಾರೀ ಮಳೆ ಮತ್ತು ನೆರೆಯಿಂದ ಲಕ್ಷಾಂತರ ಹೆಕ್ಟೆರ್ ಭೂಮಿಯಲ್ಲಿ ಬೆಳೆದ ಬೆಳೆಗಳು ಕೊಚ್ಚಿ ಹೋಗಿವೆ ಇಲ್ಲವೇ ನಾಶವಾಗಿವೆ. ಸೋಂಕಿನ ನಡುವೆಯು ಆಹಾರ ಉತ್ಪಾದನೆ ಬಂಪರ್ ಆಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಉತ್ತರ ಕರ್ನಾಟಕ ಭಾಗ ಮತ್ತು ಮಧ್ಯ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಬೀಳುತ್ತಿರುವ ಮಳೆ ಮತ್ತು ನೆರೆಯಿಂದ ಭತ್ತ, ಜೋಳ, ದ್ವಿದಳ ಧಾನ್ಯಗಳು ಹಾಗೂ ಹತ್ತಿ ಭಾರೀ ಪ್ರಮಾಣದಲ್ಲಿ ನಾಶವಾಗಿದೆ. ಮುಂಗಾರು ಮಳೆ ಪ್ರಾರಂಭದಲ್ಲೇ ಕೆಲವು ಜಿಲ್ಲೆಗಳಲ್ಲಿ ಬಿದ್ದ ಭಾರೀ ಮಳೆ ಬೆಳೆ ನಾಶ ಮಾಡಿತ್ತು. ಇದೀಗ ರಾಜ್ಯದಲ್ಲಿ ಬೀಳುತ್ತಿರುವ ಮತ್ತೊಂದು ಮಳೆಯಿಂದ ಕೃಷಿಯ ಮೇಲೆ ದೊಡ್ಡ ಹೊಡೆತ ಕೊಟ್ಟಿದೆ. ಎಷ್ಟು ನಷ್ಟವುಂಟಾಗಿದೆ ಎಂಬುದರ ಬಗ್ಗೆ ಪೂರ್ವ ಸಮೀಕ್ಷೆ ಮಾಡಲು ಜಿಲ್ಲಾಧಿಕಾರಿಗಳಿಂದ ಆಗುತ್ತಿಲ್ಲ. ಆದರೆ 15 ಸಾವಿರಕ್ಕೂ ಹೆಚ್ಚು ಮನೆಗಳು ನಾಶವಾಗಿ 8 ಸಾವಿರಕ್ಕೂ ಹೆಚ್ಚು ಜನರು ಸರ್ಕಾರಿ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.

ಸರ್ಕಾರದ ನಡವಳಿಕೆ ವಿರುದ್ಧ ತೀವ್ರ ವಿರೋಧ ಬಂದ ನಂತರ ಕಂದಾಯ ಸಚಿವ ಆರ್.ಅಶೋಕ್, ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಸೇರಿದಂತೆ ಕೆಲವು ಸಚಿವರು ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಮೀಕ್ಷೆ ಮತ್ತು ಪರಿಹಾರ ಕಾಮಗಾರಿ ಕೈಗೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ಇದುವರೆಗೂ ಪರಿಹಾರ ರೂಪದಲ್ಲಿ ಒಂದು ಪೈಸೆ ಬಂದಿಲ್ಲ. ನಮ್ಮಲ್ಲಿರುವ ಹಣದಲ್ಲೇ ಪರಿಹಾರ ಕಾಮಗಾರಿ ಕೈಗೊಳ್ಳುತ್ತಿದ್ದೇವೆ ಎಂದು ಕಂದಾಯ ಸಚಿವರು ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಬಳಿ 650 ಕೋಟಿಗೂ ಹೆಚ್ಚು ಹಣವಿದ್ದು, ಅದನ್ನು ಪರಿಹಾರ ಕಾಮಗಾರಿಗಳಿಗೆ ಬಳಕೆ ಮಾಡಿಕೊಳ್ಳಬಹುದೆಂದು ತಿಳಿಸಿದ್ದಾರೆ. ಮುಖ್ಯಮಂತ್ರಿಗಳು ಬುಧವಾರದಂದು, ನೆರೆ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಮುಖ್ಯಮಂತ್ರಿಯವರು ತಮ್ಮ ಕ್ಷೇತ್ರ ಶಿಕಾರಿಪುರದಲ್ಲಿದ್ದರು, ಸಚಿವರು ಮತ್ತು ಅಧಿಕಾರಿಗಳಿಗೆ ಪರಿಹಾರ ಕಾಮಗಾರಿ ಕೈಗೊಳ್ಳಲು ಸಲಹೆ ಸೂಚನೆ ನೀಡುತ್ತಿದ್ದಾರೆ. ಈ ಮಧ್ಯೆ ಮತ್ತೆ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವುಂಟಾ ಗಿದೆ. ಇದರಿಂದ ಇನ್ನೂ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಂಭವವಿದೆ.

 

 

 

Translate »