ಸರ್ಕಾರದ ನಿಲುವಿಗೆ ಹೈಕೋರ್ಟ್ ಗರಂ: ಪ್ರತ್ಯೇಕ ತನಿಖೆಗೆ  ನಿವೃತ್ತ ನ್ಯಾಯಮೂರ್ತಿ ಎ.ಎನ್.ಗೋಪಾಲಗೌಡರ ನೇಮಕ
News

ಸರ್ಕಾರದ ನಿಲುವಿಗೆ ಹೈಕೋರ್ಟ್ ಗರಂ: ಪ್ರತ್ಯೇಕ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ಎ.ಎನ್.ಗೋಪಾಲಗೌಡರ ನೇಮಕ

May 6, 2021

ಬೆಂಗಳೂರು, ಮೇ 5(ಕೆಎಂಶಿ)- ಕೊರೊನಾ ಸೋಂಕಿತರ ನೆರವಿಗೆ ಮಧ್ಯೆ ಪ್ರವೇಶಿಸಿರುವ ರಾಜ್ಯ ಹೈಕೋರ್ಟ್, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಚಾಟಿ ಬೀಸಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಸ್ವಯಂಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿ ಕೊಂಡಿರುವ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಹಾಗೂ ನ್ಯಾಯಮೂರ್ತಿ ಅರವಿಂದ್‍ಕುಮಾರ್ ಒಳಗೊಂಡ ವಿಶೇಷ ವಿಚಾರಣೆ ಪೀಠ ಇಂದು ರೋಗಿಗಳು ಅನುಭವಿಸುತ್ತಿರುವ ನೋವುಗಳನ್ನು ಪರಾ ಮರ್ಶಿಸಿ, ತಕ್ಷಣವೇ ಪ್ರತಿನಿತ್ಯ 1200 ಮೆಟ್ರಿಕ್ ಟನ್ ಆಕ್ಸಿಜನ್ ಅನ್ನು ರಾಜ್ಯ ಸರ್ಕಾರಕ್ಕೆ ಪೂರೈಸುವಂತೆ ಕೇಂದ್ರಕ್ಕೆ ಆದೇಶ ಮಾಡಿದೆ.
ಮೇ 3ರಂದು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 24 ಕೋವಿಡ್ ರೋಗಿಗಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾಸ್ಪತ್ರೆಗಳು ಹಾಗೂ ಜಿಲ್ಲಾಧಿಕಾರಿಗಳ ಆಕ್ಸಿಜನ್ ನಡಾವಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಕರ್ನಾಟಕ ಕಾನೂನು ಪ್ರಾಧಿಕಾರದ ಅಧ್ಯಕ್ಷ ಹಾಗೂ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎನ್. ಗೋಪಾಲ ಗೌಡ ನೇತೃತ್ವದಲ್ಲಿ ತನಿಖೆ ನಡೆಸುವಂತೆಯೂ ಆದೇಶಿಸಿದೆ. ಈ ಸಮಿತಿಯು ಮುಂದಿನ ಸೋಮವಾರದೊಳಗಾಗಿ ತನಿಖೆ ನಡೆಸಿ, ಪೀಠಕ್ಕೆ ವರದಿ ನೀಡಬೇಕು. ಸಮಿತಿಗೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಮುಖ್ಯ ಕಾರ್ಯದರ್ಶಿಯವರು ಒದಗಿಸಿಕೊಡಬೇಕೆಂದು ಪೀಠ ಆದೇಶಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೆಡೆ ನ್ಯಾಯಮೂರ್ತಿ ಬಿ.ಎ. ಪಾಟೀಲ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ, ರಾಜ್ಯ ಸರ್ಕಾರ ಆದೇಶ ಮಾಡಿದ ಬೆನ್ನಲ್ಲೇ ನ್ಯಾಯಾ ಲಯ ಇಂತಹ ತೀರ್ಮಾನ ಕೈಗೊಂಡಿದೆ.

ಎಲ್ಲಿ ಲೋಪವಾಗಿದೆ ಎಂಬುದನ್ನು ಪತ್ತೆ ಹಚ್ಚಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಉದ್ದೇಶ ದಿಂದ ನ್ಯಾಯಾಲಯ ಇಂತಹ ತೀರ್ಮಾನ ಕೈಗೊಂಡಂತಿದೆ. ರಾಜ್ಯ ಸರ್ಕಾರ 1765 ಮೆಟ್ರಿಕ್ ಟನ್ ಆಮ್ಲಜನಕವನ್ನು ಪ್ರತಿನಿತ್ಯ ಪೂರೈಸುವಂತೆ ಕೇಂದ್ರವನ್ನು ಕೋರಿದೆ. ಆದರೆ ಸರಬರಾಜು ಆಗುತ್ತಿರುವುದು ಕೇವಲ 850 ಟನ್ ಮಾತ್ರ. ಮತ್ತೆ ಹೆಚ್ಚುವರಿ ಯಾಗಿ 100 ಟನ್ ನೀಡುವುದಾಗಿ ಕೇಂದ್ರ ನ್ಯಾಯಾಲಯದ ಗಮನಕ್ಕೆ ತಂದಿತ್ತು. ಆದರೆ ಇದನ್ನು ಒಪ್ಪದ ನ್ಯಾಯಾಲಯ ತಕ್ಷಣ 1250 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಸುವಂತೆ ಸೂಚಿಸಿದೆ. ಅಲ್ಲದೆ ಇನ್ನೊಂದು ವಾರದಲ್ಲಿ ರಾಜ್ಯ ಸರ್ಕಾರ ತಮಗೆ ಪ್ರತಿನಿತ್ಯ ಎಷ್ಟು ಆಕ್ಸಿಜನ್ ಬೇಕೆಂದು ವರದಿ ನೀಡಲಿದೆ. ಆ ವರದಿಯನ್ನು ಕೇಂದ್ರ ಮಾನ್ಯ ಮಾಡಬೇಕೆಂದು ಆದೇಶ ಮಾಡಿದೆ. ಇದರ ಜೊತೆಗೆ ರೋಗಿಗಳಿಗೆ ಅಗತ್ಯವಾಗಿರುವ ರೆಮ್ಡಿಸಿವಿರ್ ಚುಚ್ಚುಮದ್ದು ಗಳು ರಾಜ್ಯಕ್ಕೆ ಪ್ರತಿನಿತ್ಯ 44 ಸಾವಿರ ವಾಯಿಲ್ಸ್ ಬೇಕಾಗಿದೆ. ಆದರೆ ಸರಬರಾಜು ಆಗುತ್ತಿರುವುದು 18 ಸಾವಿರ ಮಾತ್ರ. ಇದನ್ನು 2-3 ದಿನಗಳಲ್ಲಿ ರಾಜ್ಯಕ್ಕೆ ಹೆಚ್ಚುವರಿ ವಾಯಿಲ್ಸ್ ನೀಡುವುದಾಗಿ ಕೇಂದ್ರ ನ್ಯಾಯಾಲಯಕ್ಕೆ ಭರವಸೆ ನೀಡಿದೆ. ರೋಗಿಗಳಿಗೆ ಹಾಸಿಗೆ ಹಂಚಿಕೆ ಸಂಬಂಧಿಸಿದಂತೆ ನಾಳೆ ನ್ಯಾಯಾಲಯ ಮಹತ್ವದ ತೀರ್ಪು ನೀಡಲಿದೆ.

Translate »